ಅಫಜಲಪುರ: ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯಗಳ ಅರಿವು ಮೂಡಿಸುವ ಸಲುವಾಗಿ ತಾಪಂ, ಗ್ರಾಪಂಗಳಿಗೆ ಪರಮಾ ಧಿಕಾರ ನೀಡಿದೆ. ಅಲ್ಲದೆ ಕಡ್ಡಾಯವಾಗಿ ಸರ್ಕಾರಿ ಕಚೇರಿಗಳಲ್ಲಿ ಸುಸಜ್ಜಿತ ಶೌಚಾಲಯ ಇರಬೇಕೆಂದು ಹೇಳುತ್ತದೆ. ಆದರೆ ಶೌಚಾಲಯವಿದ್ದರೂ ಬಳಕೆಗೆ ಬಾರದಂತಾಗಿ ಗಬ್ಬು ನಾತ ಬೀರುತ್ತಿದ್ದರೂ ನೋಡುವವರು ಇಲ್ಲದಂತಾಗಿದೆ.
ಇದು ಪಟ್ಟಣದ ತಾಪಂ ಕಚೇರಿಯಲ್ಲಿರುವ ಶೌಚಾಲಯದ ಪರಿಸ್ಥಿತಿ. ತಾಲೂಕು ಪಂಚಾಯಿತಿ ಅವರು ಗ್ರಾಪಂ ಕಚೇರಿಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಿ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ತಾಲೂಕು ಕಚೇರಿಯಲ್ಲೇ ಶೌಚಾಲಯ ಇದ್ದು ಇಲ್ಲದಂತಾಗಿದೆ.
ಮಾಡಿದ ಮೂತ್ರ ಹೋರ ಹೋಗಲಾಗದೆ ನಿಂತಲ್ಲಿಯೇ ನಿಂತು ಗಬ್ಬು ನಾತ ಬೀರುತ್ತಿದೆ. ಇಷ್ಟಾದರೂ ತಾಪಂ ಅ ಧಿಕಾರಿಗಳು ಶೌಚಾಲಯ ದುರಸ್ತಿಗೊಳಿಸುವ ಮತ್ತು ಹೊಸದಾಗಿ ಕಟ್ಟಿಸುವ ಗೋಜಿಗೆ ಹೋಗಿಲ್ಲ. ಪ್ರತಿದಿನ ತಾಪಂ ಕಚೇರಿಗೆ ವಿವಿಧ ಗ್ರಾಮಗಳಿಂದ ನೂರಾರು ಜನ ಕೆಲಸದ ನಿಮಿತ್ತ ಬರುತ್ತಾರೆ.
ಇದರಲ್ಲಿ ಮಹಿಳೆಯರೂ ಇರುತ್ತಾರೆ. ಇವರೆಲ್ಲ ಶೌಚಾಲಯದ ಈ ದುಸ್ತಿತಿಯಿಂದ ಪರದಾಡುವಂತಾಗಿದೆ. ಕಚೇರಿ ಕೆಲಸಗಾರರಿಗೂ ಶೌಚಾಲಯ, ಮೂತ್ರಾಲಯದ ವ್ಯವಸ್ಥೆ ಇಲ್ಲದಂತಾಗಿದೆ. ಶಾಸಕರ ಕೈಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅದ್ಧೂರಿಯಾಗಿ ಉದ್ಘಾಟನೆ ಮಾಡಿಸಿದ ತಾಪಂನವರು ನೀರನ್ನು ಸಹ ಹಾಕುತ್ತಿಲ್ಲ.
ಹೀಗಾಗಿ ತಾಲೂಕು ಪಂಚಾಯಿತಿಗೆ ಬಂದರೆ ಕುಡಿಯಲು ನೀರೂ ಸಿಗುತ್ತಿಲ್ಲ. ಶೌಚಕ್ಕೆ ಹೋಗಲು ವ್ಯವಸ್ಥೆಯೂ ಇಲ್ಲ ಎಂದು ಸಾರ್ವಜನಿಕರು ತಾಪಂ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಆಕ್ರೋಶ: ಹಳ್ಳಿಗಳಿಂದ ಹೈರಾಣಾಗಿ ಕಚೇರಿಗೆ ಕೆಲಸಕ್ಕಾಗಿ ತಾಪಂಗೆ ಬಂದರೆ ಇಲ್ಲಿ ಕುಡಿಯಲು ನೀರು ಇಲ್ಲ, ಶೌಚಕ್ಕೆ ಹೋಗಬೇಕಾದರೆ ಅದು ಸರಿಯಾಗಿಲ್ಲ. ತಾಲೂಕು ಕಚೇರಿಯಲ್ಲೇ ಈ ಪರಿಸ್ಥಿತಿಇದೆ. ಇನ್ನೂ ಇವರು ಇನ್ನೆಲ್ಲಿ ಸ್ವಚ್ಚ ಭಾರತ ಮಾಡ್ತಾರೋ? ಎಂದು ಅನೇಕ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಮಲ್ಲಿಕಾರ್ಜುನ ಹಿರೇಮಠ