ಜಗತ್ತಿನಲ್ಲೇ ಅತ್ಯಂತ ಹೆಚ್ಚು ತೈಲೋತ್ಪಾದನೆ ಮಾಡುತ್ತಿರುವ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಳ ಮಾಡಲು ನಿರಾಕರಿಸಿದ ಬೆನ್ನಲ್ಲೇ ಭಾರತ ಸಹಿತ ಅಮೆರಿಕ, ಚೀನ, ಜಪಾನ್, ದಕ್ಷಿಣ ಕೊರಿಯಾ, ಇಂಗ್ಲೆಂಡ್ ದೇಶಗಳು ತಮ್ಮ ವ್ಯೂಹಾತ್ಮಕ ಬಳಕೆಯ ಭೂಗತ ಸಂಗ್ರಹಾಗಾರದಲ್ಲಿರುವ ತೈಲ ಬಳಕೆಗೆ ಮುಂದಾಗಿವೆ. ಒಪೆಕ್ ದೇಶಗಳ ಬಿಗಿಪಟ್ಟಿಗೆ ತಿರುಗೇಟು ನೀಡುವ ದೃಷ್ಟಿಯಿಂದ ಈ ದೇಶಗಳು ಇಂಥ ನಿರ್ಧಾರಕ್ಕೆ ಬಂದಿವೆ. ವಿಶೇಷವೆಂದರೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಎಲ್ಲ ದೇಶಗಳು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿವೆ.
ಜಾಗತಿಕವಾಗಿ ಪ್ರತೀ ದಿನವೂ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಸದ್ಯ ಬ್ರೆಂಟ್ ಕಚ್ಚಾ ತೈಲ ಪ್ರತೀ ಬ್ಯಾರೆಲ್‌ಗೆ 79 ಡಾಲರ್ ಇದೆ. ಹೀಗಾಗಿಯೇ ಜಗತ್ತಿನ ಬಹುತೇಕ ದೇಶಗಳು ಪೆಟ್ರೋಲ್ ಮತ್ತು ಡೀಸೆಲ್ ಸಹಿತ ಎಲ್ಲ ತೈಲೋತ್ಪನ್ನಗಳ ಬೆಲೆಯನ್ನು ಏರಿಕೆ ಮಾಡುವ ಅನಿವಾರ್ಯತೆಗೆ ಸಿಲುಕಿವೆ. ಈ ಬೆಲೆ ಏರಿಕೆಯನ್ನು ತಡೆಯುವ ಸಲುವಾಗಿ ಅಮೆರಿಕದ ನೇತೃತ್ವದಲ್ಲಿ ಹೆಚ್ಚಾಗಿ ತೈಲ ಬಳಕೆ ಮಾಡುವ ದೇಶಗಳು ಒಪೆಕ್ ದೇಶಗಳ ಮುಂದೆ ಮನವಿಯೊಂದನ್ನು ಇರಿಸಿದ್ದವು. ತೈಲೋತ್ಪಾದನೆಯನ್ನು ಹೆಚ್ಚಳ ಮಾಡಿ, ದರ ಏರಿಕೆಯನ್ನು ನಿಯಂತ್ರಣಕ್ಕೆ ತರುವಂತೆ ಕೇಳಿಕೊಂಡಿದ್ದವು. ಆದರೆ ಒಪೆಕ್ ದೇಶಗಳು ಈ ಮನವಿಗೆ ಓಗೊಟ್ಟಿರಲಿಲ್ಲ.
ಈ ಬೆಳವಣಿಗೆಗಳು ಆದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇಡೀ ಜಗತ್ತಿನಲ್ಲೇ ಹೆಚ್ಚು ತೈಲ ಬಳಕೆ ಮಾಡುವ ದೇಶಗಳ ಜತೆ ಮಾತನಾಡಿ, ವ್ಯೂಹಾತ್ಮಕ ಬಳಕೆಗಾಗಿ ಭೂಗತ ಸಂಗ್ರಹಾಗಾರದಲ್ಲಿ ಸಂಗ್ರಹಿಸಲಾಗಿರುವ ತೈಲವನ್ನು ಬಳಕೆ ಮಾಡುವ ಸಲಹೆ ನೀಡಿದ್ದರು. ಈ ರೀತಿ ಮಾಡುವ ಮೂಲಕ ಒಪೆಕ್ ದೇಶಗಳಿಗೆ ತಕ್ಕ ಎದಿರೇಟು ನೀಡುವ ಆಲೋಚನೆಯನ್ನೂ ಮುಂದಿಟ್ಟಿದ್ದರು.
ಇದನ್ನೂ ಓದಿ:ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನಿ ಮ್ಯಾಗ್ಡಲೀನಾ
ಈಗ ಬಹುತೇಕ ಎಲ್ಲ ದೇಶಗಳು ಅಮೆರಿಕದ ಸಲಹೆಯನ್ನು ಸ್ವೀಕರಿಸಲು ಒಪ್ಪಿವೆ. ಇದರ ಭಾಗವಾಗಿಯೇ ಇದರಂತೆ ಮಂಗಳವಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರಿದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಸಭೆ ನಡೆದು, ವ್ಯೂಹಾತ್ಮಕ ಬಳಕೆಗಾಗಿನ ಭೂಗತ ಸಂಗ್ರಹಾಗಾರದಲ್ಲಿರುವ ತೈಲದ ಬಳಕೆಗೆ ನಿರ್ಧರಿಸಲಾಯಿತು. 50 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಇದನ್ನು ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್(ಎಚ್‌ಪಿಸಿಎಲ್)ಗೆ ಮಾರಾಟ ಮಾಡಲಾಗುತ್ತದೆ. ಈ ಎರಡು ಭೂಗತ ಸಂಗ್ರಹಾಗಾರಗಳ ಜತೆ ಪೈಪ್‌ಲೈನ್ ಹೊಂದಿರುವುದರಿಂದ ಇಲ್ಲಿಗೆ ಮಾರಾಟ ಮಾಡಲಾಗುತ್ತಿದೆ.
ಈ ನಿರ್ಧಾರದಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯುವ ಸಂಭವವಿದೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಒಂದಷ್ಟು ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಈಗ ಸ್ಥಳೀಯವಾಗಿಯೇ ಕಚ್ಚಾ ತೈಲ ಬಳಕೆ ಮಾಡುವುದರಿಂದ ಮತ್ತಷ್ಟು ಇಳಿಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.