Advertisement

ಮೈಸೂರಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜನೆ

12:26 PM May 16, 2017 | Team Udayavani |

ಮೈಸೂರು: ಸೆಪ್ಟೆಂಬರ್‌ ಅಥವಾ ನವೆಂಬರ್‌ನಲ್ಲಿ ಜಿಲ್ಲಾಡಳಿತದವತಿಯಿಂದ ಮೈಸೂರಿನಲ್ಲಿ ಬೃಹತ್‌ ಉದ್ಯೋಗ ಮೇಳ ಆಯೋಜಿಸುವುದಾಗಿ ಶಾಸಕ ವಾಸು ಹೇಳಿದರು. ಕೌಶಲ್ಯ ಕರ್ನಾಟಕ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ಇಲಾಖೆ, ವಾಣಿಜ್ಯೋದ್ಯಮ ಮತ್ತು ಜೀವನೋಪಾಯ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ನಿರುದ್ಯೋಗಿ ಯುವ ಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ವಿದ್ಯಾಭ್ಯಾಸ ಇಲ್ಲವೇ ತರಬೇತಿ ಮುಗಿದ ಕೂಡಲೇ 18 ರಿಂದ 30 ವರ್ಷ ಒಳಪಟ್ಟವರಿಗೆ ಉದ್ಯೋಗ ದೊರಕಬೇಕು. ಇದಕ್ಕೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು. ಐಟಿಐ, ಡಿಪ್ಲೋಮೋ, ಎಂಜಿನಿಯರಿಂಗ್‌ ಮಾಡಿದ ವಿದ್ಯಾವಂತ ಯುವ ಜನರು ನೌಕರಿ ಹುಡುಕುತ್ತಾ ಕೂರುವ ಬದಲಿಗೆ ಕೈಗಾರಿಕೋದ್ಯಮಿಗಳಾಗಿ ಉದ್ಯೋಗದಾತರಾಗುವತ್ತ ಚಿಂತಿಸಬೇಕು. ನಮ್ಮ ಕಣ್ಣ ಮುಂದೆಯೇ ಅಂತಹ ಸಾಕಷ್ಟು ನಿದರ್ಶನಗಳಿವೆ. ಉದ್ಯೋಗಕ್ಕಾಗಿ ಅಲೆಯದೆ ದೊಡ್ಡ ಕೈಗಾರಿಕೋದ್ಯಮಿಗಳಾಗಿ ಸಾವಿರಾರು ಉದ್ಯೋಗ ಸೃಷ್ಟಿ ಮಾಡಿರುವುದನ್ನು ಕಾಣಬಹುದು ಎಂದು ತಿಳಿಸಿದರು.

ಈ ಹಿಂದೆ ಕೂಡ ಮೈಸೂರಿನಲ್ಲಿ ಉದ್ಯೋಗ ಮೇಳ ನಡೆದಾಗ ನೋಂದಣಿ ಮಾಡಿಸಿಕೊಂಡಿದ್ದ ಬಹಳಷ್ಟು ಜನರಿಗೆ ಉದ್ಯೋಗ ದೊರೆತಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳು ಸ್ಥಾಪನೆಯಾಗುವಂತೆ ಮಾಡಿದರು. ಜನ ಸಂಖ್ಯೆ ಹೆಚ್ಚಳದಿಂದ ಎಲ್ಲರಿಗೂ ಉದ್ಯೋಗ ದೊರೆಯುವುದಿಲ್ಲ. ಹೀಗಾಗಿ ಉದ್ಯೋಗದಾತರಾಗುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಮೈಸೂರು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಜಿಲ್ಲಾಧಿಕಾರಿ ಡಿ.ರಂದೀಪ್‌, ಜಿಪಂ ಸಿಇಒ ಪಿ.ಶಿವಶಂಕರ್‌, ಕೌಶಲ್ಯ ಇಲಾಖೆ ಜಂಟಿ ನಿರ್ದೇಶಕ ನಾಗರಾಜು, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿಶ್ವನಾಥ್‌ ಭರಣಿ ಇತರರು ಇದ್ದರು.

ಏನಿದು ಉದ್ಯೋಗ ನೋಂದಣಿ
ಉದ್ಯೋಗಾವಕಾಶ ಹೆಚ್ಚಳ ಮತ್ತು ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನ ಒಂದೇ ಸೂರಿನಡಿ ತರುವ ಉದ್ದೇಶದಿಂದ ರಚಿಸಲಾಗಿರುವ ಕೌಶಲ್ಯ ಅಭಿವೃದ್ಧಿ ಇಲಾಖೆ ನಿರುದ್ಯೋಗಿ ಯುವ ಜನರ ಸಮೀಕ್ಷೆ ಆರಂಭಿಸಿದೆ. ಈ ಯೋಜನೆಯಡಿ ನಿರುದ್ಯೋಗಿಗಳ ನೋಂದಣಿಗಾಗಿ ರೂಪಿಸಲಾಗಿರುವ www.Kaushalkar.com ವೆಬ್‌ಸೈಟ್‌ನಲ್ಲಿ ವಿದ್ಯಾಭ್ಯಾಸದ ನಂತರ ಆಧಾರ್‌ ಸಂಖ್ಯೆ, ಇ-ಮೇಲ್‌ ಐಡಿ ಹಾಗೂ ದೂರವಾಣಿ ಸಂಖ್ಯೆ ನೀಡಿ ಹೆಸರು ನೋಂದಣಿ ಮಾಡಿಕೊಂಡಲ್ಲಿ, ಕಾಲ್‌ಸೆಂಟರ್‌, ಸೇಲ್ಸ್‌ಮನ್‌, ಸೇಲ್ಸ್‌ ಎಕ್ಸಿಕ್ಯೂಟಿವ್‌ ಸೇರಿದಂತೆ ಯೋಜನೆಗೆ ಸೇರಿಸಿರುವ 59 ಕೌಶಲ್ಯಗಳ ಪೈಕಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಶಿಷ್ಯವೇತನ ಸಹಿತ ಎರಡು ವಾರಗಳಿಂದ ಒಂದೂವರೆ ವರ್ಷಗಳ ವರೆಗೆ ತರಬೇತಿ ನೀಡಿ ಉದ್ಯೋಗ ಭರ್ತಿಯ ಅವಕಾಶ ಕಲ್ಪಿಸಲಾಗುತ್ತದೆ.

Advertisement

ಸರ್ವರ್‌ ಕಾಟ
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೊದಲ ದಿನವೇ ಸರ್ವರ್‌ ಮಂದಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಉತ್ಸಾಹದಿಂದ ಬಂದವರು ನಿರಾಶೆಯಿಂದ ಹಿಂತಿರುಗುವಂತಾಯಿತು. ಬೆಳಗ್ಗೆ 11 ಗಂಟೆಗೆ ಶಾಸಕ ವಾಸು ಚಾಲನೆ ನೀಡಿದ ನಂತರ ಸುಮಾರು 15 ಮಂದಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡು ಅಷ್ಟರಲ್ಲಾಗಲೆ ಕೈಕೊಟ್ಟ ಸರ್ವರ್‌ ಮತ್ತೆ ಸರಿ ಆಗಿದ್ದು ಮಧ್ಯಾಹ್ನ 2 ಗಂಟೆ ನಂತರವೇ. ಆ ನಂತರವು ಅರ್ಧಗಂಟೆಗೊಮ್ಮೆ ಸರ್ವರ್‌ ಕೈಕೊಡುತ್ತಿದ್ದುದರಿಂದ ಮೊದಲ ದಿನ ಕೇವಲ 84 ಮಂದಿಯಷ್ಟೆ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next