Advertisement

ಬಿದಿರಿನ ರಾಜಧಾನಿ ಆಗಲಿದೆ ಕಾಸರಗೋಡು

12:50 AM Jan 28, 2019 | Harsha Rao |

ಕಾಸರಗೋಡು: ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ ಉದ್ದೇಶದೊಂದಿಗೆ ಕಾಸರಗೋಡು ಜಿಲ್ಲೆಯನ್ನು’ಬ್ಯಾಂಬೂ ಕಾಪಿಟಲ್‌’ ಆಗಿ ಬದಲಾಯಿ ಸಲು ಬೃಹತ್‌ ಯೋಜನೆಯೊಂದನ್ನು ರೂಪಿಸಲಾಗಿದ್ದು, ಮುಂದಿನ ಜೂನ್‌ 5 ರಂದು ನಡೆಯುವ ಅಂತಾರಾಷ್ಟ್ರೀಯ ಪರಿಸರ ದಿನದಂದು ಬಿದಿರು ಸಸಿ ನೆಡುವ ಮೂಲಕ ಈ ಯೋಜನೆಯನ್ನು ಸಾಕಾರ ಗೊಳಿಸಲು ತೀರ್ಮಾನಿಸಲಾಗಿದೆ.

Advertisement

ಪ್ರಕೃತಿ ಮತ್ತು ಪರಿಸರದ ಸಮಸ್ಯೆ ಗಳನ್ನು ಪರಿಹರಿಸುವ ಜತೆಯಲ್ಲಿ ಅಸಮತೋಲನವನ್ನು ನಿವಾರಿಸುವುದು ಈ ಮಹತ್ವದ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಾರಂಭಿಕ ಪ್ರಕ್ರಿಯೆಗಳು ಆರಂಭ ಗೊಂಡಿವೆೆ. ಕಾಸರಗೋಡು ಜಿಲ್ಲಾಡಳಿತ ಮತ್ತು ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಗಳಲ್ಲಿ ಈ ಯೋಜನೆಗೆ ರೂಪುರೇಷೆ ಸಿದ್ಧ್ದಪಡಿಸಲಾಗಿದ್ದು ಮುಂದಿನ ಐದು ತಿಂಗಳ ಒಳಗಾಗಿ ಜಾರಿಗೆ ಬರಲಿದೆ. ಬಿದಿರಿನ ಸಸಿಗಳನ್ನು ನೆಟ್ಟು ಬೆಳೆಸಿ ಜಿಲ್ಲೆಯ ಪ್ರಕೃತಿ-ಪರಿಸರದ ಸಮಸ್ಯೆಗಳನ್ನು ದೂರ ಮಾಡುವ ಬೃಹತ್‌ ಯೋಜನೆ ಸಿದ್ಧವಾಗಿದ್ದು, ಬಿದಿರು ಸಸಿ ನೆಟ್ಟು ಬೆಳೆಸುವುದರಿಂದ ಭೂಮಿಯ ಅಂತರ್ಜಲ ಮಟ್ಟ ಗಣನೀಯ ಹೆಚ್ಚಳವಾಗಲಿದೆ ಮಾತ್ರವಲ್ಲ ಬಿದಿರು ಬೆಳೆಸಲ್ಪಡುವ ಪ್ರತಿ ಗ್ರಾಮ ಪಂಚಾಯತ್‌ಗಳಿಗೂ ಇದರಿಂದ ವರಮಾನ ಸಾಧ್ಯವಿದೆ ಎಂದು ನಿರೀಕ್ಷಿಸಲಾಗಿದೆ. ಯೋಜನೆಯು ಜೂ. 5ರಂದು ನಡೆಯುವ ಅಂತಾ ರಾಷ್ಟ್ರೀಯ ಪರಿಸರ ದಿನದಂದು ಉದ್ಘಾಟನೆಗೊಳ್ಳಲಿದ್ದು, ಬಿದಿರು ಸಸಿ ನೆಡುವ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮತ್ತು ಕಾಸರಗೋಡು ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಜಾರಿಗೆ ಬರಲಿರುವ ಯೋಜನೆಯ ಬಗ್ಗೆ ತಜ್ಞರ ತಂಡದಿಂದ ಬಿದಿರು ಸಸಿ ನೆಡುವ ಮತ್ತು ಪೋಷಿಸುವ ಬಗ್ಗೆ ಸೂಕ್ತ ತರಬೇತಿ ಗ್ರಾ. ಪಂಚಾಯತ್‌, ಗ್ರಾಮಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಗಳ ಜಂಟಿ ಸಹಭಾಗಿತ್ವದಲ್ಲಿ ಬಿದಿರು ಸಸಿ ನೆಡುವಬೃಹತ್‌ ಯೋಜನೆ ಸಿದ್ಧಗೊಂಡಿದೆ.

ಬಿದಿರಿನ ಪ್ರಾಮುಖ್ಯತೆ

ಪ್ರಕೃತಿ ಮತ್ತು ಪರಿಸರದ ಅಸಮತೋಲ ನವನ್ನು ನಿವಾರಿಸುವ ಸದುದ್ದೇಶದಿಂದ ಬಿದಿರು ಸಸಿ ನೆಟ್ಟು ಬೆಳೆಸುವ ಬೃಹತ್‌ ಯೋಜನೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಒಂದು ಬಿದಿರಿ ನಿಂದ ಪ್ರತಿ ವರ್ಷ 22 ಕಿಲೋ ತೂಕದ ಬಿದಿರನ್ನು ಪಡೆಯಬಹುದಾಗಿದೆ. ಎರಡು ಬ್ಲಾಕ್‌ಗಳಲ್ಲಿ ಪ್ರಥಮ ವರ್ಷದಲ್ಲಿ ಒಟ್ಟಾರೆ 3 ಲಕ್ಷ ಬಿದಿರು ಸಸಿಗಳನ್ನು ನೆಡುವ ಯೋಜನೆ ಇದಾಗಿದೆ. ವರ್ಷಕ್ಕೆ ಒಟ್ಟು 22 ಲಕ್ಷದಷ್ಟು ಜೈವಿಕ ವಸ್ತು ಬಿದಿರಿನಿಂದ ಭೂಮಿಗೆ ಸೇರುತ್ತದೆ. ಹೀಗೆ ಬೀಳುವ ಬಿದಿರಿನ ಎಲೆ ತೊಗಟೆಯಿಂದ ಕೆಮ್ಮಣ್ಣಿನ ಭೂನೆಲವು ಫಲ ಸಮೃದ್ಧಿಯಾಗುತ್ತದೆ. ರಾಜ್ಯದಲ್ಲೇ ಅತಿ ಹೆಚ್ಚು ಪಾಳು ಬಾವಿಗಳಿ ರುವ ಕಾಸರಗೋಡು ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೂ ಬಿದಿರು ಬೆಳೆ ಸಹಾಯಕವಾಗಲಿದ್ದು, ಪಾಳು ಬಾವಿಗಳಲ್ಲಿ ನೀರು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ನೀರು ಸಿಗದೆ ಪಾಳು ಬಿದ್ದಿರುವ ಸಾವಿರದಷ್ಟು ಬಾವಿಗಳು ಮತ್ತು ಬೋರ್‌ವೆಲ್‌ಗ‌ಳಿರುವ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಹೆಚ್ಚು ನೀರು ಲಭ್ಯತೆಯು ಬಿದಿರು ಬೆಳೆಯಿಂದ ಸಾಧ್ಯವಿದೆ. ಬಿದಿರಿನ ಬೇರುಗಳು ಸುಲಭವಾಗಿ ಗಟ್ಟಿ ಮಣ್ಣಿನ ಆಳಕ್ಕೆ ಇಳಿಯುತ್ತವೆ. ಇದರಿಂದ ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ನೀರು ಭೂಮಿಯ ಅಡಿಪದರಕ್ಕೆ ಇಳಿಯುವಂತೆ ಆಗುತ್ತದೆ. ಹಲವು ವರ್ಷಗಳ ಕಾಲ ನಡೆಯುವ ಧನಾತ್ಮಕ ಪ್ರಕ್ರಿಯೆಯು ಬಿದಿರಿನ ಮೂಲಕ ಅಂತರ್ಜಲ ಹೆಚ್ಚಳಕ್ಕೂ ರಹದಾರಿಯಾಗಿದೆ. ಇದರಿಂದ ಜಿಲ್ಲೆಯಲ್ಲಿ ನೀರಿನ ಅಲಭ್ಯತೆಯನ್ನು ಸಾಕಷ್ಟು ಕಡಿಮೆ ಮಾಡಬಹುದಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Advertisement

ಗಿಡ ನೆಡಲು ಉದ್ಯೋಗ ಖಾತರಿ ಸದಸ್ಯರು

ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ನೇತೃತ್ವದಲ್ಲಿ ಯೋಜನೆಯನ್ನು ಮುನ್ನಡೆಸ ಲಾಗುತ್ತಿದೆ. ಎರಡು ತಾಲೂಕುಗಳ 13 ಗ್ರಾ.ಪಂ.ಗಳಲ್ಲಿ ಯೋಜನೆಯ ಜಾರಿ ಉದ್ದೇಶವನ್ನು ಇರಿಸಲಾಗಿದ್ದು, ಬಿದಿರು ನೆಡುವ ನಿರ್ದಿಷ್ಟ ಸ್ಥಳಗಳನ್ನು ಗೊತ್ತು ಪಡಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಈ ನಿಮಿತ್ತ ಸ್ಥಳದ ನಕ್ಷೆಯನ್ನು ತಯಾರಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿನ ಪರಂಬೋಕು ಹಾಗೂ ಸರಕಾರಿ ಸ್ವಾಮ್ಯದ ಬಂಜರು ಪ್ರದೇಶಗಳಲ್ಲಿ ಬಿದಿರನ್ನು ಬೆಳೆಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ.

ಬಿದಿರು ಯಾವುದೇ ಭೌಗೋಳಿಕತೆ ಯಲ್ಲೂ ಬೆಳೆಯುವ ಗುಣ ಹೊಂದಿರು ವುದು ಇದರ ವಿಶೇಷತೆಯಾಗಿದೆ. ಪ್ರಸ್ತುತ ಜಿಲ್ಲೆಯ ಉತ್ತರದಲ್ಲಿರುವ ಹಲವು ಕಲ್ಲು ಪಾರೆ ಪ್ರದೇಶಗಳಲ್ಲಿ ಇದನ್ನು ಬೆಳೆಸುವ ಸದುದ್ದೇಶವಿರಿಸಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಿದಿರು ಗಿಡಗ ಳನ್ನು ನೆಡಲು ತೀರ್ಮಾನಿ ಸಲಾಗಿದ್ದು, ಮಳೆಗಾಲದ ಸಮಯ ಉದ್ಯೋಗ ಖಾತರಿ ಸದಸ್ಯರಿಗೂ ಕೆಲಸ ಸಿಗಲಿದೆ. ಬಿದಿರು ಮೌಲ್ಯವರ್ಧಿತ ಉತ್ಪನ್ನವಾದ್ದರಿಂದ ಕರಕುಶಲ ವಸ್ತು ತಯಾರಿಕೆ ಸಹಿತ ಕಟ್ಟಡ, ಸೇತುವೆ ನಿರ್ಮಾಣದಲ್ಲೂ ಇದನ್ನು ಬಳಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next