Advertisement

ಆತ್ಮಹತ್ಯೆ ಮಾಡಿಕೊಂಡ ರೈತನ ಹೆಸರಲ್ಲಿ ಇನ್ನೂ ಬರುತ್ತಿದೆ ಬ್ಯಾಂಕ್‌ ನೋಟಿಸ್‌

03:10 PM Jun 03, 2019 | Suhan S |

ಕಾರಟಗಿ: ಬ್ಯಾಂಕ್‌ ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಮಾಡಿಕೊಂಡು 4 ವರ್ಷಗಳಾದರೂ ಬ್ಯಾಂಕಿನವರಿಂದ ಮೃತನ ಹೆಸರಲ್ಲಿ ಹಾಗೂ ಆತನ ಕುಟುಂಬದವರಿಗೆ ಇನ್ನೂ ನೋಟಿಸ್‌ ಬರುತ್ತಿವೆ.

Advertisement

ಹುಳ್ಕಿಹಾಳ ಗ್ರಾಮದ ರೈತ ಅಮರೇಶ ಸಿದ್ದಾಪುರ 2008ರಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 30 ಸಾವಿರ ರೂ. ಸಾಲ ಮಾಡಿದ್ದ. ಅದರ ಅಸಲು ಹಾಗೂ ಬಡ್ಡಿ ಸೇರಿ 2015ರಲ್ಲಿ 62,325 ರೂ.ಗಳಾಗಿತ್ತು. ಸತತ ಬರ ಹಾಗೂ ಬೆಳೆ ಹಾನಿಯಿಂದ ನೊಂದ ರೈತ ಅಮರೇಶ ಸಾಲದ ಹೊರೆ ತಾಳಲಾರದೇ 2015 ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ರೈತ ಅಮರೇಶನನ್ನೇ ಅವಲಂಬಿಸಿದ ಕುಟುಂಬ ಜೀವನ ಸಾಗಿಸುವುದೇ ದುಸ್ತರವಾಗಿದೆ.

ಮಕ್ಕಳು, ಅತ್ತೆಯನ್ನು ನೋಡಿಕೊಳ್ಳಲು ಕಷ್ಟಪಡುತ್ತಿರುವ ನಾನು ಇದೀಗ ಬ್ಯಾಂಕಿನಿಂದ ನೋಟಿಸ್‌ಗೆ ಕಂಗಾಲಾಗಿದ್ದೇನೆ. ಬ್ಯಾಂಕಿನವರ ಕಿರುಕುಳವನ್ನು ತಾಳಲಾರದೇ ತವರು ಮನೆ ಹಾದಿ ಹಿಡಿದಿದ್ದೆ. ಆದರೆ ಬ್ಯಾಂಕಿನವರು ತವರು ಮನೆಯನ್ನೂ ಪತ್ತೆ ಹಚ್ಚಿ ನನ್ನ ಹೆಸರಿನಲ್ಲಿ ನೋಟಿಸ್‌ ನೀಡಿದ್ದು, ಏನು ಮಾಡಬೇಕೆಂಬುದು ತಿಳಿಯದಾಗಿದೆ ಎಂಬುದು ಮೃತರ ಪತ್ನಿ ಶರಣಮ್ಮ ಅಳಲು.

ಆತ್ಮಹತ್ಯೆಗೆ ಶರಣಾದ ರೈತನ ಹೆಸರಲ್ಲೇ ಬ್ಯಾಂಕ್‌ನವರು ಇದುವರೆಗೂ ನೋಟಿಸ್‌ ನೀಡುತ್ತಿದ್ದಾರೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿ ಯಾವುದೇ ನೋಟಿಸ್‌ ನೀಡಿ ಕಿರುಕುಳ ನೀಡದಂತೆ ಆದೇಶ ಮಾಡಿದ್ದರೂ ಸಾಲ ಮರುಪಾವತಿಸಲು ನೋಟಿಸ್‌ ಜಾರಿಗೊಳಿಸಿ ಕಿರುಕುಳ ನೀಡುತ್ತಿದ್ದಾರೆಂದು ಎಂದು ಶರಣಮ್ಮರ ಸಹೋದರ ಮಹಾಂತೇಶ ಅಸಹಾಯಕತೆ ವ್ಯಕ್ತಪಡಿಸಿದರು.

ರೈತ ಸಂಘಟನೆಗಳ ಆಗ್ರಹ: ಸರ್ಕಾರ ಶೀಘ್ರವೇ ಇತ್ತ ಕಡೆ ಗಮನ ಹರಿಸಿ ಬ್ಯಾಂಕ್‌ಗಳ ಇಂತಹ ಕ್ರಮಕ್ಕೆ ಕಡಿವಾಣ ಹಾಕಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next