ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಆಯೋಜಿಸುವ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗ ನೃತ್ಯ ಸರಣಿಯ 30ನೇ ಕಾರ್ಯಕ್ರಮವು ಇತ್ತೀಚೆಗೆ ಪುತ್ತೂರು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಅಕಾಡೆಮಿಯ ಪುಟಾಣಿ ಕಲಾವಿದರಿಂದ ನೆರವೇರಿತು. ಕಾರ್ಯಕ್ರಮದ ಅಭ್ಯಾಗತರಾಗಿ ಉಪನ್ಯಾಸಕರು ಹಾಗೂ ಸಂಗೀತ-ನೃತ್ಯ ಕಲಾವಿದರಾದ ಡಾ| ಶೋಭಿತಾ ಸತೀಶ್ ಅವರು ದೀಪ ಬೆಳಗಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಜೀವನದಲ್ಲಿ ಲಲಿತಕಲೆಗಳ ಮಹತ್ವ, ವ್ಯಕ್ತಿತ್ವ ವಿಕಸನದಲ್ಲಿ ಅವುಗಳ ಪಾತ್ರದ ಬಗ್ಗೆ ವಿವರಿಸಿ ಪುಟಾಣಿ ಕಲಾವಿದರಿಗೆ ಶುಭ ಕೋರಿದರು. ವಿದ್ಯಾರ್ಥಿಗಳಾದ ಕು| ಇಶಾ ಸುಲೋಚನಾ ಮುಳಿಯ, ಶ್ರೇಯಾ ಕಲ್ಲೂರಾಯ, ಪ್ರಾರ್ಥನಾ ಬಿ., ವಿಂಧ್ಯಾ ಕಾರಂತ, ಶಮಾ ಚಂದಕೂಡ್ಲು ಮತ್ತು ಅಕ್ಷಯಪಾರ್ವತಿ ಸರೋಳಿ ಗುರುಪೂರ್ಣಿಮೆಯ ಶುಭಸಂದರ್ಭದಲ್ಲಿ ನೃತ್ಯ ಪ್ರದರ್ಶನ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶುದ್ಧಧನ್ಯಾಸಿ ರಾಗ, ಆದಿತಾಳದ ಗಣೇಶ ಸ್ತುತಿಯನ್ನು ವಿದ್ಯಾರ್ಥಿನಿಯರು ಉತ್ತಮವಾಗಿ ಪ್ರಸ್ತುತ ಪಡಿಸಿ ವಿಘ್ನ ನಿವಾರಕನಿಗೆ ವಂದನೆ ಸಲ್ಲಿಸಿದರು. ಅನಂತರ ಪ್ರತಿಯೊಂದು ನೃತ್ಯವನ್ನು ಒಬ್ಬೊಬ್ಬರಾಗಿಯೇ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕು| ಶಮಾ ಚಂದಕೂಡ್ಲು$ಇವರು ಶ್ರೀರಂಜನಿ ರಾಗ ಆದಿತಾಳದ ಗಜವದನಾ ಕರುಣಸದನ ಸ್ತುತಿಯನ್ನು ಸರಳ ಸುಂದರವಾಗಿ ನರ್ತಿಸಿದರು. ಬಳಿಕ ಕು| ಇಶಾ ಸುಲೋಚನಾ ಮುಳಿಯ ಅವರು ಹಿಂದೋಳ ರಾಗ ಆದಿ ತಾಳದಲ್ಲಿರುವ ಮಾಮವತು ಎಂಬ ಸರಸ್ವತಿ ಸ್ತುತಿಯನ್ನು ಭಾವಪೂರ್ಣವಾಗಿ ನರ್ತಿಸಿದರು.
ತದನಂತರ ಮಹಾವೈದ್ಯನಾಥ ಅವರ ರಚನೆಯಾದ, ಜನರಂಜಿನಿ ರಾಗ, ಆದಿ ತಾಳದಲ್ಲಿರುವ ಪಾಹಿಮಾಂ ಶ್ರೀ ರಾಜರಾಜೇಶ್ವರಿ ಎಂಬ ಕೃತಿಗೆ ನೃತ್ಯ ಪ್ರಸ್ತುತಿಯನ್ನು ಕು| ಶ್ರೇಯಾ ಕಲ್ಲೂರಾಯ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇನ್ನೋರ್ವ ಕಲಾವಿದೆಯಾದ ವಿಂಧ್ಯಾ ಕಾರಂತ ಇವರು ಸ್ವಾತಿ ತಿರುನಾಳ್ ಮಹಾರಾಜರ ಆರಾಧ್ಯದೇವರಾದ ತಿರುವನಂತಪುರದ ಅನಂತಪದ್ಮನಾಭನ ಕುರಿತಾದ ಪರಮಪುರುಷ ಜಗದೀಶ್ವರ ಎಂಬ ಕೀರ್ತನೆಗೆ ಹೆಜ್ಜೆ ಹಾಕಿದರು. ಸರಳವಾದ ಜತಿ ಹಾಗೂ ಕೊನೆಯಲ್ಲಿ ಮೂಡಿಬಂದ ಅನಂತಪದ್ಮನಾಭನ ದರ್ಶನದ ಅನುಭವವನ್ನು ತಮ್ಮ ಅಭಿನಯದ ಮೂಲಕ ಸೊಗಸಾಗಿ ನಿರ್ವಹಿಸಿದರು. ಮುಂದೆ ಕು| ಪ್ರಾರ್ಥನಾ ಬಿ. ಇವರು ನಾಗಸ್ವರಾವಳಿ ರಾಗ, ಆದಿತಾಳದ ಶಿವನ ತಾಂಡವಗಳಲ್ಲಿ ಒಂದಾದ ಆನಂದ ತಾಂಡವದ ವರ್ಣನೆಯುಳ್ಳ ಕನ್ನಡ ರಚನೆ ಆನಂದ ತಾಂಡವೇಶ್ವರನಾ ಕೃತಿಗೆ ಮನೋಹರವಾಗಿ ನರ್ತಿಸಿದರು. ಮತ್ತೋರ್ವ ನ್ಯತ್ಯಗಾತಿ ಕು| ಅಕ್ಷಯಪಾರ್ವತಿ ಸರೋಳಿ ಅವರು ಮೈಸೂರು ವಾಸುದೇವಾಚಾರ್ಯರ ಕಮಾಚ್ ರಾಗ, ಆದಿತಾಳದ ಬ್ರೋಚೇವಾರೆವರುರಾ ಕೃತಿಯನ್ನು ಅತ್ಯುತ್ತಮವಾಗಿ, ಬಹಳ ಪ್ರಬುದ್ಧವಾಗಿ ನರ್ತಿಸಿದರು. ಕಾರ್ಯಕ್ರಮದ ಅಂತ್ಯ ಭಾಗದಲ್ಲಿ ಎಲ್ಲ ಕಲಾವಿದೆಯರು ಒಟ್ಟಾಗಿ ನಾಸಿಕಭೂಷಿಣಿ ರಾಗದ ಮುತ್ತುಸ್ವಾಮಿ ದೀಕ್ಷಿತರ ಕೃತಿ ಶ್ರೀ ರಮಾ ಸರಸ್ವತೀ ನೃತ್ಯಕ್ಕೆ ದೀಪಕ್ ಕುಮಾರ್ ಅವರು ಮಾಡಿದ ಬಹಳ ಸುಂದರವಾದ ಸಂಯೋಜನೆಯಲ್ಲಿ ನಿಖರವಾಗಿ ಹಜ್ಜೆ ಹಾಕಿದರು. ಹಿಮ್ಮೇಳನದ ನಟುವಾಂಗದಲ್ಲಿ ನೃತ್ಯ ಗುರುಗಳಾದ ವಿ| ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿ| ಪ್ರೀತಿಕಲಾ ಹಾಗೂ ಮೃದಂಗದಲ್ಲಿ ವಿ| ಶ್ರೀಧರ ರೈ ಕಾಸರಗೋಡು ಸಹಕರಿಸಿದರು.
ಈ ಎಲ್ಲ ಬಾಲ ಕಲಾವಿದೆಯರು ಕಳೆದ ಐದಾರು ವರ್ಷಗಳಿಂದ ನೃತ್ಯಾಭ್ಯಾಸ ನಡೆಸುತ್ತಿದ್ದು, ಹಲವಾರು ಕಡೆಗಳಲ್ಲಿ ಕಾರ್ಯಕ್ರಮ ನೀಡಿರುತ್ತಾರೆ. ನೃತ್ಯಗಾರ್ತಿಯರ ಅಭಿನಯ, ಅಂಗಶುದ್ಧಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮುಖ್ಯವಾಗಿ ಈ ಒಂದು ಕಾರ್ಯಕ್ರಮಕ್ಕೆ ಎಲ್ಲ ಜನ ಪುಟಾಣಿ ಉದಯೋನ್ಮುಖ ಕಲಾವಿದರು ನಡೆಸಿದ ಚೊಕ್ಕವಾದ ತಯಾರಿ, ನೃತ್ಯ ಪ್ರಸ್ತುತಿಯಲ್ಲಿ ಹೊಂದಾಣಿಕೆ, ಗುರುಗಳ ಶ್ರಮ ಮತ್ತು ಸೃಜನಶೀಲ ಸಂಯೋಜನೆ, ಹೆತ್ತವರ ಶ್ರಮ ಇವೆಲ್ಲವೂ ಎದ್ದು ಕಾಣುತ್ತಿತ್ತು. ಕಾರ್ಯಕ್ರಮ ಪುಟ್ಟದಾದರೂ ಎಲ್ಲ ಪ್ರೇಕ್ಷಕರಿಗೆ ಮೆಚ್ಚುಗೆಯಾದದ್ದು ಇದೇ ಕಾರಣಕ್ಕೆ.
ಕಲಾಶಾಲೆಯ ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾಗಿದ್ದ ನೃತ್ಯಾಂತರಂಗ ಇಂದು ರಾಜ್ಯದ, ಹೊರ ರಾಜ್ಯದ ಉದಯೋನ್ಮುಖ ಕಲಾವಿದರಿಗೂ ವೇದಿಕೆ ಕಲ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯವೇ ಸರಿ. ಈ ಎಲ್ಲ ಯಶಸ್ಸಿನ ಹಿಂದಿನ ಶಕ್ತಿ ಗುರು ವಿ| ದೀಪಕ್ ಕುಮಾರ್ ಹಾಗೂ ಮನೆಯವರು ಎಂದರೆ ತಪ್ಪಾಗಲಾರದು.
ಅಪೂರ್ವಾ