Advertisement

ಕೊಬ್ಬರಿ ಎಣ್ಣೆಯಲ್ಲಿ  ಅಡಗಿದೆ ಸೌಂದರ್ಯ

03:50 AM Mar 17, 2017 | |

ಆಹಾರವೇ ಔಷಧಿ. ಆಹಾರದಿಂದಲೇ ಆರೋಗ್ಯ. ಅಂತೆಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಮನೆಯಲ್ಲಿಯೇ ಆರೋಗ್ಯ ರಕ್ಷಕ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಬಹುದು.

Advertisement

ಕೊಬ್ಬರಿ ಎಣ್ಣೆ ಮಾಯಿಶ್ಚರೈಸರ್‌ (ತೇವಾಂಶಕಾರಕವಾಗಿ) ಉಪಯೋಗ ಒಣ ಚರ್ಮವುಳ್ಳವರು ಅಥವಾ ಮೊಗದಲ್ಲಿ ತೇವಾಂಶ ಕಡಿಮೆ ಇರುವವರು, ಚರ್ಮ ಒರಟು, ರೂಕ್ಷವಾಗಿರುವವರು ಈ ಸುಲಭ ರೆಸಿಪಿ ಪ್ರಯೋಗಿಸಿದರೆ ಪರಿಣಾಮಕಾರಿ.

*ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಗೆ ಎರಡು ಚಮಚ ಹಾಲು ಬೆರೆಸಿ ಬೆರೆಸಿ ಮುಖಕ್ಕೆ ಲೇಪಿಸಿ ಮಾಲೀಶು ಮಾಡಬೇಕು. ಮರುದಿನ ಬೆಳಿಗ್ಗೆ ಬೆಚ್ಚಗೆ ನೀರಲ್ಲಿ ತೊಳೆದರೆ  ತೇವಾಂಶ ವೃದ್ಧಿಯಾಗಿ ಒಣಚರ್ಮದ ಕಾಂತಿಯು ಹೆಚ್ಚುತ್ತದೆ. ನಿತ್ಯ ಬಳಕೆ ಹಿತಕರ.

*ಕೊಬ್ಬರಿ ಎಣ್ಣೆ ಎರಡು ಚಮಚಕ್ಕೆ ಅಷ್ಟೇ ಕಾಯಿಹಾಲು ಹಾಗೂ ಎರಡು ಚಿಟಿಕೆ ಅರಸಿನ ಹುಡಿ ಬೆರೆಸಿ ಮುಖಕ್ಕೆ ರಾತ್ರಿ ಲೇಪಿಸಿ ಮಾಲೀಶು ಮಾಡಿ ಮರುದಿನ ತೊಳೆದರೆ ಒಣಚರ್ಮವಿದ್ದು ತುರಿಕೆ ಇರುವುದೂ ನಿವಾರಣೆಯಾಗುತ್ತದೆ.

ನೆರಿಗೆ ನಿವಾರಕ ಕೊಬ್ಬರಿ ಎಣ್ಣೆಯ ಬಳಕೆ
ಮೂರು ಚಮಚ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಬೇಕು. ತದನಂತರ ಅದರಲ್ಲಿ 4 ಹನಿ ಮೂಲಂಗಿ ರಸ, ಒಂದು ಚಮಚ ಸೌತೆಕಾಯಿ ರಸ ಬೆರೆಸಿ ಬೆಚ್ಚಗಿರುವಾಗಲೇ ಮುಖಕ್ಕೆ ಲೇಪಿಸಿ, ತುದಿ ಬೆರಳುಗಳಿಂದ ಮುಖದ ಚರ್ಮವನ್ನು  ಮೃದುವಾಗಿ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. ರಾತ್ರಿ ಲೇಪಿಸಿ ಮರುದಿನ ಬೆಳಿಗ್ಗೆ ಬೆಚ್ಚಗೆ ನೀರಲ್ಲಿ ತೊಳೆದರೆ ಮುಖದ ನೆರಿಗೆ ಸುಕ್ಕುಗಳು ನಿವಾರಣೆಯಾಗುತ್ತದೆ. ನಿತ್ಯ ಲೇಪನ ಪರಿಣಾಮಕಾರಿ.

Advertisement

ಕೊಬ್ಬರಿ ಎಣ್ಣೆಯ ಫೇಸ್‌ಪ್ಯಾಕ್‌
ಕೊಬ್ಬರಿ ಎಣ್ಣೆಯಷ್ಟೇ ಪ್ರಮಾಣದಲ್ಲಿ ಲ್ಯಾವೆಂಡರ್‌ ತೈಲ ತೆಗೆದುಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ ಚೆನ್ನಾಗಿ ಕಲಕಿ ಬಾಟಲ್‌ನಲ್ಲಿ ಹಾಕಿಡಬೇಕು. ಇದನ್ನು 1-2 ಚಮಚದಷ್ಟು ತೆಗೆದುಕೊಂಡು ಸ್ವಲ್ಪ ನೀರು ಬೆರೆಸಿ ಮುಖಕ್ಕೆ ಲೇಪಿಸಿ 3-4 ನಿಮಿಷದ ಬಳಿಕ ಮುಖ ತೊಳೆದರೆ ಈ ನೈಸರ್ಗಿಕ ಕೊಬ್ಬರಿ ಎಣ್ಣೆಯ ಫೇಸ್‌ವಾಶ್‌ನಿಂದ ಮುಖದ ಕಲೆ, ಕೊಳೆ, ಜಿಡ್ಡು ನಿವಾರಣೆಯಾಗಿ ಮುಖ ಶೀಘ್ರವಾಗಿ ಹೊಳೆಯುತ್ತದೆ.

ಕೊಬ್ಬರಿ ಎಣ್ಣೆಯ ಮೇಕಪ್‌ ರಿಮೂವರ್‌
ಕೊಬ್ಬರಿ ಎಣ್ಣೆಯನ್ನು ಒಂದು ಹತ್ತಿಯ ಉಂಡೆಗೆ ಲೇಪಿಸಿ ಮೇಕಪ್‌ ಮಾಡಿದ ಮುಖದ ಚರ್ಮ, ಕಣ್ಣಿನ ರೆಪ್ಪೆಗಳಿಗೆ ಮೃದುವಾಗಿ ಲೇಪಿಸಿ ತೆಗೆದರೆ ಕೊಬ್ಬರಿ ಎಣ್ಣೆಯೊಂದಿಗೆ ಮೇಕಪ್‌ನ ಅಂಶವೂ ಬರುವುದು. ಇದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ತದನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು. ಮುಖದ ತಾಜಾತನ ವರ್ಧಿಸಲು ತದನಂತರ ಕೊಬ್ಬರಿ ಎಣ್ಣೆ ಹಾಲು ಹಾಗೂ ಜೇನು ಮುಖಕ್ಕೆ ಲೇಪಿಸಿ, 15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದರೆ, ಮೇಕಪ್‌ ತೆಗೆದ ಬಳಿಕ ಮುಖ ತಾಜಾ ಹಾಗೂ ಚರ್ಮ ಫ್ರೆಶ್‌ ಆಗಿ ಉಳಿಯುತ್ತದೆ.

ಕೊಬ್ಬರಿ ಎಣ್ಣೆ-ಎಪ್ಸಮ್‌ ಲವಣದ ಟಬ್‌ಬಾತ್‌
ದೇಹದ ಚರ್ಮ ಮೃದು ಹಾಗೂ ಕಾಂತಿಯುತವಾಗಲು ಜೊತೆಗೆ ಮನಸ್ಸಿನ ಒತ್ತಡ ನಿವಾರಣೆಯಾಗಿ ಉಲ್ಲಾಸದಾಯಕವಾಗಲು ಈ ಬಗೆಯ ಟಬ್‌ಬಾತ್‌ ಹಿತಕರ.ಮನೆಯ ಸ್ನಾನದ ತೊಟ್ಟಿಯಲ್ಲಿ ಅಥವಾ ಒಂದು ದೊಡ್ಡ ಟಬ್‌ ಬೆಚ್ಚಗೆ ನೀರಿನಲ್ಲಿ 1/4 ಕಪ್‌ ಕೊಬ್ಬರಿ ಎಣ್ಣೆ , 1/4 ಕಪ್‌ ಎಪ್ಸಮ್‌ ಸಾಲ್ಟ್ ಹಾಗೂ 5 ಚಮಚ ಶ್ರೀಗಂಧದ ಪೇಸ್ಟ್‌ ಬೆರೆಸಬೇಕು. ಇದರಲ್ಲಿ ಕುಳಿತು ಟಬ್‌ಬಾತ್‌ ಅಥವಾ ಸ್ನಾನದ ನೀರಿನ ತೊಟ್ಟಿಯ ಸ್ನಾನ ಮಾಡಿದರೆ ಮನಸ್ಸು ಮುದಗೊಳ್ಳುತ್ತದೆ. ದೇಹದ ಚರ್ಮ ಮೃದು ಹಾಗೂ ಸ್ನಿಗ್ಧ ಶೀತಲವಾಗಿ ಕಾಂತಿ ಹೆಚ್ಚುತ್ತದೆ.

ಕೊಬ್ಬರಿ ಎಣ್ಣೆಯ ಮೌತ್‌ವಾಶ್‌
ಮುಖದ ದುರ್ವಾಸನೆ ನಿವಾರಣೆ ಮಾಡುವುದರೊಂದಿಗೆ ಹಲ್ಲು-ವಸುಡುಗಳು ಆರೋಗ್ಯ ಹಾಗೂ ಸೌಂದರ್ಯ ವರ್ಧಿಸುವ ಕೊಬ್ಬರಿ ಎಣ್ಣೆಯ ಮೌತ್‌ವಾಶ್‌ ಇಂತಿದೆ: ಸಮಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ , ಬೇಕಿಂಗ್‌ ಸೋಡಾ ಬೆರೆಸಿ ದ್ರಾವಣ ತಯಾರಿಸಬೇಕು. ಅದಕ್ಕೆ 8-10 ಹನಿ ಪೆಪ್ಪರ್‌ಮಿಂಟ್‌ ತೈಲ ಬೆರೆಸಬೇಕು. ಈ ಮೌತ್‌ವಾಶ್‌ ನಿತ್ಯ ಬಳಸಿದರೆ ದಂತಪಕ್ತಿ ಶುಭ್ರವಾಗಿ ಹೊಳೆಯುತ್ತದೆ. ವಸಡು ಕೂಡ ಆರೋಗ್ಯಯುತವಾಗಿ ರಕ್ತವರ್ಣದಿಂದ ಕಂಗೊಳಿಸುತ್ತದೆ. ಮುಖ ಸುವಾಸನೆಯಿಂದ ಕೂಡಿ ಆಹ್ಲಾದಕರವಾಗಿರುತ್ತದೆ.

ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next