ಬೆಂಗಳೂರು: ರಾಜ್ಯಪಾಲರಿಗೆ ಎದುರಾಗಿದ್ದ ಬೆಕ್ಕುಗಳ ಕಾಟ ತಪ್ಪಿಸಲು ಕೊನೆಗೂ ಬಿಬಿಎಂಪಿ ಮುಂದಾಗಿದ್ದು, ಬೆಕ್ಕುಗಳನ್ನು ಹಿಡಿದು ಪುನರ್ವಸತಿ ಕಲ್ಪಿಸಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ರಾಜಭವನದ ಹಿರಿಯ ತೋಟಗಾರಿಕೆ ನಿರ್ದೇಶಕರು, ರಾಜಭವನದಲ್ಲಿ ಬೆಕ್ಕುಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿದು ಪುನರ್ವಸತಿ ಕಲ್ಪಿಸಲು ಮುಂದಾಗಬೇಕೆಂದು ಪಶುಪಾಲನಾ ವಿಭಾಗದ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದರು.
ಇದು ಪಾಲಿಕೆಯ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಪಾಲಿಕೆಯಿಂದ ಈವರೆಗೆ ಇಲಿ, ಬೀದಿ ನಾಯಿ, ಹಂದಿಗಳನ್ನು ಹಿಡಿಯಲಾಗಿದೆತ್ತೇ ಹೊರತು ಬೆಕ್ಕುಗಳನ್ನು ಹಿಡಿದಿರಲಿಲ್ಲ. ಜತೆಗೆ ಬೆಕ್ಕುಗಳನ್ನು ಹಿಡಿಯಲು ಮುಂದಾದರೆ ಪ್ರಾಣಿ ಪ್ರಿಯರಿಂದ ವಿರೋಧ ವ್ಯಕ್ತವಾಗುವುದೇ ಎಂಬ ಗೊಂದಲಕ್ಕೆ ಅಧಿಕಾರಿಗಳು ಒಳಗಾಗಿದ್ದರು.
ವಿಷಯವನ್ನು ಪಾಲಿಕೆಯ ಆಯುಕ್ತರ ಗಮನಕ್ಕೆ ತಂದ ಬಳಿಕ ಟೆಂಡರ್ ಕರೆದು ಬೆಕ್ಕುಗಳನ್ನು ಹಿಡಿಯುವಂತೆ ಹಾಗೂ ಪುನರ್ವಸತಿ ಕಲ್ಪಿಸುವಂತೆ ಸೂಚಿಸಿದ್ದಾರೆ. ಅದರಂತೆ ಬೆಕ್ಕುಗಳನ್ನು ಹಿಡಿಯಲು ಟೆಂಡರ್ ಪ್ರಕ್ರಿಯೆ ನಡೆಸಿ, ಜಯರಾಜ್ ಎಂಬುವವರಿಗೆ ಗುತ್ತಿಗೆ ನೀಡಲಾಗಿದೆ.
ರಾಜಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 35 ಬೆಕ್ಕುಗಳಿರುವುದು ಕಂಡುಬಂದಿದೆ. ಇದರೊಂದಿಗೆ ಕಬ್ಬನ್ ಉದ್ಯಾನ, ಇಂದಿರಾ ಗಾಂಧಿ ಕಾರಂಜಿ, ನೆಹರೂ ತಾರಾಲಯ, ವಿಧಾನಸೌಧ ಭಾಗಗಳಿಂದ ಬೆಕ್ಕುಗಳು ಬಂದಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ.
ಆ ಹಿನ್ನೆಲೆಯಲ್ಲಿ ಬೆಕ್ಕುಗಳನ್ನು ಹಿಡಿಯುವ ಕಾರ್ಯಕ್ಕೆ ಬಿಬಿಎಂಪಿ 98 ಸಾವಿರ ರೂ. ವ್ಯಯಿಸುತ್ತಿದ್ದು, ಬೆಕ್ಕುಗಳನ್ನು ಹಿಡಿಯುವ ಕೆಲಸ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ 1 ತಿಂಗಳ ಅವಧಿ ನೀಡಲಾಗಿದೆ. ಹಿಡಿದ ಬೆಕ್ಕುಗಳ ಲೆಕ್ಕದೊಂದಿಗೆ ಅವುಗಳಿಗೆ ಪುನರ್ವಸತಿ ಕಲ್ಪಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ಪಶುಪಾಲನೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.