ಹಾಸನ: ಜಿಲ್ಲೆಯಲ್ಲಿ ಸೆ.1 ರಿಂದಲೇ ಎಲ್ಲಾ ಬಗೆಯ ಪ್ಲಾಸ್ಟಿಕ್ ಬ್ಯಾಗುಗಳ ಬಳಕೆಯನ್ನು ನಿಷೇಧಿಸಬೇಕು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ.ಅಧಿಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ನಗರ ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಿದೆ. ಆದರೆ ಹಾಸನ ನಗರ ಮತ್ತು ಜಿಲ್ಲೆಯಲ್ಲಿ ಮಾತ್ರ ಇನ್ನೂ ಆಗಿಲ್ಲ. ಸೆ.1 ರಿಂದ ಪ್ಲಾಸ್ಟಿಕ್ ಬಾಗುಗಳ ಬಳಕೆ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿ ಗೊಳಿಸುವುದಾಗಿ ಹಾಸನ ನಗರಸಭೆ ಒಪ್ಪಿಕೊಂಡಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ಬ್ಯಾಗ್ ಬಳಸುವ ವ್ಯಾಪಾರಿಗಳು, ಅಂಗಡಿಗಳ ಮಾಲೀಕರಿಗೆ ಭಾರೀ ಪ್ರಮಾಣದ ದಂಡ ವಿಧಿಸುವುದರ ಜೊತೆಗೆ ಟ್ರೇಡ್ ಲೈಸೆನ್ಸ್ ರದ್ದು ಮಾಡಿ ಕಾನೂನು ಕ್ರಮಗಳನ್ನೂ ಕೈಗೊಳ್ಳಲು ಸೂಚಿಸಲಾಗಿದೆ. ವ್ಯಾಪಾರಿಗಳಿಗಷ್ಟೇ ಆಲ್ಲ. ಪ್ಲಾಸ್ಟಿಕ್ ಬ್ಯಾಗ್ ಬಳಸುವ ಗ್ರಾಹಕರಿಗೂ ದಂಡ ವಿಧಿಸಲು, ಹಾಸನ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.
ಹಸಿ, ಒಣ ಕಸ ವಿಂಗಡಣೆ ಕಡ್ಡಾಯ: ಸೆ.1 ರಿಂದಲೇ ಮನೆಗಳಿಂದ ಕಸ ಸಂಗ್ರಹಿಸುವಾಗ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಿಸ ಬೇಕು. ಹಸಿ ಕಸವನ್ನು ಪ್ರತಿದಿನವೂ ಮನೆಗಳಿಂದ ಸಂಗ್ರಹಿಸಬೇಕು . ಒಣ ಕಸವನ್ನು ವಾರದಲ್ಲಿ ಮೂರು ದಿನ ಸಂಗ್ರಹಿಸಬೇಕು ಒಣ ಕಸದಲ್ಲಿ ಪೇಪರ್, ಮೆಟಲ್ ಸೇರಿದಂತೆ ಗಟ್ಟಿ ಕಸವನ್ನು ವಿಂಗಡಿಸಬೇಕು. ಡೈಪರ್, ಸ್ಯಾನಿಟರಿ ಪ್ಯಾಡ್, ಮೆಡಿಕಲ್ ವೇಸ್ಟ್‌ನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಈ ಪ್ರಕ್ರಿಯೆ ಸೆ.1 ರಿಂದಲೇ ಆರಂಭವಾಗಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಸವನ್ನು ಸಂಸ್ಕರಿಸುವ ಕೆಲಸವನ್ನು ಸ್ಥಳೀಯ ಸಂಸ್ಥೆ ಗಳು ಕಡ್ಡಾಯವಾಗಿ ಮಾಡಬೇಕು. ಹಸಿ ಕಸದಲ್ಲಿ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ಮಾರುಕಟ್ಟೆ ದರಕ್ಕಿಂತ ಶೇ.50 ಕಡಿಮೆ ದರದಲ್ಲಿ ಮಾರಾಟ ಮಾಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಹಳೇ ಕಟ್ಟಡದ ತ್ಯಾಜ್ಯವನ್ನು ಪರವಾನಗಿ ಪಡೆದ ನಿಗದಿತ ವಾಹನಗಳಲ್ಲಿಯೇ ತುಂಬಿಸಿ ನಿಗದಿಪಡಿಸಿದ ಪ್ರದೇಶದಲ್ಲಿಯೇ ಸುರಿಯಬೇಕು. ಇದು ಕಡ್ಡಾಯ. ಹಳೇ ಕಟ್ಟಡಗಳ ತ್ಯಾಜ್ಯ ಸುರಿಯಲು ಸ್ಥಳವನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ನಿವೇಶನ ಮಾಲೀಕರಿಗೆ ದಂಡ: ನಗರ, ಪಟ್ಟಣ ಪ್ರದೇಶಗಳಲ್ಲಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟು ಕೊಳ್ಳದೇ ಕಸ ಸುರಿಯಲು ಅವಕಾಶ ಮಾಡಿರುವ ಮಾಲೀಕರಿಗೆ ಭಾರೀ ಪ್ರಮಾಣದ ದಂಡ ವಿಧಿಸಲು ಸೂಚನೆ ನೀಡಲಾಗಿದೆ.
ಸೂಚನೆ ನೀಡಿದ ನಂತರವೂ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ಮೊದಲ ಬಾರಿ 25 ಸಾವಿರ ರೂ. ದಂಡ ಮತ್ತು ಕಾನೂನು ಕ್ರಮಕೈಗೊಳ್ಳಲು ಸ್ಥಳೀಯ ಸಂಸ್ಥೆ ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಅಕ್ರಂಪಾಷಾ, ಪ್ರಭಾರ ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.