ಕೆಂಗೇರಿ: “ಶಾಲೆಗಳು ಮಕ್ಕಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸಿರುವುದರಿಂದ, ಪೋಷಕರು ಕೇವಲ ವೃತ್ತಿ ಭವಿಷ್ಯವನ್ನು ಮಾತ್ರ ಯೋಚಿಸುತ್ತಿರುವುದರಿಂದ ಮಕ್ಕಳಲ್ಲಿ ಕ್ರೀಡಾಸಕ್ತಿ ಕುಂದುತ್ತಿದೆ. ಹೀಗಾಗಿ ದೇಶಕ್ಕೆ ಕ್ರೀಡಾ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ,’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ವಿಷಾಧ ವ್ಯಕ್ತಪಡಿಸಿದರು.
ಚನ್ನೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹೊನ್ನಗನಹಟ್ಟಿಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದ ಅವರು, “ಶಾಲಾ ದಿನಗಳಲ್ಲೇ ಮಕ್ಕಳಲ್ಲಿ ಕ್ರೀಡಾಸಕ್ತಿಯನ್ನು ಬೆಳೆಸುವ ಉದ್ದೇಶದಿಂದ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ.
ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಅತ್ಯಾಧುನಿಕ ಸಾಧನಗಳನ್ನೊಳಗೊಂಡ ಕ್ರೀಡಾಂಗಣ ನಿರ್ಮಿಸಿ ಕ್ರೀಡೆಗೆ ಉತ್ತೇಜನ ನೀಡುವುದು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ,’ ಎಂದು ಅವರು ತಿಳಿಸಿದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ “18 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಕ್ರೀಡಾಂಗಣಕ್ಕೆ ಮೂಲ ಸೌಲಭ್ಯ ಒದಗಿಸಿದರೆ ರಾಷ್ಟ್ರದಲ್ಲಿಯೇ ಅತ್ಯುತ್ತಮ ಕ್ರೀಡಾಂಗಣವಾಗಲಿದೆ. ದೇಶದ ಕ್ರೀಡಾಪಟುಗಳು ಇಲ್ಲಿಗೆ ಆಗಮಿಸಿ ತರಬೇತಿ ಪಡೆಯುವಂತಾಗಲಿ,’ ಎಂದು ಆಶಿಸಿದರು.
ಶಾಸಕ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ.ಮುನಿರಾಜು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ, ಬೆಂಗಳೂರು ಹಣ್ಣು ಮತ್ತು ತರಕಾರಿ ವಿಶೇಷ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ಚನ್ನೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ರಾಧಿಕಾ ಸಿ.ರಮೇಶ್, ತಾ.ಪಂ. ಅಧ್ಯಕ್ಷೆ ಗೀತಾಆನಂದ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.