ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಗೆ ನುಗ್ಗಿ ಕೆಎಎಸ್ ಅಧಿಕಾರಿ, ಬಿಡಿಎ ಕಾರ್ಯದರ್ಶಿ ಬಸವರಾಜು ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆನೆಪಾಳ್ಯ ನಿವಾಸಿಗಳಾದ ರಾಣಿ, ಶಶಿ ಮತ್ತು ರಾಜು ಬಂಧಿತರು. ಜೂ.2ರಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ನಿವೇಶನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಬಳ್ಳಾರಿ ರಸ್ತೆಯಲ್ಲಿರುವ ಬಿಡಿಎ ಕೇಂದ್ರ ಕಚೇರಿಗೆ ನುಗ್ಗಿ ಬಸವರಾಜು ಅವರ ಮೇಲೆ ಹಲ್ಲೆ ನಡೆಸಿದ್ದರು.
ಅಲ್ಲದೆ, ಇದನ್ನು ತಡೆಯಲು ಬಂದ ಬಿಎಂಟಿಎಫ್ (ಬಿಡಿಎ ಜಾಗೃತ ದಳ) ಪೊಲೀಸರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದರು. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ಏನಿದು ಗಲಾಟೆ?: ಜೂ.2ರಂದು ಅರ್ಕಾವತಿ ಬಡವಾಣೆಯ ನಿವೇಶನ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಆರೋಪಿಗಳು ಬಸವರಾಜು ಕೊಠಡಿಗೆ ನುಗ್ಗಿ ಆಕ್ರೋಶವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಇಲ್ಲಿನ 17ನೇ ಬ್ಲಾಕ್‌ನ ನಿವೇಶನ ಸಂಖ್ಯೆ 501ರ ಕುರಿತು ಪ್ರಸ್ತಾಪಿಸಿ ಬಸವರಾಜು ಅವರ ವಿರುದ್ಧ ಏಕವಚನದಲ್ಲಿ ನಿಂದಿಸಿದಲ್ಲದೆ, ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆಗೆ ಯತ್ನಿಸಿದ್ದರು ಎನ್ನಲಾಗಿದೆ.
ಈ ವೇಳೆ ಕಚೇರಿಯ ಸಿಬ್ಬಂದಿ ಸಮಾಧಾನ ಪಡಿಸಲು ಯತ್ನಿಸಿದರಾದರೂ, ಆರೋಪಿಗಳು ಕೂಗಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಬಿಡಿಎ ಜಾಗೃತ ದಳದ ಅಧಿಕಾರಿಗಳಿಗೂ ನಿಂದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.