Advertisement

ರಾಜಧಾನಿ ಪುಂಡರ ಬೆಂಡೆತ್ತಲು ಬರುತ್ತೆ ಬ್ಯಾಂಡ್‌

01:13 PM Feb 03, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಮಹಿಳೆಯರಿಗೆ ಪುಂಡರು ಕಿರುಕುಳ ನೀಡುತ್ತಾರೆ. ಲೈಂಗಿಕ ದೌರ್ಜನ್ಯ ಘಟನೆಗಳೂ ಆಗಾಗ ಮರುಕಳಿಸುತ್ತಿರುತ್ತವೆ. ಹೀಗಾದಾಗ ಮಹಿಳೆಯರಾಗಲಿ, ಯುವತಿಯರಾಗಲಿ ಪ್ರತಿರೋಧ ತೋರಬಹುದೇ ಹೊರತು, ಆ ಕ್ಷಣಕ್ಕೆ ಅವರಿಗೆ ರಕ್ಷಣೆ ಸಿಗುವುದು ತೀರಾ ವಿರಳ. 

Advertisement

ಸ್ತ್ರೀಯರ ಈ ಅಸಹಾಯಕತೆಯ ಲಾಭ ಪಡೆಯುವ ಪುಂಡ, ಪೋಕರಿಗಳು ದೌರ್ಜನ್ಯವೆಸಗಿ ಪರಾರಿಯಾಗಿಬಿಡುತ್ತಾರೆ. ಆದರೆ, ಇಂಥ ಪುಂಡಾಟಕ್ಕೆಲ್ಲಾ ಬ್ರೇಕ್‌ ಬೀಳುವ ಕಾಲ ಸಮೀಪಿಸಿದೆ. ರಾಜಧಾನಿಯಲ್ಲಿನ್ನು ಮಹಿಳೆಯರು ಕಿರುಕುಳ, ದೌರ್ಜನ್ಯದ ಭಯವಿಲ್ಲದೆ ರಾಜಾರೋಷವಾಗಿ ಸಂಚರಿಸಬಹುದು. ಆದರೆ ಬರಿಗೈಲಲ್ಲ. ಕೈಗೊಂದು “ರಕ್ಷಾ ಬ್ಯಾಂಡ್‌’ ಕಟ್ಟಿಕೊಂಡು!

ಪಾಲಿಕೆಯ ಕಾಳಜಿ: ಮಹಿಳೆಯರ ಸುರಕ್ಷತೆಗಾಗಿ ಬಿಬಿಎಂಪಿ “ರಕ್ಷಾ ಬ್ಯಾಂಡ್‌’ ಪರಿಚಯಿಸುತ್ತಿದೆ. ನಗರದ 10 ಲಕ್ಷ ವನಿತೆಯರ ಕೈಗೆ ಬ್ಯಾಂಡ್‌ ನೀಡುವ ಗುರಿಯನ್ನು ಪಾಲಿಕೆ ಹೊಂದಿದೆ. ಧರಿಸಲು ಸುಲಭವಾಗಿರುವ ರಕ್ಷಾ ಬ್ಯಾಂಡ್‌, ಸಂಕಷ್ಟದಲ್ಲಿ ಸಿಲುಕಿದ ಮಹಿಳೆಯರಿಗೆ ನಿಜ ಅರ್ಥದಲ್ಲಿ “ರಕ್ಷಣೆ’ ನೀಡುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಪಾಲಿಕೆ ನಿರೀಕ್ಷಿಸಿರುವ ತಾಂತ್ರಿಕ ಶ್ರೇಷ್ಠತೆಗಳೊಂದಿಗೆ ಬ್ಯಾಂಡ್‌ ರೂಪುಗೊಂಡರೆ ಕಿರುಕುಳ, ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರಲಿವೆ.

ಸುರಕ್ಷಾ ಆ್ಯಪ್‌: ಕೇಂದ್ರ ಸರ್ಕಾರ ನಿರ್ಭಯಾ ನಿಧಿಯಿಂದ ನೀಡುವ ಅನುದಾನ ಬಳಸಿಕೊಂಡು, ರಕ್ಷಾ ಬ್ಯಾಂಡ್‌ ರೂಪಿಸಲು ಪಾಲಿಕೆ ಯೋಜನೆ ರೂಪಿಸಿದೆ. “ಸುರಕ್ಷಾ’ ಆ್ಯಪ್‌ ಹಾಗೂ ವೆಬ್‌ಸೈಟನ್ನೂ ಅಭಿವೃದ್ಧಿಪಡಿಸಲಿದೆ. ಇದರೊಂದಿಗೆ ಆಯ್ದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿ ಇತರೆ ಕ್ರಮಗಳ ಅನುಷ್ಠಾನಕ್ಕೆ 100 ಕೋಟಿ ರೂ. ಅನುದಾನ ಕೋರಿ ಪಾಲಿಕೆ ಆಯುಕ್ತರು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

ರಕ್ಷಾ ಬ್ಯಾಂಡ್‌ ಕಾರ್ಯನಿರ್ವಹಣೆ ಹೇಗೆ?: ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ರಕ್ಷಾ ಬ್ಯಾಂಡ್‌, ನೋಡಲು ನಿತ್ಯ ಧರಿಸುವ ವಾಚ್‌ ಅಥವಾ ಫಿಟ್‌ನೆಸ್‌ ಬ್ಯಾಂಡ್‌ ಮಾದರಿಯಲ್ಲಿರುತ್ತದೆ. ಮಹಿಳೆಯರು ತೊಂದರೆಗೆ ಸಿಲುಕಿದಾಗ ಬ್ಯಾಂಡ್‌ನ‌ಲ್ಲಿರುವ ಬಟನ್‌ ಒತ್ತಿ ಅಥವಾ ಬ್ಯಾಂಡ್‌ ಧರಿಸಿದ ಕೈಯನ್ನು ಹಲವು ಬಾರಿ ಅಲ್ಲಾಡಿಸಿದರೆ 

Advertisement

(ಶೇಕ್‌ ಮಾಡಿದರೆ) ಸಾಕು. ಅವರು ತೊಂದರೆಗೆ ಸಿಲುಕಿರುವ ಬಗೆಗಿನ ಮಾಹಿತಿ ಪೋಷಕರು, ಸಂಬಂಧಿಕರು, ಸ್ನೇಹಿತರು ಹಾಗೂ ಸಮೀಪದ ಪೊಲೀಸರಿಗೆ ರವಾನೆಯಾಗುತ್ತದೆ. ರಕ್ಷಾ ಬ್ಯಾಂಡ್‌ ಸುರಕ್ಷಾ ಆ್ಯಪ್‌ ಜತೆ ಲಿಂಕ್‌ ಆಗಿರುತ್ತದೆ. ಒಂದೊಮ್ಮೆ ಬ್ಯಾಂಡ್‌ಧಾರಿ ಸ್ತ್ರೀ ಸಂಕಷ್ಟಕ್ಕೆ ಸಿಲುಕಿದಾಗ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ದೊರೆಯದಿದ್ದರೆ, ಎಸ್‌ಎಂಎಸ್‌ ಮೂಲಕ ಎಲ್ಲರಿಗೂ ಸಂದೇಶ ರವಾನೆಯಾಗುತ್ತದೆ.

ಬ್ಯಾಂಡ್‌ನ‌ ವಿಶೇಷತೆಗಳೇನು?: ಬ್ಯಾಂಡ್‌ನ‌ಲ್ಲಿ ಮೈಕ್‌ ಹಾಗೂ ಸ್ಪೈ ಕ್ಯಾಮೆರಾ ಇರಲಿವೆ. ಅಪಾಯದಲ್ಲಿರುವ ಮಹಿಳೆ ಬಟನ್‌ ಒತ್ತಿ ಅಥವಾ ಕೈ ಶೇಕ್‌ ಮಾಡಿದ ಕೂಡಲೇ ಬ್ಯಾಂಡ್‌ ಸಕ್ರಿಯವಾಗುತ್ತದೆ. ಕೂಡಲೇ ಮೈಕ್‌ ಮೂಲಕ ಸ್ಥಳದಲ್ಲಿನ ಧ್ವನಿ ರೆಕಾರ್ಡ್‌ ಆಗುತ್ತದೆ. ಇದರೊಂದಿಗೆ ಬ್ಯಾಂಡ್‌ನ‌ ಎರಡು ಬದಿಯಲ್ಲಿರುವ ಕ್ಯಾಮೆರಾಗಳು ಸುತ್ತಮುತ್ತಲಿನ ಫೋಟೋಗಳನ್ನು ಸೆರೆಹಿಡಿಯುತ್ತದೆ. ಈ ಧ್ವನಿ ಹಾಗೂ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಸಂಬಂಧಿಸಿದವರಿಗೆ ರವಾನಿಸುವ ವ್ಯವಸ್ಥೆ ಬ್ಯಾಂಡ್‌ನ‌ಲ್ಲಿರಲಿದೆ.

ನೆಟ್‌ ಸಂಪರ್ಕವಿಲ್ಲದಿದ್ದರೆ ಎಸ್‌ಎಂಎಸ್‌ ಹೋಗುತ್ತದೆ. ಹಾಗೇ ಮಹಿಳೆ ಇರುವ ಸ್ಥಳದ ಮಾಹಿತಿ ಕೂಡ ರವಾನೆಯಾಗುತ್ತದೆ. ಈ ಮೂಲಕ ಪೋಷಕರು, ಆಪ್ತರು ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಬಹುದಾಗಿದೆ. ಇಲ್ಲಿ ಮಹಿಳೆಯರು ತಮಗೆ ಆಪ್ತರೆನಿಸುವ 40ರಿಂದ 50 ಮಂದಿಯ ಮೊಬೈಲ್‌ ಸಂಖ್ಯೆ ನೋಂದಣಿ ಮಾಡಲು ಅವಕಾಶವಿದ್ದು, ಅವರೆಲ್ಲರಿಗೂ ಮಾಹಿತಿ ರವಾನೆಯಾಗುತ್ತದೆ.

ರಿಯಾಯಿತಿ ದರದಲ್ಲಿ ಲಭ್ಯ: ಸುರಕ್ಷತೆಗೆ ಸಂಬಂಧಿಸಿದಂತೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೇಫ್ಟಿ ಬ್ಯಾಂಡ್‌ಗಳ ದರ 2 ಸಾವಿರಕ್ಕಿಂತ ಹೆಚ್ಚಿದ್ದು, ಬಡವರು, ಮಧ್ಯಮ ವರ್ಗದವರ ಕೈಗೆಟುಕುವುದಿಲ್ಲ. ಆದರೆ ರಕ್ಷಾ ಬ್ಯಾಂಡನ್ನು ಕೇವಲ 480 ರೂ.ಗೆ ನೀಡುವ ಚಿಂತನೆ ಪಾಲಿಕೆಗಿದೆ. ಪಾಲಿಕೆ 10 ಲಕ್ಷ ಬ್ಯಾಂಡ್‌ ಖರೀದಿಸಿದರೆ, ಬ್ಯಾಂಡ್‌ ರೂಪಿಸುವ ಸಂಸ್ಥೆ ಒಂದು ಬ್ಯಾಂಡನ್ನು 780 ರೂ.ಗೆ ನೀಡುತ್ತದೆ. ಈ ಮೊತ್ತದಲ್ಲಿ ಸರ್ಕಾರ 300 ರೂ. ಭರಿಸಲಿದ್ದು, ಮಹಿಳೆಯರು ಪಾವತಿಸಬೇಕಿರುವುದು ಕೇವಲ 480 ರೂ. ಆದರೆ ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಶೀಘ್ರದಲ್ಲೇ ಬರಲಿದೆ

ಬ್ಯಾಂಡ್‌ ಖರೀದಿ ನಂತರ ನೋಂದಣಿಯಾಗಲು ನಾಲ್ಕೇ ಹಂತ
1. ಮೊದಲು ಪಾಲಿಕೆಯಿಂದ ರಕ್ಷಾ ಬ್ಯಾಂಡ್‌ ಖರೀದಿಸಿ
2. ನಂತರ ಪಾಲಿಕೆ “ಸುರಕ್ಷಾ’ ಆ್ಯಪ್‌ ಡೌನ್‌ಲೋಡ್‌ ಮಾಡಿ
3. ಹೆಸರು, ಮೊಬೈಲ್‌ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಿ
4. 40-50 ಆಪ್ತರ ಹೆಸರು, ಮೊಬೈಲ್‌ ಸಂಖ್ಯೆ ನಮೂದಿಸಿ

ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ಯೋಜನೆ ರೂಪಿಸಿದರೆ ನಿರ್ಭಯಾ ನಿಧಿಯಲ್ಲಿ ಹಣಕಾಸು ನೆರವು ನೀಡುವುದಾಗಿ ಈ ಹಿಂದಿನ ಸಭೆಯಲ್ಲಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅದರಂತೆ “ರಕ್ಷಾ ಬ್ಯಾಂಡ್‌’ ಯೋಜನೆ ರೂಪಿಸಿ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಫೆ.7ರಂದು ನಡೆಯುವ ಸಭೆಯಲ್ಲಿ ಅನುದಾನ ಬಿಡುಗಡೆಯ ಭರವಸೆ ದೊರೆಯುವ ವಿಶ್ವಾಸವಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next