ಮಳೆರಾಯನ ಆರ್ಭಟದ ಸಮಯ ಅಂದರೆ ಶಾಲಾ ಪ್ರಾರಂಭದ ದಿನಗಳವು. ಆಗಷ್ಟೇ ನಾನು ಏಳನೆಯ ತರಗತಿಗೆ ಮಂಗಳ ಹಾಡಿ ಎಂಟರ ಘಟ್ಟಕ್ಕೆ ಉತ್ಸಾಹದಿಂದ ಕಾಲಿಟ್ಟ ಶುಭಗಳಿಗೆ. ಮಳೆಹನಿಗಳ ಕಲರವಕ್ಕೆ ಮನಸ್ಸಿಲ್ಲದ ಮನಸ್ಸಿನಿಂದ ಶಾಲೇಗೋಗುವ ಅವಸರ. ಕುತ್ತಿಗೆ ಆವರಿಸುವಷ್ಟು ಬಟನ್ ಹಾಕಿ ಬ್ಯಾಗ್ ಹಿಡಿದು ಗೇಟ್ ಬಳಿ ಬರುವಾಗ ರಿಕ್ಷಾ ಅಂಕಲ್‌ನ ಪಾಂಕ್ ಪಾಂಕ್ ಹಾರ್ನ್ ಕಿವಿಗೆ ಅಪ್ಪಳಿಸುತ್ತಿದ್ದಾಗ ಓಡಿಬಂದು ನನ್ನ ಖಾಯಂ ಜಾಗ ಆಟೋದ ಹೊರಬದಿ ಮೂಲೆಯಲ್ಲಿ ಕೂರಿ ಮುಂದೆ ಹೋಗುತ್ತಿರಲು ಆ ಮಳೆಹನಿಗಳೊಡನೆ ಚೆಲ್ಲಾಟವಾಡುತ್ತಾ ಸಮವಸ್ತ್ರವನ್ನ ಅರೆಒದ್ದೆಮಾಡಿಕೊಂಡು ಶಾಲಾ ಆವರಣ ಹೊಕ್ಕೂ ದಿನಂಪ್ರತಿ ಪಾಠಗಳನ್ನ ಆಲಿಸುವುದೇ ಮಳೆಗಾಲದ ಒಂಥರದ ಮಜಾ. ಆದರೆ ಹೋಗುವ ದಾರಿಯಲ್ಲೊಂದು ಮಳೆಗಾಲದ ತಾತ್ಕಾಲಿಕ ಹೊಳೆ. ಅದು ಹೇಗಾಯಿತೆಂದರೆ…
ಶಾಲೆಯ ದಾರಿಯಲ್ಲಿ ಮನೆಯಿಂದ ನೂರು ಹೆಜ್ಜೆ ಅಂತರದಲ್ಲೊಂದು ರೇಲ್ವೆ ನಿಲ್ದಾಣ. ಅದನ್ನೇ ದಾಟಿ ದಿನದ ಕೈಂಕರ್ಯಗಳಿಗೆ ಸಾಗುವ ಅನಿವಾರ್ಯತೆ ಇಡೀ ಊರ ಪರಿಸರದ ಜನತೆಗೆ. ದಿನವಿಡೀ ರೈಲುಗಳ ಹಾವಳಿ ಹಳಿಮೇಲೆ ಜೋರಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ನೀಗಿಸುವ ಸಲುವಾಗಿ ಕೆಳಸೇತುವೆ ನಿರ್ಮಿಸಲೆಂದು ನಗರಪಾಲಿಕೆ ಅಧಿಕಾರಿಗಳೆಲ್ಲರ ಸಮ್ಮುಖದಲ್ಲೇ ಪ್ಲಾನ್ ಮಾಡಿದರು-ನಕ್ಷೆ ತಯಾರಿಸಿದರು. ಇದುವರೆಗೂ ಕಾಣದ ಯಂತ್ರಗಳೆಲ್ಲ ನಮ್ಮೂರಲ್ಲಿ ಕೆಳ ಸೇತುವೆಯ ಕೆಲಸಕ್ಕಾಗಿ ನೆಲೆಯಾದವು. ಊರ ಮಂದಿಯ ಮುಖದಲೆಲ್ಲಾ ಸಂತೋಷದ ಛಾಯೆ. ಕಾರಣ ಆ ರೈಲ್ವೆ ಗೇಟ್‌ನಿಂದ ಹಾಳಾಗುವ ಸಮಯದ ತೊಂದರೆಗೆಲ್ಲವೂ ಮುಕ್ತಿ ದೊರೆಯುವ ದಿನ ಬಂತೆಂದು. ಘಟಾನುಘಟಿ ಬಿಳಿಯ ಪ್ಯಾಂಟ್-ಶರ್ಟ್‌ಧಾರಿಗಳು, ದೊಡ್ಡ ಬುರುಡೆ (ಹಿರಿಯರು)ಯವರೆಲ್ಲರೂ ಬಂದು ಶಿಲಾನ್ಯಾಸವನ್ನೆಲ್ಲಾ ಮುಗಿಸಿಬಿಟ್ಟರು.ಅಂತೂ ಉಸಿರು ಬಿಡುವುದರೊಳಗಂತೂ ಅರೆಬೆಂದ ಅನ್ನದಂತೆ ವಕ್ರ ಗುರಿಯನ್ನ ಮುಂದಿಟ್ಟುಕೊಂಡು ಸೇತುವೆ ನಿರ್ಮಾಣದ ಹಂತ ಕೊನೆಗೊಂಡಿತು, ಅಧಿಕಾರಿಗಳು ಮನೆಸೇರಿಕೊಂಡರು. ಆದರೆ ಸಮಸ್ಯೆಗಳು ಉದ್ಭವಿಸಿದ್ದು ಆ ಬಳಿಕವೇ. ಹೇಗೆನ್ನುವಿರಾ?
ಇವೆಲ್ಲ ಕಾರ್ಯಗಳು ಬೇಸಿಗೆಯಲ್ಲಿ ನಡೆದಿದ್ದರಿಂದ, ಆ ಪ್ರದೇಶದಲ್ಲಿ ನೀರು ಒಸರು ಬಿಡುತ್ತಿದ್ದರಿಂದಲೂ ಮಳೆಗಾಲದ ಅವ್ಯವಸ್ಥೆಗೆ ನಾವೆಲ್ಲಾ ಸಿದ್ಧರಾಗಿ ಎನ್ನುವಂತೆ ಸೇತುವೆ ನಿರ್ಮಾಣವಾಗಿತ್ತು. ಹೀಗೆ ನಮ್ಮೆಲ್ಲರ ಅನುಮಾನವನ್ನು ಮಳೆರಾಯ ಹುಸಿಗೊಳಿಸಿರಲಿಲ್ಲ.
ಸೇತುವೆ ನಿರ್ಮಾಣದ ಬಳಿಕದ ಮೊದಲ ಮಳೆಗಾಲ ಅದಾಗಿತ್ತು. ಅಷ್ಟೊಂದು ಆರ್ಭಟದ ಮಳೆ ಅದಾಗಿಲ್ಲದಿದ್ದರೂ, ಒಂದೇ ಮಳೆಗೆ ಸೇತುವೆ ನೀರಿನಿಂದಾವ್ರತವಾಗುವ ಲಕ್ಷಣಗಳು ಕಣ್ಣಿಗೆ ಗೋಚರಿಸುತಿತ್ತು. ಮಳೆ ಜೋರಾಯಿತು- ಸೇತುವೆ ತುಂಬೆಲ್ಲಾ ನೀರು ತುಳುಕಲಾರಂಬಿಸಿತು. ನಾಗರಿಕರೆಲ್ಲರ ಬಾಯಲೆಲ್ಲ ಇಂಜಿನಿಯರನ ಗುಣಗಾನವೋ ಗುಣಗಾನ. ತಳುಕಿದ ಸೇತುವೆಯ ಕಂಡು ನಗಾಡಲೋ ಅಥವಾ ಅವ್ಯವಸ್ಥೆಯ ಕಂಡು ಪಶ್ಚಾತ್ತಾಪ ಪಡಲೋ? ಯಾರಿಗೇ ಬೈದರೇನು? ಯಾರನ್ನ ದೂಷಿಸಿದರೇನು? ನಮ್ಮ ಪಾಡು ಅರಿತವರೇ ಬಲ್ಲರು. ಒಂದೆಡೆ ರಾಜ್ಯ ಸರ್ಕಾರದ ಹತ್ತಿಪ್ಪತ್ತು ಭಾಗ್ಯಗಳೊಂದಿಗೆ ನಮ್ಮೂರಿಗೆ ಹೊಳೆಯ ಭಾಗ್ಯ ಎಂದು ನಾಗರಿಕರೆಲ್ಲ ಹಾಸ್ಯದ ಮಾತನಾಡುತ್ತಿದ್ದಂತೆಯೇ ಸೇತುವೆ ಅಂತೂ ಇನ್ನೂ ಕೂಡ ನೀರೊಂದಿಗೆ ಮೆರೆದಾಡುತ್ತಿತ್ತು. ಆ ತುಂಬಿದ ನೀರನ್ನ ದಾಟಿ ಮುಂದಿನ ಎಲ್ಲ ಕೆಲಸಕಾರ್ಯಗಳಿಗೋ, ಶಾಲೆಗೋ, ಒಟ್ಟಿನಲ್ಲಿ ಎಲ್ಲರೂ ಆ ತಾತ್ಕಾಲಿಕ ಹೊಳೆಯನ್ನ ದಾಟಿಯೇ ಮುಂದುವರಿಯುವ ಅನಿವಾರ್ಯತೆ ಇತ್ತು. ಬಸ್ಸು ಹಿಡಿಯುವ ಜನರಿಗೆಲ್ಲ ಅಷ್ಟೊಂದು ತಲೆನೋವಿನ ವಿಷಯವಾಗಿ ಕಂಡುಬರಲಿಲ್ಲ ಈ ಸೇತುವೆ. ಕಾರುಗಳೆನ್ನೇರಿ ಆಫೀಸ್ ಕಡೆ ಮುಖ ಮಾಡುವವರ ಪರಿಯೂ ಇದೇ ರೀತಿಯದ್ದು. ಇನ್ನು ಬೈಕ್ ಉಳ್ಳವರ ಸಾಹಸ ಪ್ರಯತ್ನಗಳನ್ನ ನಾವಿಲ್ಲಿ ನೋಡಿ ಒಮ್ಮೆ ನಕ್ಕು ಬಿಡಬಹುದು. ಅರ್ಧ ಹೋದೊಡನೆ ನಡುವಲ್ಲೇ ಅಡ್ಡ ಬೀಳುವಂತಾದ್ದು, ಬಂದ್ ಆಗುವಂತಾದ್ದು ಎಲ್ಲವೂ ಇದ್ದದ್ದೇ. ಆದರೆ ಇದನ್ನೆಲ್ಲಾ
ತಪ್ಪಿಸಲೆಂದೇ ಎಲ್ಲಾಬೈಕ್ ಸವಾರರೆಲ್ಲರೂ ಬದಿಗಿರುವ ಎತ್ತರದ ಪಾದಾಚಾರಿಗಳಿಗೆಂದೇ ನಿರ್ಮಿಸಿದ ಹಾದಿಯಲ್ಲಿ ಸಂಚರಿಸುತ್ತಿದ್ದರಿಂದ ಕಾಲ್ನಡಿಗೆದಾರರ ಹುಡುಗ-ಹುಡುಗಿಯರು ಪ್ಯಾಂಟ್- ಲಂಗ ಮೇಲೆತ್ತಿಕೊಂಡು ಆ ನೀರ ದಾಟುವ ಸಂದರ್ಭ ವಿಶೇಷವೇನೂ ಆಗಿರಲಿಲ್ಲ. ಏಕೆಂದರೆ, ಎಲ್ಲರೂ ಆ ನರಕದಲ್ಲಿ ಪಾಲ್ಗೊಳ್ಳುವವರೇ.
ನಮ್ಮ ಶಾಲೆಯ ಮಾರ್ಗವೂ ಅದುವೇ ಆಗಿತ್ತು. ಆದರೆ, ನಾವೆಲ್ಲ ರಿಕ್ಷಾದ ಪ್ರಯಾಣಿಕರು. ಈ ಸೇತುವೆಯ ಹಣೆಬರಹ ಕಂಡು ದಿನಾ ಅಲ್ಲಿ ಸಂಚರಿಸುವಾಗ “ಮೆಲ್ಲ ಮಕ್ಳ , ಗಟ್ಟಿ ಹಿಡ್ಕೊಳ್ಳಿ, ನೀರಿಗೇನಾದ್ರೂ ಬಿದ್ದುಬಿಟ್ಟಿರಾ’ ಎಂದು ನಮ್ಮೂರ ಭಾಷೆಯಲ್ಲಿ ರಿಕ್ಷಾ ಅಂಕಲ್ ಹೇಳುವುದುಂಟು. ರಿಕ್ಷಾದ ಎರಡು ಭಾಗಗಳಲ್ಲಿಯೂ ತೆರೆದಬಾಗಿಲಾಗಿದ್ದರಿಂದ ನೀರು ರಿಕ್ಷಾದ ಎಲ್ಲಾ ಭಾಗಗಳಿಂದ ನುಸುಳಿ ನಮ್ಮ ಕಾಲನ್ನೆಲ್ಲಾ ಒದ್ದೆಯಾಗಿಸದೇ ಬಿಡುತ್ತಿರಲಿಲ್ಲ. ಏನೂ ತಿಳಿಯದ ಎಳೆಯ ವಯಸ್ಸಿನ ನಾವು ಅದರಲ್ಲೂ ನಮ್ಮ ಆಟವನ್ನೇ ಕಾಣುತ್ತಿದ್ದೆವು. ಮಳೆಗಾಲಕ್ಕೆ ಎಷ್ಟು ದೊಡ್ಡ ಮಾರಿಯಾಗಿ ಪರಿಣಮಿಸಿತ್ತೆಂದರೆ ಸ್ವಂತ ವಾಹನಗಳನ್ನ ಮನೆಯಲ್ಲಿಟ್ಟು ಬಸ್ಸಲ್ಲಿ ಹೋಗುವಂತೆ ಮಾಡಿತ್ತು ಈ ಕೃತಕ ಹೊಳೆ. ದಿನ ಕಳೆಯಿತು- ನವರಾತ್ರಿ ಸಮೀಪಿಸಿತು. ನಮ್ಮೂರ ಶಾರದೆಯ ವಿಸರ್ಜನೆಯ ಶೋಭಾಯಾತ್ರೆಗೆ ಅದೇ ಮುಖ್ಯ ದಾರಿಯಾಗಿದ್ದರಿಂದ ಶಾರದಾ ಮಾತೆಯೂ ಅದರಲ್ಲೇ ಸಾಗಿದ ದೃಶ್ಯವೂ ನಮ್ಮ ಕಣ್ಣ ಮುಂದೆ ಇದೆ. ಇಷ್ಟೆಲ್ಲಾ ಆಗುತ್ತಿದಂತೆಯೇ ಈ ಸೇತುವೆಯ ಕಿಚ್ಚು ರಾಜಕೀಯ ರೂಪವ ತಾಳಿತು. ಆಡಳಿತ ಪಕ್ಷದ ಈ ಗತಿಹೀನ ಕಾರ್ಯ ವೈಖರಿಯನ್ನ ಕಂಡು ವಿರೋಧ ಪಕ್ಷ ತನ್ನದೊಂದು ಬಲೆ ಹೆಣೆಯುವ ಕಾರ್ಯಕ್ಕೆ ಮುಂದಾಯಿತು. ಅದೇ ನೋಡಿ ಗಮ್ಮತ್ತು. ಆ ಸೇತುವೆಯ ಪೋಟೋ ತೆಗೆದು ಬ್ಯಾನರ್ ಮಾಡಿಸಿ ಅದನ್ನ ಸೇತುವೆಯ ಆರಂಭದಲ್ಲಿ ಕಟ್ಟಿ ಬಾಳೆ-ಹೂವು ಮೊದಲಾದುವುಗಳಿಂದ ಶೃಂಗರಿಸಿ ಆಡಳಿತ ಪಕ್ಷ (ನಗರ ಪಾಲಿಕೆ)ಕ್ಕೆ ಈ ರೀತಿ ಛೀಮಾರಿ ಹಾಕಿತು.
ಬ್ಯಾನರ್‌ನಲ್ಲಿ ಮೇಲುಗಡೆ ಕೆಳಸೇತುವೆಯ ಈಜುಕೊಳ ಉದ್ಘಾಟನೆ ಎಂದು ಹಾಕಲಾಗಿತ್ತು. ಅದರಂತೆ ಕೆಳಗಡೆ ಉದ್ಘಾಟಕರು- ನಗರ ಆಯುಕ್ತರು, ಡೆಂಗ್ಯು- ಸೊಳ್ಳೆ ಘಟಕ ಎಂದೆಲ್ಲಾ ಅಧಿಕಾರಿಗಳ ಗಮನಕ್ಕೆ ಬರಲೆಂದೇ ಇಲ್ಲಿ ನಮೂದಿಸಲಾಗಿತ್ತು. ಈ ಪಕ್ಷಗಳ ಕಚ್ಚಾಟದಲ್ಲಿ, ಹಾಗೂ ಈ ಸೇತುವೆಯ ಅವ್ಯವಸ್ಥೆ ಗೊಣಗಾಟದಲ್ಲಿ ಈ ಬ್ಯಾನರ್ ನಾಗರಿಕರೆಲ್ಲರಿಗೂ ಹಾಸ್ಯದ ಬಾಡೂಟವನ್ನೇ ಬಡಿಸಿತ್ತು. ಕ್ರಮೇಣ ಅದನ್ನ ತೆರವುಗೊಳಿಸಲಾಗಿತ್ತು.
ಈ ಸೇತುವೆಯ ಬಗ್ಗೆ ಆಡದ ಮಾತುಗಳಿಲ್ಲ. ಸೇತುವೆ ನಿರ್ಮಾಣದ ಹಂತದಲ್ಲಿ ರಸ್ತೆ ಕಡಿತವಾಗಿದ್ದರಿಂದ ದಿನವೂ ಅಲ್ಲಿಯವರೆಗೆ ನಡೆದು ಅಲ್ಲಿಂದ ಬಸ್ಸು ಹಿಡಿದು ಮುಂದಿನ ಕಾರ್ಯಕ್ಕೆ ತೆರಳುತ್ತಿದ್ದ ನಾಗರಿಕರೆಲ್ಲರೂ ಹಳೆಯ ರೈಲ್ವೇ ಸೇತುವೆಯೇ ಇದ್ದಿದ್ದರೆ ಸಾಕಿತ್ತು ಎಂಬ ಮಾತನ್ನೇ ಪುನರುಚ್ಚರಿಸುತ್ತಿದ್ದರು. ಅದಲ್ಲದೇ ಕೆಲವು ಆಟೋಗಳು ಬಾಡಿಗೆಗೆ ಸೇತುವೆಯ ಈ ಕಡೆಗೆ ದೊರೆಯುತ್ತಿದ್ದರಿಂದ ನಡೆಯಲು ಅನನುಕೂಲದ ಜನತೆಗೆ ಇದು ಅನುಕೂಲವಾಗಿತ್ತು. ಒಟ್ಟಿನಲ್ಲಿ ಇಡೀ ಊರಿನ ಜನತೆಗೆ ಆ ದಿನಗಳು ಮನದಲ್ಲಿ ಮರುಕಳಿಸದೇ ಇರದು.
ಹೀಗೆ ತಲೆನೋವಿಗೆ ಕಾರಣವಾದ ಈ ಸೇತುವೆ ಹಾಸ್ಯದ ಹೊನಲನ್ನೇ ಸೃಷ್ಟಿಸಿತು. ಆದರೆ ಇಂದೂ ಕೂಡ ಮಳೆಗಾಲಕ್ಕೆ ಮಳೆರಾಯ ಅಂದಿಗಿಂತಲೂ ಕಡಿಮೆ ಅಂದರೆ ಡಿಸ್ಕೌಂಟ್‌ನಂತೆ ನಮಗೆ ತಾತ್ಕಾಲಿಕ ಹೊಳೆಯ ದರ್ಶನವನ್ನು ಮಾಡಿಸುತ್ತಾನೆ.
– ಗಣೇಶ ಪವಾರ್
ವಿ. ವಿ. ಕಾಲೇಜು, ಮಂಗಳೂರು