Advertisement

ಸೌಂದರ್ಯ ಲಹರಿ: ದ್ರಾಕ್ಷಿ ಹಾಗೂ ಕೇಶ ಸೌಂದರ್ಯ

12:34 PM Dec 02, 2020 | |

ದ್ರಾಕ್ಷಿ ಚರ್ಮ ಸೌಂದರ್ಯ ವರ್ಧಕವಾಗಿರುವಂತೆ, ಕೂದಲ ಸೌಂದರ್ಯವರ್ಧನೆಗೂ ಬಹೂಪಯೋಗಿ. ಹೊಳೆವ ಕಾಂತಿಯುತ ಕೂದಲು, ಸೊಂಪಾಗಿ ಕೂದಲು ಬೆಳೆಯಲು, ಕೂದಲು ಉದುರುವಿಕೆ ಹಾಗೂ ತಲೆಹೊಟ್ಟು ನಿವಾರಣೆ ಮಾಡಲು – ಹೀಗೆ ಹತ್ತುಹಲವು ಕೇಶಸಂಬಂಧೀ ತೊಂದರೆಗಳ ನಿವಾರಣೆಯಿಂದ ಕೇಶ ಸೌಂದರ್ಯ ವರ್ಧಿಸಲು ಈ ಕೆಳಗೆ ಹಲವು ದ್ರಾಕ್ಷಿಯ ಉಪಯೋಗಗಳನ್ನು ತಿಳಿಸಲಾಗಿದೆ.

Advertisement

ವಿವಿಧ ವಿಧಾನಗಳಿಂದ ಮನೆಯಲ್ಲೇ ತಯಾರಿಸಬಹುದಾದ ದ್ರಾಕ್ಷಿಯ ಈ ಕೇಶ ಸೌಂದರ್ಯವರ್ಧಕಗಳು ನಿತ್ಯ ಉಪಯೋಗಕ್ಕೆ ಅನುಕೂಲಕರವಾಗಿವೆ.

ದ್ರಾಕ್ಷಿಯ ಲೇಪ
ಬೀಜ ಸಹಿತವಿರುವ ಕಪ್ಪು ಅಥವಾ ಬಿಳಿ ಹಸಿದ್ರಾಕ್ಷೆ ಒಂದು ಬೌಲ್‌ನಷ್ಟು ತೆಗೆದುಕೊಂಡು ಮಿಕ್ಸರ್‌ನಲ್ಲಿ ತಿರುವಬೇಕು. ಈ ಪೇಸ್ಟ್‌ ನ್ನು ತುದಿ ಬೆರಳುಗಳಿಂದ ಮಾಲೀಶು ಮಾಡುತ್ತ ಕೂದಲಿಗೆ ಲೇಪಿಸಿ ಹೇರ್‌ ಮಾಸ್ಕ್ ಮಾಡಬೇಕು.

ದ್ರಾಕ್ಷಿಯ ಬೀಜದಲ್ಲಿ ಲಿನೋಲಿಕ್‌ ಆಮ್ಲದ ಅಂಶವಿರುವುದರಿಂದ ಕೂದಲಿನ ಹೊಟ್ಟು ನಿವಾರಕ ಹಾಗೂ ಕೂದಲು ಕಾಂತಿಯುತ ಹಾಗೂ ಸೊಂಪಾಗಿ ಬೆಳೆಯುತ್ತದೆ. ದ್ರಾಕ್ಷಿಯ ಈ ಹೇರ್‌ಮಾಸ್ಕ್ ಬಳಸಿ ಅರ್ಧ ಗಂಟೆಯ ಬಳಿಕ ಕೂದಲು ತೊಳೆಯಬೇಕು. ವಿಟಮಿನ್‌ “ಈ’ ಅಂಶವೂ ಸಮೃದ್ಧವಿರುವುದರಿಂದ ಇದು ಉತ್ತಮ ಹೇರ್‌ ಟಾನಿಕ್‌ ಕೂಡ ಆಗಿದೆ.

ಗ್ರೇಪ್‌-ವಿನೆಗರ್‌ ಹೇರ್‌ ರಿನ್ಸ್‌
15-20 ಕಪ್ಪು ದ್ರಾಕ್ಷಿಯನ್ನು ಚೆನ್ನಾಗಿ ಅರೆದು ಪೇಸ್ಟ್‌ ತಯಾರಿಸಬೇಕು. ಅದಕ್ಕೆ 1/3 ಕಪ್‌ನಷ್ಟು ಆ್ಯಪಲ್‌ ಸಿಡಾರ್‌ ವಿನೆಗರ್‌ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಒದ್ದೆ ಮಾಡಿದ ಕೂದಲಿಗೆ ಅಥವಾ ತಲೆಸ್ನಾನದ ಬಳಿಕ ಕೂದಲಿಗೆ ಲೇಪಿಸಿ 10 ನಿಮಿಷದ ಬಳಿಕ ಚೆನ್ನಾಗಿ ರಿನ್ಸ್‌ ಮಾಡಿದರೆ ಕೂದಲು ಕಾಂತಿಯುತವಾಗುತ್ತದೆ.

Advertisement

ಒಣ ಕೂದಲಿಗೆ ದ್ರಾಕ್ಷಿಯ ಹೇರ್‌ಪ್ಯಾಕ್‌
ಕೆಲವರಲ್ಲಿ ಕೂದಲು ಎಷ್ಟೇ ಆರೈಕೆ ಮಾಡಿದರೂ ಒಣಗಿದ್ದು ಕಾಂತಿಹೀನ ಹಾಗೂ ಒರಟಾಗಿರುತ್ತದೆ. ಅಂತಹ ಸಂದರ್ಭದಲ್ಲಿ ದ್ರಾಕ್ಷಿಯ ಈ ವಿಧಾನದ ಹೇರ್‌ಪ್ಯಾಕ್‌ ವಾರಕ್ಕೆ 1-2 ಸಾರಿ ಬಳಸಿದರೆ ಒಣಕೂದಲು ಸ್ನಿಗ್ಧವಾಗಿ ರೇಶಿಮೆಯ ನುಣಪನ್ನು ಪಡೆದುಕೊಳ್ಳುತ್ತದೆ.

ವಿಧಾನ: 20 ಕಪ್ಪು ದ್ರಾಕ್ಷಿ  , 10 ಚಮಚ ಬಟಾಣಿ ಹುರಿದು ಹುಡಿ ಮಾಡಿದ ಪುಡಿ, 2 ಚಮಚ ಮಂತ್ಯೆ ಹುರಿದು ಹುಡಿಮಾಡಿದ ಪುಡಿ ಇವೆಲ್ಲವನ್ನು ತೆಗೆದುಕೊಳ್ಳಬೇಕು. ದ್ರಾಕ್ಷಿಯನ್ನು ಚೆನ್ನಾಗಿ ಅರೆದು ಪೇಸ್ಟ್‌ ತಯಾರಿಸಿ ಒಂದು ಬೌಲ್‌ನಲ್ಲಿ ಹಾಕಿಡಬೇಕು. ತದನಂತರ ಇನ್ನೊಂದು ಬೌಲ್‌ನಲ್ಲಿ ಬಟಾಣಿ ಹುಡಿ ಹಾಗೂ ಮೆಂತ್ಯ ಹುಡಿ ಬೆರೆಸಿ ಅದಕ್ಕೆ ಸ್ವಲ್ಪ ನೀರು ಹಾಗೂ ಒಂದು ಚಮಚ ಆಲಿವ್‌ತೈಲ/ಕೊಬ್ಬರಿ ಎಣ್ಣೆ ಬೆರೆಸಬೇಕು. ತದನಂತರ ಈ ಮಿಶ್ರಣಕ್ಕೆ ಅರೆದ ದ್ರಾಕ್ಷಿಯ ಪೇಸ್ಟ್‌ ಬೆರೆಸಿ ಚೆನ್ನಾಗಿ ಕಲಸಿ, ಕೂದಲಿಗೆ ಲೇಪಿಸಬೇಕು. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಬೇಕು. ಇದರಿಂದ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗಿ ಕೂದಲು ಕಾಂತಿಯುತವಾಗಿ ಮೃದುವಾಗಿ ಹೊಳೆಯುತ್ತದೆ.

ತಲೆಹೊಟ್ಟು ನಿವಾರಕ ದ್ರಾಕ್ಷಿಯ ಹೇರ್‌ಪ್ಯಾಕ್‌
ತುರಿಕೆಯಿಂದ ಕೂಡಿದ, ಕಜ್ಜಿ ಹಾಗೂ ಗುಳ್ಳೆಗಳನ್ನು ಉಂಟುಮಾಡುವ ತಲೆಹೊಟ್ಟು ಕೂದಲು ಉದುರುವಂತೆ ಮಾಡುತ್ತದೆ. ಇದರ ನಿವಾರಣೆಗೆ ದ್ರಾಕ್ಷಿಯ ಈ ಹೇರ್‌ಪ್ಯಾಕ್‌ ಪರಿಣಾಮಕಾರಿ.

ವಿಧಾನ: 1/2 ಕಪ್‌ ಮೊಸರಿಗೆ, ಒಣದ್ರಾಕ್ಷಿಯನ್ನು (ಬೀಜ ಸಹಿತ) ಅರೆದು ಬೆರೆಸಬೇಕು. ಬೆಳ್ಳುಳ್ಳಿಯ ರಸ 4 ಚಮಚ ಬೆರೆಸಬೇಕು. ಒಂದು ಚಮಚ ಆಲಿವ್‌ ತೈಲ ಸೇರಿಸಬೇಕು. ಇವೆಲ್ಲವನ್ನು ಚೆನ್ನಾಗಿ ಮಿಶ್ರಮಾಡಿ ಕೂದಲಿಗೆ ಲೇಪಿಸಿ 1/2 ಗಂಟೆ ಬಿಡಬೇಕು. ತದನಂತರ ಬಿಸಿನೀರಿನಿಂದ ಕೂದಲು ತೊಳೆಯಬೇಕು. ಬೆಳ್ಳುಳ್ಳಿಯ ಬದಲಾಗಿ 6 ಚಮಚ ತುಳಸೀ ರಸ ಅಥವಾ 6 ಚಮಚ ಕಹಿಬೇವಿನ ರಸವನ್ನು ಬೆರೆಸಬಹುದು. ತುರಿಕೆಯುಳ್ಳ ತಲೆಹೊಟ್ಟಿನ ನಿವಾರಣೆಗೆ ಇದು ಪರಿಣಾಮಕಾರಿ.

Advertisement

Udayavani is now on Telegram. Click here to join our channel and stay updated with the latest news.

Next