Advertisement

ದೇಶಿ ಉದ್ಯಮದಲ್ಲಿ ನವೋದ್ಯಮ ಪರ್ವ ಆರಂಭ

06:30 AM Feb 16, 2019 | Team Udayavani |

ಬೆಂಗಳೂರು: ದೇಶಿಯ ಉದ್ಯಮ ವಲಯದಲ್ಲಿ ಯುವ ಉದ್ಯಮಿಗಳ ನವೋದ್ಯಮ ಪರ್ವ ಆರಂಭವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ.ಟಿ.ವಿ.ಪ್ರಭಾಕರ್‌ ಹೇಳಿದರು.

Advertisement

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಶುಕ್ರವಾರ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನವೋದ್ಯಮದಲ್ಲಿ ಅನ್ವೇಷಣೆ ಮತ್ತು ಕೃತಕ ಬುದ್ಧಿಮತ್ತೆ ವಿಷಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರ್ಯಾಡಾರ್‌ ವ್ಯವಸ್ಥೆ ಇನ್ನಷ್ಟು ಸದೃಢ ಹಾಗೂ ವಿಸ್ತೃತವಾಗುತ್ತಿದೆ. ಪೈಲಟ್‌ ಇಲ್ಲದೇ ವಿಮಾನ ಲ್ಯಾಂಡ್‌ ಆಗುವ ವ್ಯವಸ್ಥೆಯೂ ಇನ್ನುಮುಂದೆ ಬರಲಿದೆ. ಕಾರುಗಳಲ್ಲೂ ಹೊಸ ತಂತ್ರಜ್ಞಾನದ ಅಳವಡಿಕೆ ವ್ಯಾಪಕವಾಗುತ್ತಿದೆ. ಹೀಗಾಗಿ ನಮ್ಮ ಅನ್ವೇಷಣಾ ಮಟ್ಟವೂ ಸುಧಾರಿಸುತ್ತಾ ಹೋಗಬೇಕು ಎಂದು ಹೇಳಿದರು.

ಯುವ ಉತ್ಸಾಹಿಗಳು ನವೋದ್ಯಮ ಆರಂಭಿಸುತ್ತಿರುವುದು ದೇಶಿಯ ಉದ್ಯಮ ರಂಗದಲ್ಲಿ ಕಂಡುಬರುತ್ತಿರುವ ಹೊಸ ಬೆಳವಣಿಗೆಯಾಗಿದೆ. ಕೆಲವು ವರ್ಷಗಳಿಂದ ದೇಶಿ ಉದ್ದಿಮೆಯಲ್ಲಿ ನವೋದ್ಯಮದ ಗಾಳಿ ಜೋರಾಗಿ ಬೀಸುತ್ತಿದೆ ಎಂದರು.

ಬೆಂಗಳೂರು, ದೇಶದ ಸ್ಟಾರ್ಟ್‌ಅಪ್‌ ರಾಜಧಾನಿ ಎಂಬ ಹೊಸ ಹೆಗ್ಗಳಿಕೆಗೂ ಭಾಜನವಾಗುತ್ತಿದೆ. ಸ್ಟಾರ್ಟ್‌ಅಪ್‌ ಎನ್ನುವುದು ಉದ್ಯಮ ಲೋಕದಲ್ಲಿ ಹೊಸದೇನೂ ಅಲ್ಲ. ಕೈಗಾರಿಕೆ ಮತ್ತು ಉದ್ದಿಮೆಗಳು ಆರಂಭವಾದಾಗಿನಿಂದ ಹೊಸ ಹೊಸ ಕಂಪನಿಗಳು ಹುಟ್ಟಿಕೊಳ್ಳುತ್ತಲೇ ಇವೆ ಎಂದರು.

Advertisement

ಹೊಸ ಉದ್ಯೋಗ ಸೃಷ್ಟಿಸುವ ಬೇಡಿಕೆ ಮತ್ತು ಅಗತ್ಯತೆಗಳನ್ನು ಪೂರೈಸುವ ಮೊದಲ ತಲೆಮಾರಿನ ಉದ್ಯಮಶೀಲರ ಪ್ರಯತ್ನ ಸ್ಟಾರ್ಟ್‌ಅಪ್‌ಗ್ಳಿಂದ ಆರಂಭವಾಗುತ್ತಿದೆ. ಉದ್ಯಮದ ಅಭಿವೃದ್ಧಿ ಹೊಸ ಉತ್ಪನ್ನಗಳ ವಾಣಿಜ್ಯೀಕರಣ, ತಂತ್ರಜ್ಞಾನ ಅಥವಾ ಬೌದ್ಧಿಕ ಆಸ್ತಿಗಳಿಂದ ಪ್ರೇರಿತವಾದ ಸೇವೆಗಳು ಸ್ಟಾರ್ಟ್‌ಅಫ್ಗಳಾಗಿವೆ. ನಮ್ಮಲ್ಲಿರುವ ತಂತ್ರಜ್ಞಾನಗಳನ್ನು ಬಳಸಿ ಹೊಸ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾಸಿಯಾ ಅಧ್ಯಕ್ಷ ಬಸವರಾಜ್‌ ಎಸ್‌. ಜವಳಿ ಮಾತನಾಡಿ, ಬಹುದೊಡ್ಡ ಬಳಕೆದಾರರ ವಿವಿಧ ಬಗೆಯ ಅಗತ್ಯತೆ ಹಾಗೂ ಆಶೋತ್ತರಗಳನ್ನು ಈಡೇರಿಸುವ ಉದ್ದಿಮೆಗಳನ್ನು ಸ್ಥಾಪಿಸುವ ಪ್ರವೃತ್ತಿ ಯುವ ತಂತ್ರಜ್ಞರಲ್ಲಿ ಹೆಚ್ಚಾಗಿದೆ.

ಉದಯೋನ್ಮುಖ ಮಾರುಕಟ್ಟೆಗಳ ಮೇಲೆ  ಸ್ಟಾರ್ಟ್‌ ಅಪ್‌ಗ್ಳ ಗಮನ ಕೇಂದ್ರೀಕರಣ, ವ್ಯವಹಾರ ಮತ್ತು ಬೆಳವಣಿಗೆಗೆ ಹೊಸ ಉದ್ಯಮವು ಹಲವು ಅವಕಾಶಗಳನ್ನು ಒದಗಿಸುತ್ತಿದೆ ಎಂದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪಬಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next