Advertisement

ದೊಡ್ಡಬಳ್ಳಾಪುರಕ್ಕೆ ಬೇಕಿದೆ ಸುಸಜ್ಜಿತ ರಕ್ತನಿಧಿ

09:00 AM Jun 14, 2019 | Suhan S |

ದೊಡ್ಡಬಳ್ಳಾಪುರ: ತಾಲೂಕಿನ ಜನಸಂಖ್ಯೆ 3.5 ಲಕ್ಷಕ್ಕೂ ಹೆಚ್ಚಿದೆ. ಅಪಘಾತ ಹಾಗೂ ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ರಕ್ತದಾನಿಗಳು ಹಾಗೂ ರಕ್ತದ ಅವಶ್ಯಕತೆ ಇರುವವರಿಗೆ ರಕ್ತನಿಧಿ ಅವಶ್ಯಕತೆ ಇದ್ದು, ನಗರದಲ್ಲಿ ಸುಸಜ್ಜಿತ ರಕ್ತನಿಧಿಯನ್ನು ಸ್ಥಾಪಿಸ ಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

Advertisement

ವಿಶ್ವ ರಕ್ತದಾನಿಗಳ ದಿನಾಚರಣೆ: ಜೂ.14ರಂದು ‘ಎಲ್ಲರಿಗೂ ಸುರಕ್ಷಿತ ರಕ್ತ’ ಎಂಬ ಧ್ಯೇಯದಡಿಯಲ್ಲಿ 2019ರ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸ ಲಾಗುತ್ತಿದೆ. ಜನರಲ್ಲಿ ರಕ್ತದಾನದ ಅರಿವು ಹಾಗೂ ರಕ್ತದಾನಿಗಳನ್ನು ಸ್ಮರಿಸಲು ದಿನಾಚರಣೆ ಆಚರಿಸ ಲಾಗುತ್ತದೆ. ರಕ್ತ ವಿಂಗಡನೆ ಪಿತಾಮಹ ನೋಬೆಲ್ ವಿಜೇತ ವಿಜ್ಞಾನಿ ಕಾರ್ಲ್ ಲ್ಯಾಂಡ್‌ ಸ್ಪೀನರ್‌ ಸ್ಮರಣಾರ್ಥ ದಿನಾಚರಣೆ ಆಚರಿಸಲಾಗುತ್ತದೆ.

ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಸಿದ್ಧಗೊಳಿಸುವುದು ಈ ದಿನ ಆಚರಣೆಯ ಮುಖ್ಯ ಉದ್ದೇಶ. ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ. ದಾನಿಗಳಿಂದ ಪಡೆದ ರಕ್ತವನ್ನೇ ಬಳಸಿ ಜೀವ ಉಳಿಸುವ ಅಗತ್ಯವಿರುವುದರಿಂದ ಸ್ವಯಂ ಪ್ರೇರಿತ ರಕ್ತದಾನ ಅತ್ಯಂತ ಹೆಚ್ಚು ಮಹತ್ವವುಳ್ಳದ್ದಾಗಿದೆ. 18 ರಿಂದ 60 ವಯಸ್ಸಿನೊಳಗಿನ, ಕನಿಷ್ಠ 45 ಕೆ.ಜಿ ತೂಕವಿರುವ, ರಕ್ತದ ಹಿಮೋಗ್ಲೋಬಿನ್‌ 12.5 ಗ್ರಾಂಗಿಂತ ಹೆಚ್ಚು ಇರುವ ಆರೋಗ್ಯವಂತ ಮನುಷ್ಯ, ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರೋಗಿಗೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ರಕ್ತವನ್ನು ಕೊಡಬೇಕಾದಾಗ ಅತ್ಯಂತ ಸುರಕ್ಷಿತ ರಕ್ತ ಎಂದರೆ ಸ್ವಯಂ ಪ್ರೇರಿತ ರಕ್ತದಾನಿಗಳಿಂದ ಪಡೆದ ರಕ್ತ ಆಗಿರುತ್ತದೆ.

ರಕ್ತದಾನದ ಅವಶ್ಯಕತೆ: ಒಬ್ಬ ಆರೋಗ್ಯವಂತ ಮನುಷ್ಯನ ದೇಹದಲ್ಲಿ 5ರಿಂದ 6 ಲೀಟರ್‌ನಷ್ಟು ರಕ್ತ ಇರುತ್ತದೆ. ರಕ್ತ ಸಂಗ್ರಹಣೆ ಮಾಡುವಾಗ ಕೇವಲ 350 ಮಿ.ಲೀ ನಷ್ಟು ರಕ್ತ ಮಾತ್ರ ತೆಗೆಯಲಾಗುವುದು. ರಕ್ತ ಸಂಗ್ರಹಣೆ ಪೂರ್ಣ ಪ್ರಕ್ರಿಯೆ ಕೇವಲ 10 ರಿಂದ 15 ನಿಮಿಷದ್ದಾಗಿದೆ. ದಾನ ಮಾಡಿದ ರಕ್ತ 24 ರಿಂದ 48 ಘಂಟೆಗಳಲ್ಲಿ ಪುನರ್‌ ಉತ್ಪತ್ತಿ ಆಗುತ್ತದೆ. ಆದರೂ ಸಹಿತ ಒಮ್ಮೆ ದಾನ ಮಾಡಿದ ನಂತರ 3 ತಿಂಗಳ ನಂತರ ದಾನ ಮಾಡಲು ಅರ್ಹನಾಗಿರುತ್ತಾನೆ. ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಾಗುವ ಪ್ರತಿ 10 ರೋಗಿಗಳಲ್ಲಿ 1 ರೋಗಿಗೆ ರಕ್ತದ ಅವಶ್ಯಕತೆ ಇರುತ್ತದೆ. ಈ ದಿಸೆಯಲ್ಲಿ ರಕ್ತದಾನಕ್ಕೆ ಅವಶ್ಯಕ ವ್ಯವಸ್ಥೆಯಾಗಬೇಕಿದೆ ಎನ್ನುತ್ತಾರೆ ಶ್ರೀ ರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್‌.

ರಕ್ತನಿಧಿ ಸ್ಥಾಪಿಸಿ: ದೊಡ್ಡಬಳ್ಳಾಪುರದಲ್ಲಿ ರಕ್ತದಾನಿ ಗಳು ಸಾಕಷ್ಟಿದ್ದಾರೆ. 30ರಿಂದ 40 ಬಾರಿ ರಕ್ತ ದಾನ ನೀಡಿದವರೂ ಇದ್ದಾರೆ. ಇಲ್ಲಿನ ವಿದ್ಯಾಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ನೆರವಿನೊಂದಿಗೆ ನಡೆಯುವ ರಕ್ತದಾನ ಶಿಬಿರಗಳಲ್ಲಿ 300ಕ್ಕೂ ಹೆಚ್ಚು ಬಾಟಲಿಗಳ ರಕ್ತ ಸಂಗ್ರಹವಾಗಿರುವ ನಿದರ್ಶನಗಳಿವೆ. ಆದರೆ ಇಲ್ಲಿ ರಕ್ತ ಸಂಗ್ರಹ ಮಾಡುವ ರಕ್ತನಿಧಿ (ಬ್ಲಿಡ್‌ ಬ್ಯಾಂಕ್‌)ಮಾತ್ರ ಇಲ್ಲ.

Advertisement

ತುರ್ತು ಸಂಧರ್ಭಗಳಲ್ಲಿ ರಕ್ತದಾನಿ ಇಲ್ಲಿಯವರೇ ಆಗಿದ್ದು ರಕ್ತ ಪಡೆಯುವವರೂ ಇಲ್ಲಿಯವರೇ ಆಗಿದ್ದು ರಕ್ತ ಸಂಗ್ರಹಿಸಲು ಮಾತ್ರ ಬೆಂಗಳೂರಿಗೆ ಹೋಗಬೇಕು. ಇದಕ್ಕೆ ಕನಿಷ್ಠ 6ರಿಂದ 10 ಗಂಟೆಗಳ ಕಾಲಾವಕಾಶ ಬೇಕಾಗುತ್ತಿದೆ. ಏಕೆಂದರೆ ಎಚ್ಐವಿ, ರಕ್ತಕಣಗಳ ಪರೀಕ್ಷೆ ಮೊದಲಾದ ಪರೀಕ್ಷೆ ಸೌಲಭ್ಯಗಳಿಲ್ಲ. ಇದರಿಂದಾಗಿ ರೋಗಿ ಅಸ್ವಸ್ಥನಾಗಿರುತ್ತಾನೆ. ಈ ದಿಸೆಯಲ್ಲಿ ತುರ್ತಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಘಟಕ ಸ್ಥಾಪಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ರಕ್ತ ಸಂಗ್ರಹ ಕೇಂದ್ರವಿದೆ: ಇತ್ತೀಚೆಗಷ್ಟೇ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ರಕ್ತದ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ರಕ್ತದಾನಿಗಳಿಂದ ರಕ್ತ ಪಡೆಯುವ ಹಾಗೂ ಪರೀಕ್ಷೆ ನಡೆಸುವ ವ್ಯವಸ್ಥೆ ಇಲ್ಲ.

ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ರಕ್ತನಿಧಿ ಸ್ಥಾಪಿಸಲು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಗೆ ಸ್ಥಳಾವಕಾಶ ಮಾಡಿಕೊಡಲಾಗಿದೆ. ಇಲ್ಲಿ ರಕ್ತನಿಧಿ ಸ್ಥಾಪಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಆರಂಭಗೊಳ್ಳುವ ನಿರೀಕ್ಷೆಯದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಶರ್ಮಿಳಾ ಹೆಡೆ ತಿಳಿಸಿದ್ದಾರೆ.

ರಕ್ತದಾನ ಜಾಗೃತಿ ಜಾಥಾ ಇಂದು:

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೂ.14ರಂದು ಬೆಳಗ್ಗೆ 10.30ಕ್ಕೆ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ. ಬೆಳಗ್ಗೆ 9.30ಕ್ಕೆ ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಟಿ.ಬಿ. ವೃತ್ತದವರೆಗೆ ಜಾಥಾ ಕಾರ್ಯಕ್ರಮ ನಡೆಯಲಿದೆ. ರಕ್ತದಾನ ಶಿಬಿರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಉದ್ಘಾಟಿಸಲಿದ್ದಾರೆ. ಜಿಪಂ ಸಿಇಒ ಆರ್‌.ಲತಾ ಹಾಗೂ ಅಪರ ಜಿಲ್ಲಾಧಿಕಾರಿ ರಮ್ಯಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಯೋಗೇಶ್‌ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಸಿ. ಜನರಲ್ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಡಾ.ಶಾಂತಾ ಹೊಸಮನಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next