ಮಹದೇವಪುರ: ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಂಸ್ಥೆ ಮತ್ತು ಕೈಗಾರಿಕೆ ಸ್ಥಾಪನೆಗೆ ಬೆಂಗಳೂರು ಉತ್ತಮ ತಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಹೂಡಿಯಲ್ಲಿ ಹಮ್ಮಿಕೊಂಡಿದ್ದ ಹೂಡಿಕೆಯ ಮಾಹಿತಿ ತಂತ್ರಜ್ಞಾನ ಕಂಪನಿಯಾದ ನೆಟ್ ಆಪ್‌ನ ನೂತನ ಕ್ಯಾಂಪಸ್‌ನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೈಗಾರಿಕೆಗೆ ಅನುಗುಣವಾದ ವಸತಿ ಕಲ್ಪಿಸುತ್ತಿದೆ ಎಂದರು. ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿರುವ 500ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಯಿಂದ ಹೊಸ ತಂತ್ರಜ್ಞಾನಗಳನ್ನು ಶೋಧಿಸುತ್ತಿವೆ ಎಂದು ಹೇಳಿದರು.
ರಾಜ್ಯದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದ ಉನ್ನತ ಶಿಕ್ಷಣ ಸಂಸ್ಥೆಗಳು ಯುವ ಜನತೆಯನ್ನು ಭೌಗೋಳಿಕವಾಗಿ ತಮ್ಮ ಚಾಪು ಮೂಡಿಸುವಷ್ಟು ಪ್ರಜ್ಞಾವಂತರನ್ನಾಗಿಸುತ್ತಿದೆ. ಕರ್ನಾಟಕ ಕೈಗಾರೀಕರಣ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಸ್ನೇಹಯುತ ವಾತಾವರಣ ಕಲ್ಪಿಸುತ್ತಿದೆ ಎಂದು ತಿಳಿಸಿದರು. ರಾಜ್ಯದ ಆದಾಯಕ್ಕೆ ತಾಂತ್ರಿಕ ಮತ್ತು ಜೈವಿಕ ಸಂಸ್ಥೆಗಳು ಉತ್ತಮ ಕೊಡುಗೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುತ್ತಿವೆ ಎಂದರು.
ಬೆಂಗಳೂರು ಸಂಶೋಧನೆಗೆ ಉತ್ತಮ ಸ್ಥಳ: ಇದೆ ವೇಳೆ ಮಾತನಾಡಿದ ನೆಟ್ ಆಪ್‌ನ ಸಿಇಒ ಜಾರ್ಜ್ ಕೊರಿಯಾ ಬೆಂಗಳೂರು ತಾಂತ್ರಿಕ ಶೋಧನೆಗೆ ಮತ್ತು ಕೈಗಾರೀಕರಣಕ್ಕೆ ಉತ್ತಮ ಸ್ಥಳವಾಗಿದೆ, ಹೂಡಿಕೆಗೆ ಉತ್ತಮ ವೇದಿಕೆಯಾಗಿ ಹೊರಹೊಮ್ಮಿದೆ ಎಂದರು. ನಮ್ಮ ಸಂಸ್ಥೆ ಪರಿಸರ ರಕ್ಷಣೆ ಮತ್ತು ಮಾಲಿನ್ಯ ತಡೆಯುವಲ್ಲಿ, ಬೆಂಗಳೂರಿಗರಿಗೆ ಹೊಣೆಗಾರರಾಗಿದ್ದೇವೆ ಎಂದು ತಿಳಿಸಿದರು.
ಸಣ್ಣ ಮತ್ತು ದೊಡ್ಡ ಕೈಗಾರಿಕೆ ಹಾಗು ವಸತಿ ಸಚಿವ ಆರ್.ವಿ.ದೇಶಪಾಂಡೆ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನೆಟ್ ಆಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ವಿಶ್ವೇಶ್ವರಯ್ಯ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ ಶ್ರೀನಿವಾಸ್ ಹಾಜರಿದ್ದರು.