Advertisement

ಇನ್ನೆರಡು ದಶಕ ಬಿಜೆಪಿ ಆಡಳಿತ ಅಬಾಧಿತ

02:23 PM Apr 08, 2022 | Team Udayavani |

ಗದಗ: ಮುಂದಿನ 20 ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿರುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಭವಿಷ್ಯ ನುಡಿದರು.

Advertisement

ತಾಲೂಕಿನ ಲಕ್ಕುಂಡಿಯ ಮಾರುತಿ ದೇವಸ್ಥಾನದ ನಾಗದೇವರ ವೇದಿಕೆಯಲ್ಲಿ ಬಿಜೆಪಿ ಮಂಡಲ ಏರ್ಪಡಿಸಿದ್ದ 42 ನೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 1977ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆದ್ವಾನಿಯವರ ನೇತೃತ್ವದಲ್ಲಿ ಬಿಜೆಪಿ ಸ್ಥಾಪನೆಗೊಂಡಿದೆ.

ರಾಷ್ಟ್ರೀಯತೆ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ನಿರಂತರವಾಗಿ ಅಧಿಕ ಸ್ಥಾನಗಳನ್ನು ಗೆಲುತ್ತಾ ಬಂದಿದೆ. ಇನ್ನೂ ಪಕ್ಷ ಕಟ್ಟಿ ಬೆಳೆಸಿದ ಹಲವಾರು ನಾಯಕರ ತ್ಯಾಗದಿಂದ ಮೋದಿಜಿಯವರ ದಿಟ್ಟ ಆಡಳಿತದಿಂದ ಇಂದು ದೇಶದ ತುಂಬೆಲ್ಲಾ ಕಮಲ ಅರಳಿ ನಿಂತಿದೆ. ಯಾವುದೇ ಜಾತಿ ಭೇದವಿಲ್ಲದೇ ಪಕ್ಷ ಹೆಮ್ಮರವಾಗಿ ಬೆಳೆಯುತ್ತಿದೆ. ಡಾ| ಅಬ್ದುಲ್‌ ಕಲಾಂ, ರಾಮನಾಥ್‌ ಕೋವಿಂದ ಅವರಂತಹ ಜ್ಞಾನಿಗಳನ್ನು ದೇಶದ ರಾಷ್ಟ್ರಪತಿಯನ್ನಾಗಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದರು.

70 ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ ಪಕ್ಷ ಕೇವಲ ತುಷ್ಠೀಕರಣ ರಾಜಕಾರಣ ಮಾಡುತ್ತಾ ಹಿಂದುಳಿದ ಪ್ರತಿಭಾನ್ವಿತ ನಾಯಕರನ್ನು ಗುರುತಿಸದಿರುವುದು ದೇಶದ ದೌರ್ಭಾಗ್ಯ ಎಂದು ವಾಗ್ಧಾಳಿ ನಡೆಸಿದರು.

ಕೊರೊನಾದಂತಹ ಸಂಕಷ್ಟದ ಕಾಲವನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಜಾಲ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಸೇವೆಗಳ ಉನ್ನತೀಕರಣ, ಕೈಗಾರಿಕೆಗಳ ವಿಸ್ತರಣೆ, ಮಾಹಿತಿ ಮತ್ತು ತಂತ್ರಜ್ಞಾ, ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ ಎಂದು ವಿವರಿಸಿದರು.

Advertisement

ಬಿಜೆಪಿಯ ಹಿರಿಯ ಮುಖಂಡ ಎಂ.ಎಸ್‌. ಕರಿಗೌಡ್ರ ಮಾತನಾಡಿ, 1951ರಲ್ಲಿ ದೀನದಯಾಳ ಉಪಾಧ್ಯಯ ಹಾಗೂ ಶ್ಯಾಮಸುಂದರ ಮುಖರ್ಜಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಜನಸಂಘದ ನಿರಂತರ ಹೋರಾಟದ ನಂತರ 1977 ರಲ್ಲಿ ಬಿಜೆಪಿಯಾಗಿ ಪರಿವರ್ತನೆಯಾಯಿತು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸ್ಥಾಪನೆಯಾದ ಪಕ್ಷ ನಿರಂತರವಾಗಿ ಗೆಲುತ್ತ ಬಂದಿದೆ. ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ತೋರಿಸಿದೆ ಎಂದು ಹೇಳಿದರು.

ಮಾಜಿ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳನ್ನೊಳಗೊಂಡ ಶ್ರೀಕೃಷ್ಣನ ನುಡಿಗಳನ್ನೇ ಮೈಗೂಡಿಸಿಕೊಂಡಿರುವ ಬಿಜೆಪಿ ಇಂದು 42 ವಸಂತಗಳನ್ನು ಪೂರೈಸಿ ಪ್ರಪಂಚದಲ್ಲಿಯೇ ದೊಡ್ಡ ಪಕ್ಷವಾಗಿದೆ. ರಾಷ್ಟ್ರೀಯ ಮನೋಭಾವನೆಯನ್ನೇ ತುಂಬಿಕೊಂಡು ಬಂದಿರುವ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್‌ ಪಕ್ಷ ಇಂದು ತನ್ನ ಸ್ವಾರ್ಥದಿಂದ ಜನರಿಂದ ದೂರವಾಗಿದೆ ಎಂದರು.

ಗ್ರಾಪಂ ಸದಸ್ಯರಾದ ಮಂಜುನಾಥ ಗುಡಸಲಮನಿ, ರೋಷನಬಿ ನದಾಫ, ಗಂಗವ್ವ ಪೂಜಾರ, ಫಕ್ಕೀರವ್ವ ಬೇಲೇರಿ, ಮಾಜಿ ಸದಸ್ಯರಾದ ಅಲ್ಲಿಸಾಬ ನದಾಫ, ಅಣ್ಣಪ್ಪ ಬಸ್ತಿ ಅವರು ಕಾಂಗ್ರೆಸ್‌ ತೊರೆದು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾದರು. ಲಕ್ಕುಂಡಿ ಬಿಜೆಪಿ ಮಂಡಲದ ಅಧ್ಯಕ್ಷ ನಿಂಗಪ್ಪ ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು.

ಗದಗ ಬೆಟಗೇರಿ ನಗರಸಭಾ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಮುಖಂಡರಾದ ವಸಂತ ಮೇಟಿ, ಎಸ್‌.ಬಿ.ಕಲಕೇರಿ, ಅಂದಪ್ಪ ತಿಮ್ಮಾಪೂರ, ಗ್ರಾಪಂ ಅಧ್ಯಕ್ಷ ಶ್ಯಾಮಸುಂದರ ಡಂಬಳ, ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಲಕ್ಕುಂಡಿ ಮಂಡಲ ಎಸ್‌ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮುಳ್ಳಾಳ, ಅಲ್ಪ ಸಂಖ್ಯಾತರ ಅಧ್ಯಕ್ಷ ಮಹಮ್ಮದ ರಫೀಕ ಹುಬ್ಬಳ್ಳಿ, ಪ್ರಮುಖರಾದ ಕರಿಯಪ್ಪ ರವಳ್ಳೋಜಿ, ಗ್ರಾಪಂ ಸದಸ್ಯರಾದ ರೇವಣಸಿದ್ದಪ್ಪ ಮುಳಗುಂದ, ಕುಬೇರಪ್ಪ ಬೆಂತೂರ, ಬಸವರಾಜ ಹಟ್ಟಿ, ರೋಷನಬಿ ನದಾಫ, ಫಕ್ಕೀರವ್ವ ಬೇಲೇರಿ, ಅಮೀನಾ ಹುಬ್ಬಳ್ಳಿ, ಮಂಜುನಾಥ ಗುಡಸಲಮನಿ, ವಿರುಪಾಕ್ಷಿ ಬೆಟಗೇರಿ,ಲಕ್ಷ್ಮವ್ವ ಭಜಂತ್ರಿ, ವೀರಣ್ಣ ಚಕ್ರಸಾಲಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next