Advertisement

ಅದ್ಧೂರಿ ಪ್ರವಾಸಿ ದಿವಸ್‌ಗೆ ಬೆಂಗಳೂರು ಸಜ್ಜು

03:45 AM Jan 06, 2017 | Harsha Rao |

ಬೆಂಗಳೂರು: ವಿದೇಶಾಂಗ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜ.7ರಿಂದ ಮೂರು ದಿನಗಳ ಕಾಲ ನಡೆಯುವ ಪ್ರವಾಸಿ ಭಾರತ್‌ ದಿವಸ್‌ ಸಮಾವೇಶಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಸಜ್ಜಾಗಿದೆ. ದೇಶ-ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಗಣ್ಯರು, ಪ್ರತಿನಿಧಿಗಳು ಸಮಾವೇಶಕ್ಕೆ ಆಗಮಿಸುತ್ತಿರುವ
ಹಿನ್ನೆಲೆಯಲ್ಲಿ ನಗರದ ಸ್ವತ್ಛತೆ, ಮೂಲಸೌಕರ್ಯ ಮತ್ತು ಸಮಾವೇಶ ಜರುಗುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿನ ಅಂತಿಮ ಸಿದ್ಧತಾ ಕಾರ್ಯಗಳ ಕುರಿತು ಕೈಗಾರಿಕಾ ಮತ್ತು ಮೂಲಸೌಕರ್ಯ ಸಚಿವ ಆರ್‌.ವಿ.ದೇಶಪಾಂಡೆ ಗುರುವಾರ ಪರಿಶೀಲನೆ ನಡೆಸಿದರು.

Advertisement

ಸಮಾವೇಶ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಟಾಳ, ಗೊರಗುಂಟೆಪಾಳ್ಯ, ಭದ್ರಪ್ಪ ಲೇಔಟ್‌, ಮೇಕ್ರಿ ಸರ್ಕಲ್‌, ಯಶವಂತಪುರ ಸೇರಿದಂತೆ ಇತರೆ ಸ್ಥಳಗಳ ಪರಿಶೀಲನೆ ನಡೆಸಿದ ಸಚಿವರು, ನಗರದ ಸೌಂದರ್ಯ ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಸ್ತೆ ಬದಿಯಲ್ಲಿ ಸಿನಿಮಾ ಹಾಗೂ ಇತರೆ ಪೋಸ್ಟರ್‌ಗಳನ್ನು ಅಂಟಿಸಿರುವುದನ್ನು ಗಮನಿಸಿದ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವುಗಳನ್ನು ಕೂಡಲೇ ತೆಗೆಸಿ ಹಾಕಿ ಸ್ವತ್ಛಗೊಳಿಸುವಂತೆ ತಿಳಿಸಿದರು. ಹೆಬ್ಟಾಳ, ಭದ್ರಪ್ಪ ಲೇಔಟ್‌ನ ರೈಲ್ವೆ ಹಳಿ ಸಮೀಪ ಕಸವನ್ನು ತೆಗೆಸಿ ಸೌಂದರ್ಯ ಕಾಪಾಡುವಂತೆ ಹೇಳಿದರು. ಬಿಇಎಲ್‌ ವೃತ್ತದ
ಕೆಳಸೇತುವೆಯ ಗೋಡೆಗಳ ಬಣ್ಣ ಬಳಿಯುವ ಕೆಲಸ ಪೂರ್ಣಗೊಳ್ಳದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು, ದೇಶ-ವಿದೇಶದಿಂದ ಪ್ರತಿನಿಧಿಗಳು ಆಗಮಿಸುತ್ತಿರುವ ವೇಳೆ ನಗರದ ಘನತೆ ಕಾಪಾಡುವಂತೆ ತಾಕೀತು ಮಾಡಿದರು.

ರಸ್ತೆ ಕಾಮಗಾರಿಗಳ ಮತ್ತು ಗೊರಗುಂಟೆಪಾಳ್ಯದಲ್ಲಿ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆಯ ಪರಿಶೀಲನೆ ನಡೆಸಿದರು. ರೈಲ್ವೆ ಹಳಿಯ ಮೇಲೆ ನಿರ್ಮಾಣವಾಗಿರುವ ಮೇಲ್ಸೇತುವೆಗೆ ಮೂರು ವರ್ಷಗಳಿಂದ ಭೂಸ್ವಾಧೀನವಾಗದೆ  ಮಸ್ಯೆಯಾಗಿತ್ತು. 660 ಮೀಟರ್‌ ಉದ್ದದ ಮೇಲ್ಸೇತುವೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಸಚಿವ ಆರ್‌. ವಿ.ದೇಶಪಾಂಡೆ ಇದೇ ವೇಳೆ ತಿಳಿಸಿದರು.

ಪ್ರಧಾನಿ ಮೋದಿ ಚಾಲನೆ: ಉದ್ಘಾಟನಾ ಕಾರ್ಯಕ್ರಮವು ಹಾಲ್‌ ಸಂಖ್ಯೆ 3ರಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮ ಸುಗಮವಾಗಿ ನಡೆಯುವಂತೆ ಸಿದ್ಧತೆ ಕೈಗೊಳ್ಳಬೇಕು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಗಣ್ಯಾತಿಗಣ್ಯರು, ದೇಶ-ವಿದೇಶದ ಪ್ರತಿನಿಧಿಗಳು
ಪಾಲ್ಗೊಳ್ಳುವುದರಿಂದ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

Advertisement

ಎಟಿಎಂ, ಬ್ಯಾಂಕ್‌ ವ್ಯವಸ್ಥೆ
ಮೂರು ದಿನಗಳ ಕಾಲ ನಡೆಯುವ ಪ್ರವಾಸಿ ಭಾರತ್‌ ದಿವಸ್‌ ಸಮಾವೇಶದಲ್ಲಿ ಭಾಗವಹಿಸುವ ದೇಶ-ವಿದೇಶದ ಜನತೆಗೆ ಹಣದ ಸಮಸ್ಯೆ ಎದುರಾಗದಂತೆ ಎಟಿಎಂ, ತಾತ್ಕಾಲಿಕ ಬ್ಯಾಂಕ್‌ ವ್ಯವಸ್ಥೆ ಮಾಡಬೇಕು ಎಂದು ಸಚಿವ ದೇಶಪಾಂಡೆ ಸೂಚನೆ ನೀಡಿದ್ದಾರೆ.

ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ವಿದೇಶೀಯರಿಗೆ ಕರೆನ್ಸಿ ವಿನಿಮಯಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ವಿದೇಶೀಯರು ಕೇಂದ್ರದಿಂದ ಹೊರಗೆ
ಹೋಗಿ ಎಟಿಎಂ ಮುಂಭಾಗ ಸಾಲು ನಿಲ್ಲಲು ಸಾಧ್ಯವಿಲ್ಲ. ನೋಟುಗಳು ಇಲ್ಲೇ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಿದರು. ಈ ವೇಳೆ ಕೇಂದ್ರದ ಆವರಣದಲ್ಲಿ ನಾಲ್ಕು ಮೊಬೈಲ್‌ ಎಟಿಎಂ ಹಾಗೂ ವಿದೇಶಿ ಕರೆನ್ಸಿ ವಿನಿಮಯಕ್ಕೆ ತಾತ್ಕಾಲಿಕ ಬ್ಯಾಂಕ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಕತಾರ್‌ನಿಂದ ಹೆಚ್ಚು ಪ್ರತಿನಿಧಿಗಳು
ಮೂರು ದಿನಗಳ ಕಾಲ ನಡೆಯುವ ಪ್ರವಾಸಿ ಭಾರತ್‌ ದಿವಸ್‌ ಸಮಾವೇಶಕ್ಕೆ ಒಂದು ಸಾವಿರಕ್ಕಿಂತ ಹೆಚ್ಚು ವಿದೇಶಿಗರ
ನೋಂದಣಿಯಾಗಿದ್ದು, ಈ ಪೈಕಿ ಕತಾರ್‌ ದೇಶವೊಂದರಿಂದಲೇ ಸುಮಾರು 140ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ವಿವಿಧ ದೇಶಗಳಿಂದ ಆಗಮಿಸುವ ಪ್ರತಿನಿಧಿಗಳಿಗೆ ಹೋಲಿಸಿದರೆ ಕತಾರ್‌ ರಾಷ್ಟ್ರದಿಂದಲೇ ಹೆಚ್ಚಿನ ಪ್ರತಿನಿಧಿಗಳು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ವಿವಿಧ ವೃತ್ತಿಯ 140 ಪ್ರತಿನಿಧಿಗಳು ಸಮಾವೇಶಕ್ಕೆ ಆಗಮಿಸಲಿದ್ದಾರೆ. ಕತಾರ್‌ನ ಭಾರತೀಯ ರಾಯಭಾರಿ ಪಿ.ಕುಮಾರನ್‌ ನೇತೃತ್ವದಲ್ಲಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಕತಾರ್‌ ಕರ್ನಾಟಕ ಸಂಘದ ಅಧ್ಯಕ್ಷ ಎಚ್‌.ಕೆ.ಮಧು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next