Advertisement
ಇವು ಕಬ್ಬನ್ ಉದ್ಯಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ದೃಶ್ಯಗಳು. ಹೌದು, ತೋಟಗಾರಿಕೆ ಇಲಾಖೆಯ ಬದ್ಧತೆ ಕೊರತೆ ಹಾಗೂ ಸಾರ್ವಜನಿಕರ ಅಸಹಕಾರದಿಂದಾಗಿ ಕಬ್ಬನ್ ಉದ್ಯಾನ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದು, ಉದ್ಯಾನ ಸಮಸ್ಯೆಗಳ ಆಗರವಾಗಿ ಪ್ರವಾಸಿಗರಿಂದ ದೂರಾಗುತ್ತಿದೆ.
Related Articles
Advertisement
ಪಾರ್ಕ್ ತುಂಬಾ ಪಾತ್ ವೇ: ಉದ್ಯಾನಕ್ಕೆ ಬರುವ ಪ್ರವಾಸಿಗರು ಕಾಂಕ್ರಿಕ್ ಪಾದಾಚಾರಿ ಮಾರ್ಗವನ್ನು ಬಿಟ್ಟು ಉದ್ಯಾನದ ಹುಲ್ಲುಹಾಸು(ಲಾನ್) ಸೇರಿದಂತೆ ಎಲ್ಲಾ ಭಾಗಗಳಲ್ಲೂ ಅಡ್ಡಾದಿಡ್ಡಿಯಾಗಿ ಓಡಾಡುತ್ತಾರೆ. ಇದರಿಂದಾಗಿ ಉದ್ಯಾನದ ಎಲ್ಲಾ ಭಾಗಗಳಲ್ಲೂ ಹುಲ್ಲುಹಾಸಿನ ಮಧ್ಯೆ ನೂರಾರು ಪಾದಾಚಾರಿ ಮಾರ್ಗಗಳು ಸೃಷ್ಟಿಯಾಗಿವೆ. ಜತೆಗೆ ಹೂ ಗಿಡಗಳನ್ನು ಮುಟ್ಟಬಾರದು, ನಿರ್ಬಂಧಿತ ಪ್ರದೇಶ ಎಂಬ ನಾಮಫಲಕಗಳಿದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ರಸ್ತೆ ಹಾದು ಹೋಗಿರುವುದರಿಂದ ಈ ಮಾರ್ಗದಲ್ಲಿ ಬರುವ ಬೈಕ್‌ಗಳ ಉದ್ಯಾನದ ವಿವಿಧೆಡೆ ನಿಂತಿರುತ್ತವೆ. ಇನ್ನು ಈ ಕುರಿತು ಪ್ರಶ್ನಿಸುವುದಕ್ಕೆ ಯಾವ ಭದ್ರತಾ ಸಿಬ್ಬಂದಿಯೂ ಉದ್ಯಾನದಲ್ಲಿ ಕಾಣಿಸುವುದಿಲ್ಲ.
ಭದ್ರತೆಯ ಕೊರತೆ: ಉದ್ಯಾನದಲ್ಲಿ ಪ್ರಸ್ತುತ 24 ಮಂದಿ ಗುತ್ತಿಗೆ ಆಧಾರಿತ ಭದ್ರತಾ ಸಿಬ್ಬಂದಿ ಹಾಗೂ 10 ಸಿಸಿ ಕ್ಯಾಮರಾಗಳಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ವಾಯುವಿಹಾರಿಗಳು ಹಾಗೂ ಪ್ರವಾಸಿಗರಿಂದ ಭದ್ರತೆ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಉದ್ಯಾನಕ್ಕೆ ಉಚಿತ ಪ್ರವೇಶವಿರುವುದರಿಂದ ಕಿಡಿಗೇಡಿಗಳ ದಂಡು, ಅಕ್ಕಪಕ್ಕದ ಕಾಲೇಜುಗಳ ವಿದ್ಯಾರ್ಥಿಗಳು, ಪ್ರೇಮಿಗಳು ಬೆಳಗ್ಗೆಯಿಂದ ಸಂಜೆವರೆಗೂ ಇಲ್ಲಿಯೇ ಠಿಕಾಣಿ ಹಾಕುತ್ತಾರೆ. ಇವರುಗಳಿಂದಲೇ ಸಾದಾ ಪಾರ್ಕ್ ತುಂಬಿರುತ್ತದೆ. ಇದರ ಜತೆಗೆ ಉದ್ಯಾನದಲ್ಲಿ ಬೀದಿ ನಾಯಿಗಳ ಕಾಟವೂ ಹೆಚ್ಚಾಗಿಯೇ ಇದೆ. ಹೀಗಾಗಿಯೇ ಕುಟುಂಬ ಸದಸ್ಯರೊಂದಿಗೆ ಪಾರ್ಕ್‌ಗೆ ಬರಲು ಮನಸಾಗುವುದಿಲ್ಲ ಎನ್ನುತ್ತಾರೆ ವಾಯುವಿಹಾರಿ ಡಾ.ಸೃಜನಾ.
ಪ್ರವಾಸಿಗರ ಅಸಹಕಾರ: ಉದ್ಯಾನವನ್ನು ನಾಲ್ಕು ಭಾಗಗಳಾಗಿ ಮಾಡಿ 2.4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಆದರೆ, ಒಂದು ಕಡೆ ಹುಲ್ಲುಹಾಸು ನಿರ್ಮಾಣ ಮಾಡುತ್ತಿದ್ದರೆ, ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರು ನಾಟಿ ಮಾಡಿರುವ ಹುಲ್ಲು ಹಾಗೂ ಚಿಕ್ಕ ಗಿಡಗಳ ಮೇಲೆ ನಡೆದಾಡಿ ನಮ್ಮ ಕೆಲಸಗಳಿಗೆ ಸಾಕಷ್ಟು ತೊಂದರೆ ನೀಡುತ್ತಿದ್ದಾರೆ. ಎರಡು ತಿಂಗಳಲ್ಲಿ ಮುಗಿಯಬೇಕಾದ ಟೆಂಡರ್ ಐದು ತಿಂಗಳಾದರೂ ಮುಗಿಯುತ್ತಿಲ್ಲ ಎಂದು ಗಂಗಾ ಕಂಪನಿ ಗುತ್ತಿಗೆದಾರರು ಆರೋಪಿಸುತ್ತಾರೆ.
ಪ್ಲಾಸ್ಟಿಕ್ ಮುಕ್ತ ಕಬ್ಬನ್ ಯಾವಾಗ?: ಲಾಲ್‌ಬಾಗ್ ಉದ್ಯಾನದಲ್ಲಿ ನಾಲ್ಕು ತಿಂಗಳ ಹಿಂದೆಯೇ ಪ್ಲಾಸಿಕ್ ನಿಷೇಧ ಮಾಡಲಾಗಿದೆ. ಈಗಾಗಲೇ ಉದ್ಯಾನಕ್ಕೆ ಪ್ಲಾಸ್ಟಿಕ್ ತಂದವರಿಗೆ ದಂಡವನ್ನು ಹಾಕಲಾಗುತ್ತಿದೆ. ಆದರೆ, ಕಬ್ಬನ್ ಉದ್ಯಾನದಲ್ಲಿ ತಿಂಡಿ ತಿನಿಸುಗಳ ಕವರ್‌ಗಳು, ನೀರು ಕುಡಿದು ಬಿಸಾಕಿರುವ ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಕಾಣುತ್ತವೆ. ಹೀಗಾಗಿ, ಪ್ಲಾಸ್ಟಿಕ್ ನಿಷೇಧ ಇನ್ನು ಯಾವಾಗ ಎಂದು ಪರಿಸರವಾದಿಗಳ ಪ್ರಶ್ನೆಯಾಗಿದೆ.
ಉದ್ಯಾನದ ಸಮಸ್ಯೆಗಳಿಗೆ ಭದ್ರತೆ ವೈಫಲ್ಯವೇ ಕಾರಣ. ಹೊಸ ಕಾರ್ಯಕ್ರಮ ಆಯೋಜನೆಗಿಂತ ಮೂಲ ಸೌಕರ್ಯಕ್ಕೆ ತೋಟಗಾರಿಕೆ ಇಲಾಖೆ ಆದ್ಯತೆ ನೀಡಬೇಕು. ಈ ಬಾರಿ ಬಿಬಿಎಂಪಿ ಅನುಷ್ಠಾನಗೊಳಿಸುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಗತ್ಯವಾಗಿ ಉದ್ಯಾನದ ಸುತ್ತಲು ಕಾಂಪೌಂಡ್ ವ್ಯವಸ್ಥೆ ಮಾಡಿಸಬೇಕು. ಪ್ರವೇಶ ಶುಲ್ಕ ಆರಂಭಿಸಬೇಕು. ಆಗ ಮಾತ್ರ ಉದ್ಯಾನ ಉಳಿವು ಸಾಧ್ಯ.-ಉಮೇಶ್, ಅಧ್ಯಕ್ಷ, ಕಬ್ಬನ್ ಉದ್ಯಾನ ನಡುಗೆದಾರರ ಸಂಘ ಉದ್ಯಾನದ ಅಭಿವೃದ್ಧಿ ಕಾಮಗಾರಿಗೆ ಸಾರ್ವಜನಿಕರು ಸಹಕಾರ ನೀಡುತ್ತಿಲ್ಲ. ಹುಲ್ಲುಹಾಸು ನಾಟಿ ಮಾಡಿದ ಗಂಟೆಯೊಳಗೆ ಅದರ ಮೇಲೆ ನಡೆದಾಡುತ್ತಾರೆ. ಪಾದಾಚಾರಿ ಮಾರ್ಗದಲ್ಲಿ ಹೋಗುವಂತೆ ತಿಳಿಸಿದರೆ ನಮಗೆ ದಬಾಯಿಸುತ್ತಾರೆ.
-ಆದಿತ್ಯ, ಗುತ್ತಿಗೆದಾರ ಈ ಬಾರಿ ಟೆಂಡರ್‌ನಲ್ಲಿ 10 ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡುತ್ತಿದ್ದೇವೆ. ಬಿಸ್ಕಾಂ ಯೋಜನೆಯಲ್ಲಿ 100ಕ್ಕೂ ಹೆಚ್ಚು ಸಿಸಿ ಟಿವಿ ಬರುತ್ತಿವೆ. ಉದ್ಯಾನದಲ್ಲಿ ರಸ್ತೆ ಮಾರ್ಗ ಹಾದು ಹೋಗಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಾಹನ ಸಂಚಾರ ತಡೆಗೆ ಸಾಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
-ಮಹಾಂತೇಶ್ ಮುರುಗೋಡ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ * ಜಯಪ್ರಕಾಶ್ ಬಿರಾದಾರ್