ಕೋಲ್ಕತಾ: ಪೆಟ್ಟು ತಿಂದ ಹುಲಿ ಪ್ರತೀಕಾರ ತೀರಿಸಿಕೊಳ್ಳುತ್ತದೆಂಬ ಮಾತನ್ನು ನಿಜ ಮಾಡಿದ ಬೆಂಗಾಲ್ ಹುಲಿಗಳು, ತವರಿನ ನೆಲದಲ್ಲಿ ತನ್ನ ಸಾಂಕ ಹೋರಾಟದಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ರೋಚಕ ಹಣಾಹಣಿಯಲ್ಲಿ ಮಣಿಸಿತು. 2 ಬಾರಿ ಮನೆ ಖಾಲಿ ಮಾಡಿಕೊಂಡು, ತೀವ್ರ ಹಿನ್ನೆಡೆ ಅನುಭವಿಸಿದ್ದ ಬೆಂಗಾಲ್ ವಾರಿಯರ್ಸ್‌ನ ಪ್ರತಿಹೋರಾಟಕ್ಕೆ ಪೈರೇಟ್ಸ್ ಬೆಚ್ಚಿ, 41-38 ಅಂತರದಿಂದ ಸೋಲನ್ನಪ್ಪಿತು.
ಇಲ್ಲಿನ ನೇತಾಜಿ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಕೇಳಿಬಂದ ಕೂಗು ಒಂದೇ; ಸಿಂಗ್ ಈಸ್ ಕಿಂಗ್! ಅದಕ್ಕೆ ತಕ್ಕಂತೆ ಕೊನೆಯ ಹಂತದಲ್ಲಿ ಭರ್ಜರಿಯಾಗಿ ಆಡಿದ ಮಣಿಂದರ್ ಸಿಂಗ್, ಒಟ್ಟಾರೆ 19 ರೈಡ್‌ನಿಂದ 13 ಪಾಯಿಂಟ್ ಕಲೆಹಾಕಿ, ಬೆಂಗಾಲಿ ಪಡೆಗೆ ಆಸರೆಯಾದರು.
ಪಾಟ್ನಾಗೆ ಆರಂಭದ ಮುನ್ನಡೆ: ಮೊದಲಾರ್ಧದಲ್ಲಿ ಬೆಂಗಾಲ್ ಹುಲಿಗಳ ಗುಹೆಗೆ ನುಗ್ಗಿದ ಪಾಟ್ನಾ ಹುಡುಗರು ಒಂದು ಹಂತದಲ್ಲಿ ಮೇಲುಗೈ ಸಾಧಿಸಿ, 14-18ರ ಮುನ್ನಡೆ ಪಡೆದಿದ್ದರು. ಮೇಲಿಂದ ಮೇಲೆ ರೈಡ್ ಹೋದ ನಾಯಕ ಪ್ರದೀಪ್ ನರ್ವಾಲ್, ಮೋನು ಗೋಯೆತ್ ಅವರ ಅದ್ಭುತ ಕ್ಯಾಚ್‌ಗಳು ಬೆಂಗಾಲ್ ಯೋಧರಿಗೆ ಆಘಾತ ತಂದವು. ಪರಿಣಾಮ, 18ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ಆಲೌಟ್ ಆಯಿತು. ಪಂದ್ಯಾರಂಭದ 1ನೇ ನಿಮಿಷದಿಂದ ಆರಂಭವಾದ ಪ್ರದೀಪ್ ನರ್ವಾಲ್ ಭೇಟಿ, 11 ಅಮೋಘ ಪಾಯಿಂಟ್‌ಗಳನ್ನು ತಂದಿದ್ದವು. ಆದರೆ, ದ್ವಿತೀಯಾರ್ಧದಲ್ಲಿ ಮಾಡು ಮಾಡಿ ಹಂತದ ಪರಿವೇ ಇಲ್ಲದೆ ಮೈಮರೆತು ಆಡಿದ ಪಾಟ್ನಾ ನಾಯಕನ ಪ್ರಮಾದದಿಂದ ಪೈರೇಟ್ಸ್ ಸರಿಯಾದ ಬೆಲೆ ತೆರಬೇಕಾಗಿ ಬಂತು.
ಅಂತಿಮ ಹಂತದ ಹೋರಾಟ: ದ್ವಿತೀಯಾರ್ಧದ 6ನೇ ನಿಮಿಷದಲ್ಲಿ ಪಾಟ್ನಾದ ಮೋನ್ ಅವರಿಗೆ ಭರ್ಜರಿಯಾಗಿ ಕ್ಯಾಚ್ ಹಾಕಿದ ವಾರಿಯರ್ಸ್, 9ನೇ ನಿಮಿಷದಲ್ಲಿ ರೈಡಿಂಗ್ ಮೂಲಕ 2 ಪಾಯಿಂಟ್ ಕಲೆಹಾಕಿದಾಗ 21-27 ಅಂತರದಿಂದ ಪಾಟ್ನಾ ಮುಂದಿತ್ತು. 10ನೇ ನಿಮಿಷದಲ್ಲಿ ನರ್ವಾಲ್‌ಗೆ ಗೇಟ್ ಪಾಸ್ ಕೊಟ್ಟು, ಲೀ ಅವರ ರೈಡಿಂಗ್ ಪಾಯಿಂಟ್ ಮೂಲಕ ಪೈಪೋಟಿ ಕೊಟ್ಟ ವಾರಿಯರ್ಸ್, 18ನೇ ನಿಮಿಷದಲ್ಲಿ 38- 38 ಸಮಾನ ಅಂಕ ಪಡೆಯು ವವರೆಗೂ ಸಾಂ ಕ ಹೋರಾಟವನ್ನೇ ನಡೆಸಿತು. ಕೊನೆಯ ಹಂತದಲ್ಲಿ ಹೀರೋ ಆದ ಮಣಿಂದರ್ ಮೋಡಿಗೆ ಪಾಟ್ನಾ ತಲೆಬಾಗಲೇಬೇಕಾಗಿ ಬಂತು.
ಕೀರ್ತಿ ಕೋಲ್ಗಾರ್