Advertisement

ಬೆಂಗ್ಳೂರಿಗೆ ಸಿಕ್ತು ಸ್ಮಾರ್ಟ್‌ ಪಟ್ಟ 

10:23 AM Jun 24, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಸ್ಮಾರ್ಟ್‌ ಸಿಟಿ ಯೋಜನೆಯ ಮೂರನೇ ಹಂತದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದಿದೆ. ಬೆಂಗಳೂರು ನಗರದ ಹಳೆಯ ಪ್ರದೇಶಗಳನ್ನು ಒಳಗೊಂಡ ಶಿವಾಜಿನಗರ, ಮಲ್ಲೇಶ್ವರ, ಗಾಂಧಿನಗರ ಮತ್ತು ಚಾಮರಾಜಪೇಟೆಯ ವಿಧಾನಸಭಾ ಕ್ಷೇತ್ರದ 16 ವಾರ್ಡ್‌ಗಳು ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಗೊಂಡಿವೆ.  

Advertisement

ಎರಡು ಬಾರಿ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗುವದಲ್ಲಿ ವಿಫ‌ಲವಾದ ಬೆಂಗಳೂರು, ಮೂರನೇ ಬಾರಿಗೆ ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಗೆ ಆಯ್ಕೆಯಾಗಿದೆ. ಕಳೆದ ಬಾರಿ ಮಹದೇವಪುರದ ವೈಟ್‌ಫೀಲ್ಡ್‌ನಲ್ಲಿ ಸ್ಮಾರ್ಟ್‌ಸಿಟಿ ನಿರ್ಮಿಸುವ ಪ್ರಸ್ತಾವನೆಯನ್ನು ಪಾಲಿಕೆ ಕೇಂದ್ರಕ್ಕೆ ಸಲ್ಲಿಸಿತ್ತು. ಆದರೆ, ಆ ಭಾಗದಲ್ಲಿ ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಪೂರಕವಾದ ಅಂಶಗಳಿಲ್ಲದ ಕಾರಣ ಬೆಂಗಳೂರು ಆಯ್ಕೆಯಾಗಿರಲಿಲ್ಲ. 

ಈ ಹಿನ್ನೆಲೆಯಲ್ಲಿ ಮೂರನೇ ಹಂತದ ಸ್ಮಾರ್ಟ್‌ ಸಿಟಿ ಯೋಜನೆಗೆ ಸೂಕ್ತ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡ ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರ ಪಾಲ್ಗೊಳ್ಳುವಿಕೆ, ನಗರದಲ್ಲಿ ಸಂಚಾರ ದಟ್ಟಣೆ, ನಾಗರಿಕ ಸಂರಕ್ಷಣೆ, ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಸ್ಮಾರ್ಟ್‌ಸಿಟಿಗೆ ಆಯ್ಕೆಗೆ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳವುದಾಗಿ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸದ್ಯ ಈ ಬಾರಿ ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿದೆ. 

ಬೆಂಗಳೂರಿನ ನಾಲ್ಕು ವಿಧಾನ ಸಭಾ ಕ್ಷೇತ್ರಗಳ 16 ವಾರ್ಡ್‌ಗಳು ಸ್ಮಾರ್ಟ್‌ಸಿಟಿ ಯೋಜನೆಗೆ ಒಳಪಡಲಿದ್ದು, 20.37 (5050 ಎಕರೆ) ಚದರ ಕಿಲೋ ಮೀಟರ್‌ ಪ್ರದೇಶ ಅಭಿವೃದ್ಧಿಯಾಗಲಿದೆ. ಸ್ಮಾರ್ಟ್‌ಸಿಟಿ ನಿರ್ಮಾಣ ಯೋಜನೆಗೆ ಒಟ್ಟು 1592.4 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 500 ಕೋಟಿ ರೂ. ನೀಡಲಿದ್ದು, ಉಳಿದ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ. 

* 16 ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾದ ನಗರ ಕೇಂದ್ರ ಭಾಗದ ವಾರ್ಡ್‌ಗಳು 

Advertisement

* 20.37 ಚ.ಕಿ.ಮೀ/ ಯೋಜನೆಯಡಿ ಅಭಿವೃದ್ಧಿಯಾಗಲಿರುವ ಪ್ರದೇಶದ ವಿಸ್ತಾರ 

* 1592.4 ಕೋಟಿ ಸ್ಮಾರ್ಟ್‌ ಸಿಟಿ ಯೋಜನೆಗೆ ಬಿಬಿಎಂಪಿ ಅಂದಾಜಿಸಿರುವ ವೆಚ್ಚ 

* 500:500 ಕೋಟಿ ಯೋಜನೆಗೆ ಕೇಂದ್ರ ಮತ್ತು ರಾಜ್ಯದ ಪಾಲು 

ಮಾರುಕಟ್ಟೆಗಳ ಅಭಿವೃದ್ಧಿ: ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸಿರುವ ವರದಿಯಂತೆ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್‌.ಮಾರುಕಟ್ಟೆ, ರಸೆಲ್‌ ಮಾರುಕಟ್ಟೆಗಳನ್ನು ಹೈಟೆಕ್‌ ಮಾಡುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಅದರೊಂದಿಗೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳ ಪ್ರದೇಶಗಳನ್ನು ಹೈಟೆಕ್‌ಗೊಳಿಸುವುದಾಗಿ ತಿಳಿಸಲಾಗಿದೆ. 

ಏನಿದು ಸ್ಮಾರ್ಟ್‌ ಸಿಟಿ ಯೋಜನೆ 
– ಕೇಂದ್ರ ಸರ್ಕಾರ 2015ರಲ್ಲಿ ದೇಶಾದ್ಯಂತ ಈ ಯೋಜನೆ ಜಾರಿಗೆ ತಂದಿದೆ. 
– ದೇಶಾದ್ಯಂತ 100 ನಗರಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ನಗರದ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು ಜನಜೀವನ ಉತ್ತಮಗೊಳಿಸುವುದು ಮೂಲ ಉದ್ದೇಶ. 

ಯೋಜನೆಗೆ ಆಯ್ಕೆಯಾಗುವ ನಗರಕ್ಕೆ ನೀಡಲಾಗುವ ಅಂಕಗಳು 
-ವಲಯ-ಅಂಕಗಳು
-ನಗರ ಮಟ್ಟಕ್ಕೆ (ಸಿಟಿ ಲೆವೆಲ್‌)-30
-ಪ್ರದೇಶ ಆಧಾರಿತ ಅಭಿವೃದ್ಧಿ (ಎಬಿಡಿ)-55
-ಪ್ಯಾನ್‌ ಸಿಟಿ ಸಲ್ಯೂಷನ್‌- 15
-ಒಟ್ಟು ಅಂಕಗಳು -100
(ಈ ವಿಭಾಗಗಳಲ್ಲಿ ನಗರವೊಂದು ಎಷ್ಟು ಅಂಕ ಪಡೆಯುತ್ತದೆ ಎಂಬುದರ ಆಧಾರದ ಮೇಲೆ ರ್‍ಯಾಂಕ್‌ ನಿಗದಿ ಮಾಡಲಾಗುತ್ತದೆ)

ಪಾಲಿಕೆಯ ಕಾರ್ಯತಂತ್ರಗಳೇನು?
– ಯೋಜನೆಗಳು ಪರಿಸರ, ಆರ್ಥಿಕತೆ ಕುರಿತು ಸಮಾನ ಅಂಶ ಹೊಂದಿರಲಿದೆ 
– ವಾಹನ ದಟ್ಟಣೆ ತಡೆಗಟ್ಟುವುದು
– ವಿಶೇಷ ರೀತಿಯಲ್ಲಿ ಬೆಂಗಳೂರನ್ನು ಗುರುತಿಸುವಂತೆ ಮಾಡುವುದು
– ಗುಣಮಟ್ಟದ ಜೀವನ ದೊರೆಯುವಂತೆ ಮಾಡುವುದು
– ಗುರಿ ಸಾಧನೆಗೆ ನಾಗರಿಕರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು
– ಮೂಲಸೌಕರ್ಯಗಳನ್ನು ಒದಗಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಅನುಸರಿಸುವುದು

ಸಾಮಾಜಿಕ ತಾಣಗಳಲ್ಲಿ ಬೆಂಗಳೂರು ಆಯ್ಕೆ ಬೆಂಬಲಿಸಿದವರು 
ವಾಟ್ಸ್‌ಆಪ್‌, ಇ-ಮೇಲ್‌, ಮೈ ಜಿಒವಿ-67,174
ಸಂದೇಶ-35,767
ಕರೆ ಮೂಲಕ-1,25,985
ಫೇಸ್‌ಬುಕ್‌-5,85,960

ಬೆಂಗಳೂರಿನ ವಿಶೇಷತೆ ಬಗ್ಗೆ ಕೇಂದ್ರಕ್ಕೆ ನೀಡಿರುವ ಪಟ್ಟಿ 
ಸಾರಿಗೆ ಮತ್ತು ಚಲನಶೀಲತೆ
– 13 ಸಾವಿರ ಕಿ.ಮೀ ಉದ್ದದ ರಸ್ತೆಯನ್ನು ನಗರ ಹೊಂದಿದೆ 
– 2428 ಕಿ.ಮೀ ಸಾರಿಗೆ ವ್ಯವಸ್ಥೆ ಹೊಂದಿದೆ 
– 52 ಲಕ್ಷ ಮಂದಿ ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಾರೆ
– 42.30 ಕಿ.ಮೀ. ಮೆಟ್ರೋ ಸಂಪರ್ಕವಿದೆ
– ಶೇ.10ರಷ್ಟು ಪಾದಚಾರಿ ಮಾರ್ಗಗಳಿವೆ

ನೀರು ಸರಬರಾಜು
– 94 ಎಲ್‌ಪಿಸಿಡಿ ನೀರು ಸರಬರಾಜು 
– ಶೇ.38ರಷ್ಟು ಭಾಗಗಳಿಗೆ ನೀರಿನ ಸಂಪರ್ಕವಿದೆ
– ಶೇ.50ರಷ್ಟು ಭಾಗಗಳಿಗೆ ಉತ್ತಮ ಗುಣಮಟ್ಟದ ನೀರು ಸರಬರಾಜು
– ಶೇ.95.5ರಷ್ಟು ಸಂಪರ್ಕಗಳಿಗೆ ಮೀಟರ್‌ ಅಳವಡಿಕೆ
– ನೀರು ಕೊಯ್ಲು ವ್ಯವಸ್ಥೆಯ ಪ್ರಮಾಣ ಶೇ.2ರಷ್ಟು

ಒಳಚರಂಡಿ ಮತ್ತು ಘನತ್ಯಾಜ್ಯ ನಿರ್ವಹಣೆ
– ಶೇ.65ರಷ್ಟು ಒಳಚರಂಡಿ ಸಂಪರ್ಕವಿದೆ
– ಶೇ.55ರಷ್ಟು ಶುದ್ಧೀಕರಿಸಲಾಗುತ್ತದೆ
– ಶೇ.100ರಷ್ಟು ತ್ಯಾಜ್ಯ ವಿಂಗಡಣೆ, ಸಂಗ್ರಹ

ಮಳೆನೀರುಗಾಲುವೆ
– 850 ಕಿ.ಮೀ. ಒಟ್ಟು ನೀರುಗಾಲುವೆ ಉದ್ದ
– ಶೇ.47ರಷ್ಟು ನೈಸರ್ಗಿಕ ಕಾಲುವೆ
– ಶೇ.38ರಷ್ಟು ಒಳಕಾಲುವೆ ಸಂಪರ್ಕ

ಸುರಕ್ಷತೆ ಮತ್ತು ಭದ್ರತೆ
– ಶೇ.50ರಷ್ಟು ರಸ್ತೆ ಅಪಘಾತಗಳು ಕಡಿಮೆಯಾಗಿವೆ
– ಅಪರಾಧಗಳನ್ನು ಪುನರಾವರ್ತಿಸಿದ 21,758 ಪರವಾನಗಿ ರದ್ದಾಗಿವೆ 
– 400 ಕಣ್ಗಾವಲು ಕ್ಯಾಮೆರಾಗಳ ಅಳವಡಿಕೆ

ಸ್ಮಾರ್ಟ್‌ಸಿಟಿ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳು 
– ಟೆಂಡರ್‌ಶ್ಯೂರ್‌ ರಸ್ತೆ: 250 ಕೋಟಿ ರೂ. 
– ಬಹುಮಹಡಿ ಪಾರ್ಕಿಂಗ್‌: 10 ಕೋಟಿ ರೂ.
– ಎನ್‌ಎಂಟಿ ಮತ್ತು ಪಾದಚಾರಿ ಮಾರ್ಗ: 40 ಕೋಟಿ ರೂ.
– ಮಳೆ ನೀರುಗಾಲುವೆ ನಿರ್ಮಾಣ: 6 ಕೋಟಿ ರೂ.
– ಘನತ್ಯಾಜ್ಯ ನಿರ್ವಹಣೆ: 3.2 ಕೋಟಿ ರೂ. 
– ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ: 20 ಕೋಟಿ ರೂ.
– ಹಲಸೂರು ಕೆರೆ ಅಭಿವೃದ್ಧಿ: 2.6 ಕೋಟಿ ರೂ.
– ಕೆ.ಆರ್‌.ಮಾರುಕಟ್ಟೆ ಅಭಿವೃದ್ಧಿ: 7 ಕೋಟಿ ರೂ.
– ರಸಲ್‌ ಮಾರುಕಟ್ಟೆ ಅಭಿವೃದ್ಧಿ: 4 ಕೋಟಿ ರೂ.

ಪ್ರಸ್ತಾವನೆಯಲ್ಲಿರುವ ಪ್ರಮುಖ ಅಂಶಗಳು
– ಸಾರ್ವಜನಿಕರ ಸುರಕ್ಷತೆಗಾಗಿ ಹಾಗೂ ನಗರದ ಸೌಂದರ್ಯ ವರ್ದನೆಗೆ ಟೆಂಡರ್‌ಶ್ಯೂರ್‌ಗಳ ನಿರ್ಮಾಣ
– ಪಾದಚಾರಿ ಮಾರ್ಗಗಳ ಮೇಲ್ದರ್ಜೆ
– ಸಾರ್ವಜನಿಕ ಸ್ಥಳಗಳಲ್ಲಿ ಇ-ಶೌಚಾಲಯ, ಸ್ಮಾರ್ಟ್‌ ಬಸ್‌ ಶೆಲ್ಟರ್‌, ಡಿಜಿಟಲ್‌ ಮಾಹಿತಿ ಫ‌ಲಕ ಅಳವಡಿಕೆ
– ನಗರದಲ್ಲಿ ಸಂಚಾರ ದಟ್ಟಣೆಗೆ ಕ್ರಮ ಹಾಗೂ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ 
– ನಮ್ಮ ಮೆಟ್ರೋಗೆ ಬಸ್‌ ಸಂಪರ್ಕಿಸುವ ಉದ್ದೇಶದಿಂದ ಶಿವಾಜಿನಗರ ಬಸ್‌ ಡಿಪೋ ಅಭಿವೃದ್ಧಿ
– ಕೆ.ಆರ್‌.ಮಾರುಕಟ್ಟೆ ಮತ್ತು ರಸಲ್‌ ಮಾರುಕಟ್ಟೆಗಳ ಅಭಿವೃದ್ಧಿ
– ಉದ್ಯಾನಗಳ ಅಭಿವೃದ್ದಿ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಕ್ರಮ
– ಹಲಸೂರು ಕೆರೆ ಹಾಗೂ ಸ್ಯಾಂಕಿ ಕೆರೆಗಳ ಅಭಿವೃದ್ಧಿ
– ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಕ್ರಮ 
– ಸ್ಥಳೀಯ ಆಡಳಿತದಲ್ಲಿ ಪಾರದರ್ಶಕತೆ ತರಲು ಲೆಕ್ಕ ಪರಿಶೋಧನೆ ವರದಿಯನ್ನು ಸಾರ್ವಜನಿಕರಿಗೆ ಲಭ್ಯಗೊಳಿಸುವುದು 
– ನೆರೆಹೊರೆ ಸುರಕ್ಷತೆ ಹಾಗೂ ಸಮುದಾಯ ಪೊಲೀಸಿಂಗ್‌ ವ್ಯವಸ್ಥೆ
– ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೆಟುಕುವ ದರದಲ್ಲಿ ವಸತಿ ಸಂಕೀರ್ಣ ನಿರ್ಮಾಣ 

ಬಿಬಿಎಂಪಿ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾಭಿಪ್ರಾಯ ಮೂಡಿಸಿದ್ದರಿಂದ ಈ ಬಾರಿ ಖಂಡಿತ ಬೆಂಗಳೂರು ಆಯ್ಕೆಯಾಗುತ್ತದೆ ಎಂಬ ನಂಬಿಕೆಯಿತ್ತು. ಸ್ಮಾರ್ಟ್‌ಸಿಟಿ ಪ್ರದೇಶದಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳು ಉತ್ತಮವಾಗಿದ್ದರೆ, ಸರ್ಕಾರ ಅಂತಹ ಯೋಜನೆಗಳನ್ನು ನಗರದ ಉಳಿದ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆಗಳಿವೆ. 
– ವಿ.ರವಿಚಂದರ್‌, ನಗರ ತಜ್ಞ

ನಗರದ ಒಂದು ಭಾಗದಲ್ಲಿ ಕೆಲವೊಂದು ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸ್ಮಾರ್ಟ್‌ಸಿಟಿ ಎಂದು ಹೇಳಲು ಸಾಧ್ಯವಿಲ್ಲ. ನಗರದಾದ್ಯಂತ ಅಂತಹ ಯೋಜನೆಗಳನ್ನು ಜಾರಿ ಮಾಡಿದಾಗ ಮಾತ್ರ ಸ್ಮಾರ್ಟ್‌ಸಿಟಿ ಎಂದು ಹೇಳಬಹುದು. ಒಂದು ಭಾಗಕ್ಕೆ ಮಾತ್ರ ಸೀಮಿತವಾಗುವುದನ್ನು ಸ್ಮಾರ್ಟ್‌ ಪ್ರಾಜೆಕ್ಟ್ ಎಂದು ಕರೆಯಬಹುದು. ಸರ್ಕಾರಗಳು ಕೇಂದ್ರ ಸರ್ಕಾರ ನೀಡುವ ಹಣಕ್ಕಾಗಿ ಕಾಯುವುದು ಬಿಟ್ಟು ತನ್ನದೇ ಹಣದಲ್ಲಿ 224 ಕ್ಷೇತ್ರಗಳಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸಲಿ. ಸ್ಮಾರ್ಟ್‌ಸಿಟಿಗೆ ಕೇಂದ್ರ ಅನುದಾನ ಪಡೆದರೆ ಸಂವಿಧಾನ 74 ತಿದ್ದುಪಡಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಅಧಿಕಾರ  ಚಲಾಯಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯವಾಗಿ ಯಾವ ಯೋಜನೆ ಎಲ್ಲಿ ಅನುಷ್ಠಾನಗೊಳಿಸಬೇಕು ಎಂಬುದು ಸ್ಥಳೀಯ ಸಂಸ್ಥೆಗಳಿಗೆ ತಿಳಿದಿರುತ್ತದೆ. 
– ಅಶ್ವಿ‌ನ್‌ ಮಹೇಶ್‌, ನಗರ ಯೋಜನೆ ತಜ್ಞ

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುಮಾರು 29 ರೀತಿಯ ವಿಧಾನಗಳನ್ನು ನೀಡಲಾಗಿದ್ದು, ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸಲು ಮುಂದಾಗಬಾರದು. ನಗರದಲ್ಲಿರುವ ಪ್ರಮುಖವಾದ ಸಮಸ್ಯೆಯ ನಿವರಣೆಗೆ ಕೇಂದ್ರದಿಂದ ಬರುವ ಅನುದಾನ ಬಳಕೆ ಮಾಡಬೇಕು. ಎಲ್ಲ ಪ್ರದೇಶಗಳಿಗೆ ಕೇಂದ್ರದಿಂದ ಬರುವ ಅನುದಾನ ಹಂಚಿಕೆ ಮಾಡುವುದರಿಂದ ಯಾವುದೇ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ. 
– ಶ್ರೀಹರಿ, ಸಂಚಾರ ತಜ್ಞ

ಬೆಂಗಳೂರು ನಗರಾಭಿವೃದ್ಧಿ ಸಚಿವರು, ಮೇಯರ್‌ ಹಾಗೂ ಪಾಲಿಕೆಯ ಅಧಿಕಾರಿಗಳು ಒಳಗೂಡಿ ಉತ್ತಮವಾದ ಪ್ರಸ್ತಾವನೆ ಸಿದ್ಧಪಡಿಸಿದ್ದರಿಂದ ಬೆಂಗಳೂರು ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿದೆ. ಪಾಲಿಕೆಯಿಂದ ಈ ಹಿಂದೆ ಸಲ್ಲಿಕೆ ಮಾಡಲಾಗಿದ್ದ ಪ್ರಸ್ತಾವನೆಯಲ್ಲಿ ಇದ್ದ ಲೋಪಗಳನ್ನು ಸರಿಪಡಿಸಿಕೊಳ್ಳಲಾಗಿದ್ದು, ಮೂಲಸೌಕರ್ಯ, ಪಾದಚಾರಿ ಮಾರ್ಗ, ಕೆರೆಗಳ ಅಭಿವೃದ್ಧಿ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡಿರುವ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. 
– ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ 

ಕಳೆದ ಬಾರಿ ವೈಟ್‌ಫೀಲ್ಡ್‌ ಪ್ರಸ್ತಾವನೆ ಕಳಿಸಲಾಗಿತ್ತು. ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಈ ಬಾರಿ ಸೆಂಟ್ರೆಲ್‌ ಬ್ಯುಸಿನೆಸ್‌ ಡಿಸ್ಟ್ರಿಕ್ಟ್’ (ಸಿಬಿಡಿ) ಪ್ರಸ್ತಾವನೆ ಕಳಿಸಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಮಾನದಂಡಗಳ ಪ್ರಕಾರ ಸಿಬಿಡಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’.
– ಕೆ.ಜೆ. ಜಾರ್ಜ್‌, ಬೆಂಗಳೂರು ಅಭಿವೃದ್ಧಿ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next