ಬೆಂಗಳೂರು: ಭಾರೀ ಸದ್ದು ಮಾಡಿದ್ದ ಲ್ಯಾಪ್‌ಟಾಪ್ ಖರೀದಿ ಟೆಂಡರ್ ಅವ್ಯವಹಾರದಲ್ಲಿ ಉನ್ನತ ಶಿಕ್ಷಣ ಸಚಿವ ರಾಯರಡ್ಡಿಯವರಿಗೆ ಸದನ ಸಮಿತಿ ಕ್ಲೀನ್ ಚೀಟ್ ನೀಡಿರುವ ಬೆನ್ನಲ್ಲೆ ಸದನ ಸಮಿತಿಯ ಬಿಜೆಪಿ, ಜೆಡಿಎಸ್ ಸದಸ್ಯರು ತನಿಖೆ ಪುನರ್ ಆರಂಭಿಸುವಂತೆ ಮೇಲ್ಮನೆ ಸಭಾಪತಿಯವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಅದರಂತೆ ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಿಂದ 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಸಲು ಟೆಂಡರ್ ಪ್ರಕ್ರಿಯೆಗೆ ಸಿದ್ಧತೆ ನಡೆಸಿದ್ದರು.
ಲ್ಯಾಪ್‌ಟಾಪ್‌ನ ಮೌಲ್ಯ ಹಾಗೂ ಕಾನ್ಫಿàಗರೇಷನ್ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಅಜಯ್ ನಾಗಭೂಷಣ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ಆಗಿರುವ ಸಾಧ್ಯತೆ ಇದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು.
ವಿರೋಧ ಪಕ್ಷದವರು ಇದನ್ನೇ ಗಂಭೀರವಾಗಿ ತೆಗೆದುಕೊಂಡು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯಾರೆಡ್ಡಿಯವರ ವಿರುದ್ಧ ಆರೋಪ ಮಾಡಿದ್ದರು. ಲ್ಯಾಪ್‌ಟಾಪ್ ಖರೀದಿ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬೆಳಗಾವಿ ಅಧಿವೇಶನದಲ್ಲೂ ಆಗ್ರಹಿಸಿದ್ದರು. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ, ಮೇಲ್ಮನೆ ಸದಸ್ಯ ಕೆ.ಸಿ.ಕೊಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚನೆ ಮಾಡಿತ್ತು. ಮೇಲ್ಮನೆ ಸದಸ್ಯರಾದ ಐವನ್ ಡಿಸೋಜಾ, ರಘುನಾಥ ರಾವ್ ಮಲ್ಕಾಪುರೆ, ಶರಣಪ್ಪ ಮಟ್ಟೂರು, ರಮೇಶ್ ಬಾಬು, ಅರುಣ್ ಶಹಪುರ ಹಾಗೂ ಪ್ರಸನ್ನ ಕುಮಾರ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿತ್ತು.
ತನಿಖೆ ನಡೆಸಿದ ಸದನ ಸಮಿತಿಯು ಸಚಿವ ಬಸವರಾಜ ರಾಯರೆಡ್ಡಿಯವರಿಗೆ ಕ್ಲೀನ್ ಚೀಟ್ ನೀಡಿ, ವರದಿ ಸಲ್ಲಿಸಿತ್ತು. ಆದರೆ, ಇದಕ್ಕೆ ಬಿಜೆಪಿ ಸದಸ್ಯರಾದ ರಘುನಾಥ ರಾವ್ ಮಲ್ಕಾಪುರೆ, ಅರುಣ್ ಶಹಪುರ ಹಾಗೂ ಜೆಡಿಎಸ್ ಸದಸ್ಯ ರಮೇಶ್ ಬಾಬು ಆಕ್ಷೇಪಣಾ ಪತ್ರವನ್ನು ನೀಡಿದ್ದರು. ಆದರೂ, ಸದನ ಸಮಿತಿ ಅಧ್ಯಕ್ಷರಾದ ಕೊಂಡಯ್ಯ ಅವರು ಹಳೇ ಟೆಂಡರ್ ಪ್ರಕ್ರಿಯೆಯನ್ನೇ ಮುಂದುವರಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದರು.
ಇದರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರ್ ಮೂರ್ತಿಯವರಿಗೆ ಮುಂದಿನ ವಾರ ಮನವಿ ಸಲ್ಲಿಸಿ, ಟೆಂಡರ್ ಅವ್ಯವಹಾರದ ಪುನರ್ ತನಿಖೆಗೆ ಒತ್ತಾಯಿಸಲು ತೀರ್ಮಾನಿಸಿದ್ದಾರೆ.
ಲ್ಯಾಪ್‌ಟಾಪ್ ಖರೀದಿ ಸಂಬಂಧ ಟೆಕ್ನಿಕಲ್ ಅಡ್ವೆ„ಸರಿ ಪ್ಯಾನಲ್(ಟಿಎಪಿ)ನಿಂದ ಹೊಸದಾಗಿ ಮಾರ್ಗಸೂಚಿ ಪಡೆಯಬೇಕು. ಅಥವಾ ಈ ಹಿಂದೆ ಟಿಎಪಿ ಶಿಫಾರಸ್ಸು ಮಾಡಿದ್ದ ಇಂಟೆಲ್ ಕೊರ್ ಐ3-6006ಯು/ಆ್ಯಂಡ್ ಎ8-7410 ಲ್ಯಾಪ್‌ಟಾಪ್‌ಗ್ಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂಬುದು ನಮ್ಮ ಕೋರಿಕೆಯಾಗಿದೆ. ಈ ಸಂಬಂಧ ಮೇಲ್ಮನೆ ಸಭಾಪತಿಯವರಿಗೆ ಪುನರ್ ಮನವಿ ಸಲ್ಲಿಸಲಿದ್ದೇವೆ ಎಂದು ಸಮಿತಿಯ ಸದಸ್ಯರಾಗಿದ್ದ ಅರುಣ್ ಶಹಪುರ್ ಅವರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.