ಮಾಗಡಿ: ತಾಲೂಕಿನಲ್ಲಿ ಕೋವಿಡ್-19 ಸವಾಲಾಗಿಲ್ಲ, ತೀರದ ನೀರಿನ ಸಮಸ್ಯೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಶಾಸಕ ಎ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಕೋವಿಡ್-19 ಸೋಂಕು ತಡೆ ಕುರಿತು ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಡಿಒಗಳು, ನೀರಿನ ಸಮಸ್ಯೆಯಿರುವ ಪಂಚಾಯಿತಿ ಪಟ್ಟಿ ನೀಡಿದರೆ ಜಿಪಂ ಇಒ ಅವರೊಂದಿಗೆ ಚರ್ಚಿಸಿ, ಟಾಸ್ಕ್ ಫೋರ್ಸ್ ಕಮಿಟಿ ಅನುದಾನದಲ್ಲಿ ಅಗತ್ಯ ಕೊಳವೆ ಬಾವಿ ಕೊರೆಯಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒಗಳು, ಕಲ್ಯಾ, ಮತ್ತೀಕೆರೆ, ಸಾತನೂರು, ನೇತೇತನಹಳ್ಳಿ, ತಗ್ಗೀಕುಪ್ಪೆ, ಆಗಲಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಉಳಿದಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪಿಡಿಒಗಳು ತಿಳಿಸಿದರು.
ಆಶಾ ಕಾರ್ಯಕರ್ತರಿಗೆ 5 ಸಾವಿರ ಧನಸಹಾಯ: ಆಶಾ ಕಾರ್ಯಕರ್ತೆಯರ ಸೇವೆಗೆ ಟಿಎಪಿಸಿಎಂಸ್ ಕಾರ್ಯದರ್ಶಿಗಳು ತಲಾ 5 ಸಾವಿರ ಧನಸಹಾಯ ನೀಡಬೇಕು. ಬಮೂಲ್ 3 ಸಾವಿರ ರೂ. ನೀಡುತ್ತಿದೆ. ಟಿಎಪಿಸಿಎಂಎಸ್ ತಮ್ಮ ಧನಸಹಾಯದ ನಿರ್ಧಾರ ತಿಳಿಸುವಂತೆ ಶಾಸಕರು ಮನವಿಮಾಡಿದರು.
ರೈತರಿಗೆ ಅನುಕೂಲ ಕಲ್ಪಿಸಿ: ತಾಲೂಕಿನಲ್ಲಿ ರೈತರು ಬೆಳೆದಿರುವ ತರಕಾರಿ ಮತ್ತು ಹೂ ಬೆಳಗಳ ಪಟ್ಟಿ ಮಾಡಿ ನೀಡಿದರೆ ಸರ್ಕಾರ ಸೂಕ್ತ ಪರಿಹಾರ ಒದಗಿಸಲಿದೆ. ಈ ಸಂಬಂಧ
ಈಗಾಗಲೇ ಹಾಪ್‌ಕಾಮ್ಸ್ ತರಕಾರಿ ಖರೀದಿ ಸಲು ಬದ್ಧವಾಗಿದೆ ಎಂದು ತೋಟಗಾರಿಕೆ ಅಧಿಕಾರಿ ನಾಗರಾಜು ಶಾಸಕರ ಗಮನಕ್ಕೆ ತಂದರು.
ಪಟ್ಟಣದಲ್ಲಿ 12 ಸಾವಿರ ಮಾಸ್ಕ್, ಡಿಕೆಎಸ್‌ನಿಂದ 6 ಸಾವಿರ ಸ್ಯಾನಿಟೈಸರ್, ಬಡವರಿಗೆ ನಿತ್ಯ 900 ಊಟದ ಪೊಟ್ಟಣ, 1,200 ಲೀ. ಹಾಲು ಪೂರೈಸಲಾಗುತ್ತಿದೆ ಎಂದು ಶಾಸಕರು ಹೇಳುತ್ತಿದ್ದಂತೆ, ಹೆಚ್ಚುವರಿ ಯಾಗಿ ಹಾಲು ಮತ್ತು ಮಾಸ್ಕ್ ವಿತರಿಸಲು ಅಗತ್ಯ ಕ್ರಮ ವಹಿಸುವಂತೆ ಪುರಸಭೆ ಸದಸ್ಯ ಪುರುಷೋತ್ತಮ್ ಸಲಹೆ ನೀಡಿದರು.
ತಾಪಂ ಸದಸ್ಯ ನಾರಾಯಣಪ್ಪ, ಹನುಮಂತರಾಯಪ್ಪ, ಶಂಕರ್, ಜಿ. ವೆಂಕಟೇಶ್, ಸುಧಾ, ಕಾರ್ಯ ನಿರ್ವಹಕಾಧಿಕಾರಿ ಟಿ.ಪ್ರದೀಪ್, ಕಂದಾಯ ಇಲಾಖೆ ಆರ್‌ಆರ್‌ಟಿ ಶಿರಸ್ತೇದಾರ್ ಜಗದೀಶ್, ಪುರಸಭಾ ಮುಖ್ಯಾಧಿಕಾರಿ ಮಹೇಶ್, ಪಿಎಸ್‌ಐ ವೆಂಕಟೇಶ್, ವಿವಿಧ ಇಲಾಖಾ ಅಧಿಕಾರಿಗಳು, ಪುರಸಭಾ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.