Advertisement
ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವ ಕೆಲವೊಂದು ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು ಮತ್ತು ಮೂಲ ಕಾರ್ಯಕರ್ತರನ್ನು ಕಡೆಗಣಿಸದಂತೆ ನೋಡಿಕೊಳ್ಳಲಾಗುವುದು. ಈ ವಿಚಾರವನ್ನು ನಮಗೆ ಬಿಟ್ಟು ಪಕ್ಷ ಸಂಘಟಿಸುವ ಕೆಲಸ ಮಾಡಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯನ್ನು ಮುರಳೀಧರರಾವ್ ಅಸಮಾಧಾನಿತ ಮುಖಂಡರಿಗೆ ತಿಳಿಸಿದ್ದಾರೆ. ಇದಕ್ಕೆ ಅಸಮಾಧಾನಿತ ಮುಖಂಡರೂ ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮುರಳೀಧರರಾವ್ ಅವರೊಂದಿಗಿನ ಮಾತುಕತೆ ವೇಳೆ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಆದರೆ, ಅವರ ಜತೆಗಿರುವ ಸಂಸದೆ ಶೋಭಾ ಕರಂದ್ಲಾಜೆ, ಬಿ.ಜೆ.ಪುಟ್ಟಸ್ವಾಮಿ ಮತ್ತಿತರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ದೂರುಗಳ ಸುರಿಮಳೆಯನ್ನೇ ಸುರಿಸಿದರು ಎಂದು ಹೇಳಲಾಗಿದೆ.
Related Articles
Advertisement
ಎಲ್ಲಾ ಅಹವಾಲುಗಳನ್ನು ಸಾವಧಾನದಿಂದಲೇ ಕೇಳಿದ ಮುರಳೀಧರರಾವ್, ನಿಮ್ಮ ಬೇಡಿಕೆಗಳ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಅದನ್ನು ಪಕ್ಷದ ಒಳಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಬಹಿರಂಗಗೊಳಿಸಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಸಮಾಧಾನಿತ ಮುಖಂಡರು, ಆರಂಭದಲ್ಲೇ ನಮ್ಮ ಬೇಡಿಕೆಗಳನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೆವು. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ, ಅಸಮಾಧಾನ ಶಮನಕ್ಕೆ ಫೆ.10ರ ಗಡುವು ವಿಧಿಸಿದ್ದ ಅಮಿತ್ ಶಾ ಅವರು ಅದಕ್ಕಾಗಿ ಸಮಿತಿ ರಚಿಸಿದ್ದರು. ಇದುವರೆಗೆ ಸಮಿತಿ ಸಭೆ ಸೇರಿ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಪ್ರತಿಕ್ರಿಯಿಸಿದರು.
ಬಳಿಕ ಮಾತನಾಡಿದ ಮುರಳೀಧರರಾವ್, “ನಾನೇ ಖುದ್ದಾಗಿ ನಿಮ್ಮ ಸಮಸ್ಯೆ ಆಲಿಸಿದ್ದು, ಇದನ್ನು ಅಮಿತ್ ಶಾ ಅವರ ಗಮನಕ್ಕೆ ತರುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಾನಿಯಾಗುವಂತಹ ಕೆಲಸಕ್ಕೆ ಕೈಹಾಕಬೇಡಿ. ಒಂದು ವೇಳೆ ಆ ರೀತಿ ಆದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಎಲ್ಲಾ ಅಸಮಾಧಾನಿತ ಮುಖಂಡರು ಒಪ್ಪಿದರು ಎಂದು ಮೂಲಗಳು ಹೇಳಿವೆ.
ಸಭೆಯಲ್ಲಿ ಸೊಗಡು ಶಿವಣ್ಣ, ನಂದೀಶ್, ಸೋಮಣ್ಣ ಬೇವಿನಮರದ, ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ, ನಿರ್ಮಲ್ ಕುಮಾರ್ ಸುರಾನಾ, ಭಾನುಪ್ರಕಾಶ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಸಂತೋಷ್-ಮುಕುಂದ್ ಚರ್ಚೆಇನ್ನೊಂದೆಡೆ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರು ಆರ್‌ಎಸ್‌ಎಸ್ ಮುಖಂಡ ಸಿ.ಆರ್.ಮುಕುಂದ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತಕ್ಕೆ ಸಂತೋಷ್ ಅವರೇ ಕಾರಣ ಎಂದು ಬಿ.ಎಸ್.ಯಡಿಯೂರಪ್ಪ ಅವರು ಆರೋಪಿಸಿದ ಬಳಿಕ ಇವರಿಬ್ಬರು ಇದೇ ಪ್ರಥಮ ಬಾರಿಗೆ ಒಟ್ಟಾಗಿ ಸಮಾಲೋಚನೆ ನಡೆಸಿದ್ದು, ಮಾತುಕತೆ ಸಾಕಷ್ಟು ಕುತೂಹಲ ಕೆರಳಿಸಿದೆ. ಆರ್‌ಎಸ್‌ಎಸ್ ಮೂಲಗಳ ಪ್ರಕಾರ, ಸಂತೋಷ್ ಅವರು ಆರ್‌ಎಸ್‌ಎಸ್ ಮೂಲಕ ಬಿಜೆಪಿ ಪದಾಧಿಕಾರಿಯಾಗಿ ನೇಮಕಗೊಂಡವರು. ಸಂಘಟನೆ ಮತ್ತು ಪಕ್ಷದ ಮಧ್ಯೆ ಕೊಂಡಿಯಾಗಿರುವವರು. ಹೀಗಾಗಿ, ಅವರು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿಯಾಗುವುದು ಸಾಮಾನ್ಯ. ಇದರಲ್ಲಿ ವಿಶೇಷವೇನೂ ಇಲ್ಲ.