ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕ ವ್ಯವಸ್ಥೆ ಬೇಕೆಂದು ಕೇಂದ್ರ ಸರಕಾರ ಎಲೆಕ್ಟೋರಲ್ ಬಾಂಡ್‌ಗಳನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅದಕ್ಕೆ ಪೂರಕವಾಗಿ 2013ರಿಂದ 2017ನೇ ಸಾಲಿನ ವರೆಗೆ ಪಕ್ಷಗಳು ಸ್ವೀಕರಿಸಿದ ದೇಣಿಗೆಯ ವಿವರವೂ ಬಹಿರಂಗವಾಗಿದೆ.
ಸದ್ಯ ಅಧಿಕಾರದಲ್ಲಿರುವ ಬಿಜೆಪಿಗೆ 2016-17ನೇ ಸಾಲಿನಲ್ಲಿ ಎಲೆಕ್ಟೋರಲ್ ಟ್ರಸ್ಟ್‌ಗಳಿಂದ ಸಲ್ಲಿಕೆಯಾದ ದೇಣಿಗೆಯೆಷ್ಟು ಗೊತ್ತೇ? ಬರೋಬ್ಬರಿ 290.22 ಕೋಟಿ ರೂ. ಅಂದರೆ, ಟ್ರಸ್ಟ್ ನೀಡಿರುವ ಒಟ್ಟಾರೆ ದೇಣಿಗೆಯ ಶೇ. 89ರಷ್ಟು. ಇತರ ಎಲ್ಲ ಪಕ್ಷಗಳಿಗೆ ಸಂದಿರುವ ಒಟ್ಟಾರೆ ದೇಣಿಗೆ ಮೊತ್ತ 35.05 ಕೋಟಿ ರೂ.
ಅಸೋಸಿಯೇಶನ್ ಆಫ್ ಡೆಮಾ ಕ್ರಾಟಿಕ್ ರಿಫಾಮ್ಸ್ (ಎಡಿಆರ್) ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬಹಿರಂಗ ವಾಗಿದೆ. 2013ರಿಂದ 2017ರ ಅವಧಿಯಲ್ಲಿ ಒಂಬತ್ತು ನೋಂದಾಯಿತ ಚುನಾವಣಾ ಟ್ರಸ್ಟ್‌ಗಳು 637.54 ಕೋಟಿ ರೂ. ಮೊತ್ತವನ್ನು ವಿವಿಧ ಪಕ್ಷಗಳಿಗೆ ದೇಣಿಗೆಯನ್ನಾಗಿ ನೀಡಿವೆ ಎಂದು ಎಡಿಆರ್ ತಿಳಿಸಿದೆ. ಇತರ ಆರು ಟ್ರಸ್ಟ್‌ಗಳು 325.27 ಕೋಟಿ ರೂ. ಮೊತ್ತವನ್ನು ದೇಣಿಗೆಯನ್ನಾಗಿ ನೀಡಿವೆ.
ಪ್ರುಡೆಂಟ್ ಚುನಾವಣಾ ಟ್ರಸ್ಟ್ 2016-17ನೇ ಸಾಲಿನಲ್ಲಿ ಬಿಜೆಪಿಗೆ 252.22 ಕೋಟಿ ರೂ. ನೀಡಿದೆ. ಕಾಂಗ್ರೆಸ್‌ಗೆ 14.90 ಕೋಟಿ ರೂ., ಆಮ್ ಆದ್ಮಿ ಪಕ್ಷಕ್ಕೆ ಕಡಿಮೆ ಮೊತ್ತ ಅಂದರೆ 1 ಕೋಟಿ ರೂ. ದೇಣಿಗೆ ನೀಡಿದೆ. ಆರ್‌ಜೆಡಿಗೆ 10 ಲಕ್ಷ ರೂ. ಸಿಕ್ಕಿದೆ.
2016-17ನೇ ಸಾಲಿಗೆ ಸಂಬಂಧಿಸಿದಂತೆ ಸುರೇಶ್ ಕೊಟಕ್ ಮತ್ತು ಅನಲ್ಜಿತ್ ಸಿಂಗ್ ಎಂಬ ಇಬ್ಬರು ದಾನಿಗಳ ವಿವರ ಸಿಕ್ಕಿದೆ. ಕೊಟಕ್ ಅವರು ನಿರ್ವಾಚಕ್ ಎಲೆಕ್ಟೋರಲ್ ಟ್ರಸ್ಟ್‌ಗೆ 18.5 ಕೋಟಿ ರೂ. ದೇಣಿಗೆ ನೀಡಿ ಐದನೇ ಅತ್ಯಂತ ದೊಡ್ಡ ದಾನಿಯಾಗಿ ಹೊರ ಹೊಮ್ಮಿದ್ದಾರೆ. ಇನ್ನು ಸಿಂಗ್ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್‌ಗೆ 1 ಕೋಟಿ ರೂ. ನೀಡಿದ್ದಾರೆ. ಟಾಪ್ 10 ದಾನಿಗಳು ಒಟ್ಟು 190. 60 ಕೊಟಿ ರೂ. ಮೊತ್ತವನ್ನು ವಿವಿಧ ಟ್ರಸ್ಟ್‌ಗಳಿಗೆ ನೀಡಿದ್ದಾರೆ. ಕೇಂದ್ರದ ನಿಯಮ ಪ್ರಕಾರ ಎಲೆಕ್ಟೋರಲ್ ಟ್ರಸ್ಟ್‌ಗಳು ತಮ್ಮ ಒಟ್ಟು ಆದಾಯದ ಶೇ.95ರಷ್ಟನ್ನು ನೋಂದಾಯಿತ ಪಕ್ಷಕ್ಕೆ ದೇಣಿಗೆಯಾಗಿ ನೀಡಬೇಕು.