ತಾಳಿಕೋಟೆ: ಭಾರತೀಯ ಜನತಾ ಪಕ್ಷದ ಬೆಳವಣಿಗೆಗಾಗಿ ದುಡಿದಿರುವ ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದೇವೆ ಹೊರತು ಅಸಮಾಧಾನಗೊಂಡು ಪಕ್ಷ ಬಿಡುವ ನಿರ್ಧಾರ ನಮ್ಮದಲ್ಲ ಎಂದು ಪುರಸಭೆ ಬಿಜೆಪಿ ಸದಸ್ಯ ಮಾನಸಿಂಗ್ ಕೊಕಟನೂರ ಹೇಳಿದರು.
ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬೆಳವಣಿಗೆಗೆ ಶ್ರಮಿಸಿದ ಮುದ್ದೇಬಿಹಾಳ ಕ್ಷೇತ್ರದ ನಾಯಕರಗೆ ಟಿಕೆಟ್ ನೀಡಬೇಕೆಂಬುವುದು ನಮ್ಮ ಒತ್ತಾಸೆಯಾಗಿದೆ. ವಲಸಿಗರಿಗೆ ಮಣೆ ಹಾಕದೇ ಪಕ್ಷದ ನಿಷ್ಠಾವಂತರಿಗೆ ಗುರುತಿಸುವಂತ ಕಾರ್ಯವಾಗಬೇಕು ಎಂದರು.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆ ಗೆಲ್ಲುವ ತಾಕತ್ತು ನೋಡಿ ಪಕ್ಷಕ್ಕೆ ಸೇರ್ಪಡೆಗೊಂಡವರಿಗೆ ಮಣೆ ಹಾಕಬಾರದು. ಈಗಾಗಲೇ ರಾಜ್ಯ ನಾಯಕರ ಮೇಲೆಯೂ ಕಾರ್ಯಕರ್ತರು ಒತ್ತಡ ಹಾಕಿದ್ದೇವೆ. ಇದನ್ನೇ ರಾಜಕೀಯ ಲಾಭವನ್ನಾಗಿ ಪಡೆದುಕೊಳ್ಳಲು ಕೆಲವು ಅನ್ಯ ಪಕ್ಷದವರು ಉಹಾಪೋಹ ಸೃಷ್ಟಿ ಮಾಡಿ ಬಿಜೆಪಿ ಕಾರ್ಯಕರ್ತರಲ್ಲಿ ಕೆಲವರು ಅಸಮಾಧಾನಗೊಂಡು ಬಿಜೆಪಿ ಬಿಟ್ಟು ಮತ್ತೂಂದು ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಎಬ್ಬಿಸಿರುವ ಸುದ್ದಿ ಸುಳ್ಳು. ನಮ್ಮನ್ನು ರಾಜಕೀಯವಾಗಿ ಬೆಳೆಸಿದ ನಾಯಕರು ಪಕ್ಷ ನಿಷ್ಠೆ ಪಾಠ ಕಲಿಸಿದ್ದಾರೆ ವಿನಃ ಪಕ್ಷಕ್ಕೆ ದ್ರೋಹ ಬಗೆಯುವಂತಹ ಪಾಠ ಕಲಿಸಿಲ್ಲ. ಇದನ್ನು ವಿರೋಧ ಪಕ್ಷದವರು ಅರ್ಥಮಾಡಿಕೊಳ್ಳಬೇಕೆಂದರು.
ಬಿಜೆಪಿ ಸಾಮಾಜಿಕ ಜಾಲತಾಣ ಜಿಲ್ಲಾ ಸಮಿತಿ ಸದಸ್ಯ ಸಂಗಮೇಶ ಬಳಿಗಾರ ಮಾತನಾಡಿ, ನಾವು ಬಿಜೆಪಿ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ ಬೆಳೆದು ಬಂದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂಬ ಉದ್ದೇಶ ಹೊಂದಿದ್ದೇವೆ. ಅನ್ಯ ಪಕ್ಷದವರು ಸೃಷ್ಟಿಸಿರುವ ವದಂತಿಗಳಿಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವ ಹಾಗೆ ಮುದ್ದೇಬಿಹಾಳದಲ್ಲಿಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸುವಂತಹ ಕಾರ್ಯ ಎಲ್ಲ ಕಾರ್ಯಕರ್ತರು ಮಾಡಲಿದ್ದೇವೆಂದರು.
ಬಿಜೆಪಿ ಯುವ ಘಟಕದ ತಾಲೂಕು ಪ್ರಧಾನ ಕಾರ್ಯದರ್ಶಿ ಮುನ್ನಾ ಠಾಕೂರ, ತಾಲೂಕು ಉಪಾಧ್ಯಕ್ಷ ಪ್ರಮೋದ ಕೋರಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದಂತ ಬಸನಗೌಡ ಪಾಟೀಲ (ಯತ್ನಾಳ) ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾಗಿದೆ. ಅವರೂ ಕೂಡಾ ಈಗಾಗಲೇ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಸೂಚನೆಗಳನ್ನು ಕೊಟ್ಟಿದ್ದಾರೆ. ಪಕ್ಷವು ಯಾರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸುತ್ತದೆಯೋ ಆ ವ್ಯಕ್ತಿಯನ್ನು ಆಯ್ಕೆಗೊಳಿಸುವಂತಹ ಕಾರ್ಯದಲ್ಲಿ ಮುಂದಾಗಿರಿ. ನಮ್ಮ ಉದ್ದೇಶ ಜಿಲ್ಲೆಯ 8 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಬೇಕು.
ಮುದ್ದೇಬಿಹಾಳ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದಂತವರಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬೆಂಬಲವಾಗಿ ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಹೇಳಿದ್ದಾರೆ. ಅವರ ಹಾಗೂ ಸ್ಥಳೀಯ ನಾಯಕರ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದೇವೆ ಎಂದರು.
ಬಿಜೆಪಿ ಕಾರ್ಯಕಾರಣಿ ಸದಸ್ಯ ಬಸನಗೌಡ ಮಾಲಿಪಾಟೀಲ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ನದಿಂ ಕಡು, ಗಂಗಾರಾಮ ಕೊಕಡನೂರ, ಸಿದ್ದನಾಥ ಸಾಳುಂಕೆ, ಮಂಜು ಬಡಿಗೇರ, ಹರೀಶ ಮೂಲಿಮನಿ, ಸಿತಾರಾಮ ಮೂಲಿಮನಿ, ವೀರೇಶ ಸಾಸನೂರ, ಸೋಹನ ಹಜೇರಿ, ರಘುಸಿಂಗ್ ಹಜೇರಿ, ಶ್ರವಣ ಹಜೇರಿ, ನಂದಯ್ಯ ಮಠ, ರಾಜು ಕಟ್ಟಿಮನಿ, ರಾಘು ಸೋನಾರ, ರೋಹಿತ ನರಗುಂದ ಇದ್ದರು.