Advertisement

ಐಪಿಎಲ್‌ ಕೆಲಸದ ಒತ್ತಡ ಯುವ ಪ್ರತಿಭೆಗಳ ರಕ್ಷಿಸಲು ಬಿಸಿಸಿಐ ಯತ್ನ

07:30 AM Apr 18, 2018 | Team Udayavani |

ಹೊಸದಿಲ್ಲಿ: ಐಪಿಎಲ್‌ನಲ್ಲಿ ಆಡುತ್ತಿರುವ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಪ್ರತಿಭೆಗಳನ್ನು ರಕ್ಷಿಸಲು ಬಿಸಿಸಿಐ ಮುಂದಾಗಿದೆ. ಐಪಿಎಲ್‌ನಲ್ಲಿ ವೇಳಾಪಟ್ಟಿ ಬಿಗುವಿನಿಂದ ಕೂಡಿರುತ್ತದೆ. ಬಿಡುವು ಕಡಿಮೆಯಿರುತ್ತದೆ. ಸಹಜವಾಗಿ ಯುವ ಪ್ರತಿಭೆಗಳ ಮೇಲೆ ಕಾರ್ಯದೊತ್ತಡ ಇರುತ್ತದೆ. ಇದರಿಂದ ಈ ಆಟಗಾರರು ಸಮಸ್ಯೆಗೊಳಗಾಗುವುದನ್ನು ತಪ್ಪಿಸಲು ಬಿಸಿಸಿಐ ಇಂತಹ ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕಾಗಿ 23 ಪ್ರತಿಭೆಗಳ ಮೂರು ಹಂತದ ಪಟ್ಟಿ ತಯಾರಿಸಿದೆ.

Advertisement

ಉದಾಹರಣೆಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆಡುತ್ತಿರುವ ವೇಗಿ ಶಿವಂ ಮವಿಗೆ ತಂಡದ ತರಬೇತುದಾರರು ಅಭ್ಯಾಸದ ವೇಳೆ 60ರಿಂದ 100 ಎಸೆತಗಳನ್ನು ಎಸೆಯುವಂತೆ ಹೇಳಬಹುದು. ಆರ್‌ಸಿಬಿಯಲ್ಲಿ ಆಡುತ್ತಿರುವ ವೇಗಿ ನವದೀಪ್‌ ಸೈನಿಗೂ ಹೀಗೆಯೇ ಹೇಳಬಹುದು. ಇಂತಹ ಸಂದರ್ಭದಲ್ಲಿ ಬಿಸಿಸಿಐ ಮಧ್ಯಪ್ರವೇಶಿಸಿ ಈ ಪ್ರತಿಭೆಗಳು ನಮ್ಮ ಆಸ್ತಿ, ಅವರಿಗೆ ಹೆಚ್ಚಿನ ಒತ್ತಡ ಹೇರಬೇಡಿ ಎಂದು ಎಚ್ಚರಿಸುತ್ತದೆ. ಭುವನೇಶ್ವರ್‌ ಕುಮಾರ್‌ನಂತ ಬೌಲರ್‌ಗಳು ಅವರ ದೇಹಸ್ಥಿತಿ ಮತ್ತು ಕೆಲಸದ ಒತ್ತಡವನ್ನು ಅರಿತಿರಬಹುದು. ಆದರೆ ಮವಿ, ನವದೀಪ್‌ ಅಥವಾ ಅವೇಶ್‌ ಖಾನ್‌ ಅವರಂಥ ಬೌಲರ್‌ಗಳ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ. ನಾವು ಅವರ ರಕ್ಷಣೆಗೆ ಬರಬೇಕಾಗಿದೆ. ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ನಾವು ಈ ಕ್ರಮ ಕೈಗೊಳ್ಳಲಿದ್ದೇವೆ ಎಂದು ಭಾರತೀಯ ಕ್ರಿಕೆಟ್‌ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ಬೌಲರ್‌ಗಳ ತರಬೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯ ತರಬೇತುದಾರರು ಮತ್ತು ಫಿಸಿಯೋ ಗಮನಿಸಲಿದ್ದಾರೆ ಅಲ್ಲದೇ ಪ್ರತಿ ಫ್ರಾಂಚೈಸಿಗಳ ದೈಹಿಕ ತರಬೇತುದಾರರು ಮತ್ತು ಫಿಸಿಯೋಗಳು ಪ್ರತಿ ಆಟಗಾರರ ಮೇಲಿರುವ ಕಾರ್ಯದೊತ್ತಡದ ಕುರಿತು ಆಗಾಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಬಿಸಿಸಿಐಯ ಕೇಂದ್ರೀಯ ಗುತ್ತಿಗೆಯಲ್ಲಿ ಇರದ 23 ಭರವಸೆಯ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಅಥವಾ “ಎ’ ತಂಡದಲ್ಲಿ ಸ್ಥಾನ ಪಡೆಯಲು ಯೋಗ್ಯರಾದ ಆಟಗಾರರು ಇದರಲ್ಲಿ ಸೇರಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಮೂರು ಬಣಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಬಣದಲ್ಲಿ ಹಾಲಿ ಅಂಡರ್‌-19 ಆಟಗಾರರು ಇರಲಿದ್ದಾರೆ. ಅಂಡರ್‌-19ನ ಹಳೆಯ ಆಟಗಾರರು ಎರಡನೇ ಬಣದಲ್ಲಿದ್ದಾರೆ. ಕಳೆದ ಮೂರರಿಂದ ನಾಲ್ಕು ವರ್ಷ ಅಂಡರ್‌ 19ರಲ್ಲಿ ಆಡಿದ ಆಟಗಾರರು ಈ ಬಣದಲ್ಲಿ ಇರಲಿದ್ದಾರೆ. ಹಾಲಿ ಭಾರತ “ಎ’ ತಂಡದ ಆಟಗಾರರು ಮೂರನೇ ಬಣದಲ್ಲಿರಲಿದ್ದಾರೆ.

ಹಾಲಿ ಅಂಡರ್‌-19 ಆಟಗಾರರು: ಪೃಥ್ವಿ ಶಾ, ಶುಭ ಗಿಲ್‌, ಶಿವಂ ಮವಿ ಮತ್ತು ಕಮಲೇಶ್‌ ನಗರ್‌ಕೋಟಿ.ಹಳೇ ಅಂಡರ್‌-19: ಇಶಾನ್‌ ಕಿಶನ್‌, ರಿಷಬ್‌ ಪಂತ್‌, ಅವೇಶ್‌ ಖಾನ್‌, ಖಲೀಲ್‌ ಅಹ್ಮದ್‌, ಸಂಜು ಸ್ಯಾಮ್ಸನ್‌ ಭಾರತ  “ಎ’: ಶ್ರೇಯಸ್‌ ಅಯ್ಯರ್‌, ವಾಷಿಂಗ್ಟನ್‌ ಸುಂದರ್‌, ವಿಜಯ್‌ ಶಂಕರ್‌, ಜಯದೇವ್‌ ಉನಾದ್ಕತ್‌, ಬಾಸಿಲ್‌ ಥಂಪಿ, ದೀಪಕ್‌ ಹೂಡ, ಮಯಾಂಕ್‌ ಅಗರ್ವಾಲ್‌, ರವಿಕುಮಾರ್‌ ಸಮರ್ಥ್, ನವದೀಪ್‌ ಸೈನಿ, ಸಿದ್ಧಾರ್ಥ್ ಕೌಲ್‌, ಹನುಮ ವಿಹಾರಿ, ಅಂಕಿತ್‌ ಭಾವೆ°.

Advertisement
Advertisement

Udayavani is now on Telegram. Click here to join our channel and stay updated with the latest news.

Next