ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಂತ್ಯವಾಗಿದೆ. ಏಕದಿನ ವಿಶ್ವಕಪ್ ನಲ್ಲಿ ಫೈನಲ್ ಹಂತಕ್ಕೆ ತಲುಪಿದ್ದ ಭಾರತ ತಂಡ ಇನ್ನು ಮುಂದಿನ ಟಿ20 ವಿಶ್ವಕಪ್ ಸಿದ್ದತೆ ಮಾಡಲು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ಇಂದಿನಿಂದ ಆಡಲಿದೆ. ವಿಶ್ವಕಪ್ ನಲ್ಲಿ ಆಡಿದ್ದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಮುಖಗಳಿಗೆ ಟಿ20 ಸರಣಿಯಲ್ಲಿ ಮಣೆ ಹಾಕಲಾಗಿದೆ.
ಟೀಂ ಇಂಡಿಯಾ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಕಳೆದ ಟಿ20 ವಿಶ್ವಕಪ್ ಬಳಿಕ ಯಾವುದೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿಲ್ಲ. ಟಿ20 ಸರಣಿಗಳಲ್ಲಿ ವಿಶ್ರಾಂತಿಯ ನೆಪ ಹೇಳಿ ಅವರಿಗೆ ಅವಕಾಶ ನೀಡಿಲ್ಲ.
ಇದನ್ನೂ ಓದಿ:Tragedy: 350 ರೂ. ಗೋಸ್ಕರ 18 ವರ್ಷದ ಯುವಕನನ್ನು ಹತ್ಯೆಗೈದು ನೃತ್ಯ ಮಾಡಿದ 16 ವರ್ಷದ ಬಾಲಕ
ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಟಿ20 ಅಂತಾರಾಷ್ಟ್ರೀಯ ಭವಿಷ್ಯವನ್ನು ಸ್ವತಂತ್ರವಾಗಿ ನಿರ್ಧರಿಸಲು ಅಧಿಕಾರ ನೀಡಲು ಮುಂದಾಗಿದೆ. ಈ ನಿರ್ಧಾರವು ಇಬ್ಬರು ಕ್ರಿಕೆಟಿಗರಿಗೆ ಸಂಪೂರ್ಣವಾಗಿ ಸೇರಿದೆ ಎಂದು ಸ್ಪಷ್ಟಪಡಿಸಿದ ಬಿಸಿಸಿಐ, ಮುಂಬರುವ ವಿಶ್ವಕಪ್‌ನಲ್ಲಿ ಭಾಗವಹಿಸುವ ಬಯಕೆಯನ್ನು ವ್ಯಕ್ತಪಡಿಸಿದರೆ, ಅವರ ವೈಯಕ್ತಿಕ ಆಯ್ಕೆಗಳನ್ನು ಗೌರವಿಸಿ ಮಂಡಳಿಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದೆ.
“ಇಬ್ಬರೂ ಆಟಗಾರರು ಮುಂದಿನ ವರ್ಷದ ವಿಶ್ವಕಪ್‌ನಲ್ಲಿ ಆಡಲು ಬಯಸಿದರೆ, ನಮ್ಮ ಅಭ್ಯಂತರವಿಲ್ಲ; ಅದು ಅವರ ಇಚ್ಛೆ.” ಎಂದು ಬಿಸಿಸಿಐ ತಿಳಿಸಿದೆ.