Advertisement

ವಿದ್ಯುತ್‌ ಕಂಬದಿಂದ ಬಿದ್ದರೂ ದೊರೆಯದ ಆಧಾರ

04:49 PM Dec 07, 2017 | Team Udayavani |

ಬೆಳ್ತಂಗಡಿ : ಮೆಸ್ಕಾಂ ಇಲಾಖೆಯಲ್ಲಿ ಕಾಯಂ ಲೈನ್‌ಮನ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಂಬದಿಂದ ಬಿದ್ದು ಯಾವುದೇ ಪರಿಹಾರ ಸಿಗದೆ ಈಗ ಗಾಲಿಗಳ ಮೇಲೆ ಬದುಕು ಸಾಗಿಸುತ್ತಿರುವ ನೌಕರನೊಬ್ಬನ ಕಥೆಯಿದು.

Advertisement

ಗುರುವಾಯನಕೆರೆ ಪಾಡ್ಯಾರು ಮಜಲು ಮನೆಯ ಪುರಂದರ ಅವರು ಮೆಸ್ಕಾಂ ಇಲಾಖೆಯ ಉಜಿರೆ ಉಪ ವಿಭಾಗದ ಸೋಮಂತಡ್ಕ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಂಬದಿಂದ ಬಿದ್ದು ಗಂಭೀರ ಗಾಯಗೊಂಡಿದ್ದರು. ಇವರು 8 ವರ್ಷಗಳ ಕಾಲ ಕಾಯಂ ನೌಕರರಾಗಿ ಸೇವೆ ಸಲ್ಲಿಸಿದ್ದರೂ ಇವರಿಗೆ ಸರಕಾರ, ಇಲಾಖೆಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.

ಘಟನೆಯ ವಿವರ
2016ರ ಜ. 2ರಂದು ಪುರಂದರ ಅವರು ಮುಂಡಾಜೆ ಗುಂಡಿ ರೋಡ್‌ ಬಳಿ ವಿದ್ಯುತ್‌ ಲೈನ್‌ಗೆ ತಾಗುತ್ತಿದ್ದ ಮರದ ಗೆಲ್ಲನ್ನು ಕಡಿಯಲು ಮರ ಹತ್ತಿದ ವೇಳೆ ಕಾಲು ಜಾರಿ ಬಿದ್ದು ಸೊಂಟದ ಭಾಗಕ್ಕೆ ತೀವ್ರ ತರಹ¨ ಗಾಯವಾಗಿತ್ತು. ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಸುಮಾರು 41 ದಿನಗಳ ಚಿಕಿತ್ಸೆ ಬಳಿಕ ಅಪಾಯದಿಂದ ಪಾರಾಗಿದ್ದು, ಸೊಂಟ ಮುರಿತಕ್ಕೊಳಗಾಗಿದ್ದರಿಂದ ಇದೀಗ ದುಡಿಯಲಾರದ ಸ್ಥಿತಿಯಲ್ಲಿದ್ದಾರೆ.

ಇಲಾಖೆಯಿಂದಲೇ ವಂಚನೆ : ಆರೋಪ
2016ರ ಜ. 6ರಂದು ಮಂಗಳೂರು ಎ.ಜೆ. ಆಸ್ಪತ್ರೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿರುವ ಬಂಟ್ವಾಳ ವಿಭಾಗದ ಅಂದಿನ ಕಾರ್ಯನಿರ್ವಾಹಕ ಎಂಜಿನಿಯರ್‌, ಉಜಿರೆ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ವರದಿ ಮಾಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸಾ ವೆಚ್ಚವನ್ನು ಮೆಸ್ಕಾಂ ಕಂಪೆನಿ ವತಿಯಿಂದ ಭರಿಸಲಾಗುವುದು ಎಂದೂ ಭರವಸೆ ನೀಡಲಾಗಿತ್ತು. ಆದರೆ ಬಳಿಕ ಇಲಾಖೆ ಯಾವುದೇ ಚಿಕಿತ್ಸೆ ವೆಚ್ಚ ನೀಡದೆ ವಂಚಿಸಿದ್ದಾರೆ ಎಂಬುದು ಪುರಂದರ ಅವರ ಆರೋಪ.

1.75 ಲಕ್ಷ ರೂ. ಸಹಾಯಹಸ್ತ
ಸರಕಾರ, ಮೆಸ್ಕಾಂ ಇಲಾಖೆ ಯಾವುದೇ ಬಿಲ್‌ ಪಾವತಿ ಆಗದೇ ಇದ್ದಾಗ ಎ.ಜೆ. ಆಸ್ಪತ್ರೆಯ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿತು. ಆಗ 1.75 ಲಕ್ಷ ರೂ.ಗಳನ್ನು ಮೆಸ್ಕಾಂ ನೌಕರರು ಒಟ್ಟುಗೂಡಿಸಿ ಚಿಕಿತ್ಸಾ ವೆಚ್ಚವಾಗಿ ಆಸ್ಪತ್ರೆಗೆ ನೀಡಿದ್ದರು ಎನ್ನಲಾಗಿದೆ.
ಇನ್ನುಳಿದ 1.25 ಲಕ್ಷ ಹಣ ಪುರಂದರ ದಾಸರ ಮೆಡಿಕ್ಲೈಮ್‌ನಿಂದ ಪಾವತಿ ಮಾಡಲಾಗಿತ್ತು.

Advertisement

ಜೀವದ ಜತೆ ಚೆಲ್ಲಾಟ
ಪುರಂದರ ಅವರ ಚಿಕಿತ್ಸಾ ವೆಚ್ಚವನ್ನು ಇಲಾಖೆ ಭರಿಸುತ್ತದೆ ಎಂದು ಬಂಟ್ವಾಳ ವಿಭಾಗದ ಅಂದಿನ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರು ಎ.ಜೆ. ಆಸ್ಪತ್ರೆಯ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಬಳಿಕ ಮೆಸ್ಕಾಂ ಅಧಿಕಾರಿಗಳು ‘ಅವರು ಮನೆಯಲ್ಲಿ ಬಿದ್ದಿರುವುದಾಗಿ ವರದಿ ಮಾಡಿ ತನ್ನ ಜೀವದ ಜತೆ ಚೆಲ್ಲಾಟವಾಡಿದ್ದಾರೆ ಎಂಬುದು ಪುರಂದರರ ಆರೋಪ. ತಿಂಗಳಿಗೆ ಚಿಕಿತ್ಸಾ ವೆಚ್ಚವಾಗಿ 2,000 ರೂ. ಬೇಕಾಗಿದ್ದು, ಯಾವುದೇ ಆದಾಯವಿಲ್ಲ.

ಮರು ನೇಮಕಾತಿಯೂ ಇಲ್ಲ
ಮಂಗಳೂರು ಎ.ಜೆ. ಆಸ್ಪತ್ರೆಯ ಡಾ| ಅರುಣ್‌ ಕುಡ್ವ ಅವರು ಪುರಂದರ ಅವರು ಕಚೇರಿ ಕೆಲಸ ನಿರ್ವಹಿಸಲು ಸಮರ್ಥರಾಗಿದ್ದಾರೆಂದು ವರದಿ ನೀಡಿದ್ದರೂ ಇವರನ್ನು ಮರುನೇಮಕಾತಿ ಮಾಡದೆ ನಿರ್ಲಕ್ಷಿಸಿದ್ದಾರೆ ಎಂದವರು ತಿಳಿಸಿದ್ದಾರೆ.

ಶಾಸಕರಿಗೆ ಮನವಿ
ಶಾಸಕ ಕೆ. ವಸಂತ ಬಂಗೇರ ಅವರಿಗೆ ಮನವಿ ನೀಡಲಾಗಿದ್ದು ,ಇದಕ್ಕೆ ಗಮನ ಹರಿಸಿ ಕೆಲಸ ದೊರಕಿಸಿಕೊಡಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮರುನೇಮಕಕ್ಕೆ ಅರ್ಜಿ
ಆಸ್ಪತ್ರೆ ವೆಚ್ಚವನ್ನು ಇಲಾಖಾ ನೌಕರರು ಮಾನವೀಯ ನೆಲೆಯಲ್ಲಿ ಒಟ್ಟು ಮಾಡಿ ನೀಡಿದ್ದೇವೆ. ಪುರಂದರರು ಮರು ನೇಮಕಕ್ಕೆ ನೀಡಿರುವ ಅರ್ಜಿಯನ್ನು ಇಲಾಖೆಯ ಮೇಲಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಕಳುಹಿಸಿಕೊಡಲಾಗಿದೆ.
ಶಿವಶಂಕರ್‌, ಸಹಾಯಕ
  ಕಾರ್ಯನಿರ್ವಾಹಕ ಎಂಜಿನಿಯರ್‌, ಬೆಳ್ತಂಗಡಿ ಮೆಸ್ಕಾಂ 

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next