ಬನ್ನೂರು: ಕಷ್ಟಪಟ್ಟು ಬೆಳೆದ ಬಾಳೆ ಬೆಳೆ ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ, ಸೂಮಾರು 1900 ಬಾಲೆ ಗಿಡವನ್ನು ಕಿಡಿಗೇಡಿಗಳು ಮನಬಂದತೆ ಕೊಚ್ಚಿ ಕೆಡವಿರುವ ಘಟನೆ ಬನ್ನೂರು ಬಳಿಯ ಅತ್ತಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ಬನ್ನೂರಿಗೆ ಸಮೀಪದ ಅತ್ತಳ್ಳಿ ಗ್ರಾಮದಲ್ಲಿ ವಾಸವಾಗಿರುವ ರಾಮಪ್ರಸಾದ್ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಬಾಳೆಯನ್ನು ಬೆಳೆಯಲಾಗಿದ್ದು, ಕಟಾವಿಗೆ ಕೇವಲ ಎರಡೇ ತಿಂಗಳು ಇದ್ದಂತ ಬೆಳೆಯನ್ನು ರಾತ್ರಿ ವೇಳೆ ದುಷ್ಕರ್ಮಿಗಳು ಸಂಪೂರ್ಣವಾಗಿ ಕತ್ತರಿಸಿ ಹಾಕುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ.
ಎಂದಿನಂತೆ ಬೆಳಗ್ಗೆ ಗದ್ದೆಗೆ ಮಾಲೀಕರ ಮಕ್ಕಳು ಹೋಗಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಗದ್ದೆಯ ಮಾಲಿಕ ಕೈ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಸಹಿಸದಂತವರು ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಕುಂತನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವಂತ ಗದ್ದೆ ಇದಾಗಿದ್ದು, ಸಮೀಪದಲ್ಲಿಯೇ ಜನರ ಓಡಾಟ ಇದೆ. ಆದರೂ ಹೊಸ ವರ್ಷದ ಭಾನುವಾರ ಸುಮಾರು ಒಂದೂವರೆ ಎಕರೆಯಲ್ಲಿರುವ ಸುಮಾರು 1900 ಗಿಡಗಳನ್ನು ಸಂಪೂರ್ಣವಾಗಿ ಕಿಡಿಗೇಡಿಗಳು ಕಡಿದಿದ್ದು, ಘಟನೆ ವೇಳೆ ಮಾಲಿಕ ಹಾಗೂ ಅವರ ಮಕ್ಕಳು ಅನ್ಯ ಕೆಲಸಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.
ನಷ್ಟ ಭರಿಸಿ: ಘಟನಗೆ ಸಂಬಂಧಿಸಿದಂತೆ ಕಬ್ಬು ಬೆಳೆಗಾರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜು ಮಾತನಾಡಿ, ರಾಜ್ಯದಲ್ಲಿ ರೈತಗೂ ಮತ್ತು ರೈತ ಬೆಳೆದ ಬೆಳೆಗೂ ಯಾವ ರೀತಿಯಲ್ಲು ರಕ್ಷಣೆ ಇಲ್ಲವಾಗಿದೆ. ಸಾಲ ಮಾಡಿ ಬೆಳೆದ ಬೆಳೆ ಕೈಗೆ ಬಾರದೆ ನನ್ನ ಸ್ನೇಹಿತ ಎಲ್ಲಿ ಧೃತಿಗೆಡುತ್ತಾನೋ ಎಂದು ಆತಂಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೃತ್ಯ ಎಸಗಿರುವವರನ್ನು ಕೂಡಲೇ ಬಂಧಿಸಿ. ನಷ್ಟವನ್ನು ಸಂಪೂರ್ಣವಾಗಿ ಮಾಲಿಕನಿಗೆ ಒದಗಿಸಿಕೊಡುವ ಮೂಲಕ ನಷ್ಟಕ್ಕೆ ಒಳಗಾಗಿರುವ ರೈತನಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ತಿಳಿಸಿದರು.
ಕ್ರಮ ಕೈಗೊಳ್ಳಿ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಂಗೂರು ಶಂಕರ್ ಮಾತನಾಡಿ, ಸುಮಾರು 3 ಲಕ್ಷ ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗಿದ್ದು, ಪೊಲೀಸ್ ಇಲಾಖೆ ತಕ್ಷಣೆವೆ ಕ್ರಮ ಕೈಗೊಂಡು ಆರೋಪಿಗಳನ್ನ ಬಂಧಿಸಬೇಕು ಎಂದು ಆಗ್ರಹಿಸಿದರು. ಗದ್ದೆಮೋಳೆ ಶಿವಣ್ಣ , ಕುಂತನಹಳ್ಳಿ ಸ್ವಾಮಿ ಇದ್ದರು.