Advertisement

ಬಗಂಬಿಲ ಅಂಗನವಾಡಿ ಕೇಂದ್ರಕ್ಕೆ ಬೇಕಿದೆ ಸ್ವಂತ ಕಟ್ಟಡ ಭಾಗ್ಯ

10:38 PM Jul 15, 2019 | Sriram |

ಕೋಟೆಕಾರು: ಒಂದೆಡೆ ಖಾಸಗಿ ಆಸ್ಪತ್ರೆಯಿಂದ ಬರುವ ತ್ಯಾಜ್ಯ ನೀರಿನ ವಾಸನೆ ಇನ್ನೊಂದೆಡೆ ಮುರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಇದು ಕೋಟೆಕಾರು ಬಗಂಬಿಲದ ಅಂಗನವಾಡಿ ಕೇಂದ್ರದ ದಯನೀಯ ಸ್ಥಿತಿ!

Advertisement

ಎರಡೂವರೆ ದಶಕದಿಂದ ಬಗಂಬಿಲ ನಾಗರಿಕ ಸೇವಾ ಸಮಿತಿಯ ಸಮುದಾಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಎರಡೂ ವರೆ ಸೆಂಟ್‌ ಜಾಗ ನೀಡಿ ಎರಡೂ ವರೆ ವರ್ಷ ಕಳೆದರೂ ಸಂಬಂಧಿತ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಮಕ್ಕಳ ಸ್ಥಿತಿ ಅತಂತ್ರವಾಗಿದೆ.

ಬಗಂಬಿಲ ನಾಗರಿಕ ಸೇವಾ ಸಮಿತಿಯ ಸಮುದಾಯ ಕೇಂದ್ರವು 28 ವರ್ಷಗಳ ಹಳೆ ಕಟ್ಟಡ ತೆಗೆದು ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಕಳೆದ 24 ವರ್ಷಗಳಿಂದ ಇದೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಬೇಕಾದ ಸವಲತ್ತುಗಳು, ವಿದ್ಯುತ್‌ ಬಿಲ್‌ ಸಹಿತ ಸ್ಥಳೀಯ ದಾನಿಗಳಿಂದ ಹಣ ಸಂಗ್ರಹಿಸಿ ವಿವಿಧ ಮೂಲ ಸೌಕರ್ಯವನ್ನು ಸಂಸ್ಥೆ ನೀಡುತ್ತಾ ಬಂದಿದೆ. ಕಳೆದ ಐದು ತಿಂಗಳ ಹಿಂದೆ ಈ ಕಟ್ಟಡದ ಭಾಗಶಃ ಕಟ್ಟಡ ತೆಗೆದು ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭ ಗೊಂಡಿದೆ. ಉಳಿದ ಒಂದು ಕೋಣೆಯಲ್ಲಿ ವಿದ್ಯಾರ್ಥಿಗಳಿಗೆ ಅಂಗನ ವಾಡಿ ನಡೆಸಲು ವ್ಯವಸ್ಥೆ ಮಾಡಿದ್ದು, ಕಟ್ಟಡ ರಿಪೇರಿ ಮಾಡಿಕೊಟ್ಟಿದ್ದರಿಂದ ಕಟ್ಟಡ ಸುಭದ್ರವಾಗಿದ್ದರೂ ಕಟ್ಟಡ ತುಂಡಾದ ಜಾಗದಲ್ಲಿ ಫ್ಲೆಕ್ಸ್‌ ಹಾಕಿದ್ದು, ಕಳೆದ ಒಂದು ತಿಂಗಳಿನಿಂದ ಮಳೆಯ ಸಮಸ್ಯೆ ಒಂದೆಡೆ ಯಾದರೆ, ಇನ್ನೊಂದೆಡೆ ಶೌಚಾಲಯದ ಸಮಸ್ಯೆಯೂ ಹೆಚ್ಚಿದ್ದು, ನೂತನ ಅಂಗನವಾಡಿ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾದರೆ ಸಮಸ್ಯೆ ಬಗೆಹರಿಸಬಹುದು ಎನ್ನುತ್ತಾರೆ ಸ್ಥಳೀಯರು.

ಬೆಳ್ಳಿ ಹಬ್ಬಕ್ಕಿಲ್ಲ ಸ್ವಂತ ಕಟ್ಟಡ ಭಾಗ್ಯ
ಒಂದೆಡೆ ಖಾಸಗಿ ಆಸ್ಪತ್ರೆಯ ತ್ಯಾಜ್ಯ ನೀರಿನ ಸಮಸ್ಯೆ ಇಲ್ಲಿದೆ. ನೀರನ್ನು ಒಂದು ಟ್ಯಾಂಕ್‌ನಿಂದ ಇನ್ನೊಂದು ಟ್ಯಾಂಕ್‌ಗೆ ವರ್ಗಾಯಿಸುವಾಗ ವಾಸನೆ ಬಡಿಯುತ್ತದೆ. ಇದು ಕಳೆದ ಹಲವು ವರ್ಷಗಳಿಂದ ನಿರಂತರವಾಗಿದೆ. ನಾಗರಿಕ ಸೇವಾ ಸಮಿತಿಯೂ 2019ರ ಜುಲೈ 27ಕ್ಕೆ ಅಂಗನವಾಡಿ ಕೇಂದ್ರ 25 ವರ್ಷ ಪೂರೈಸಿ ಬೆಳ್ಳಿ ಹಬ್ಬ ಆಚರಣೆಯಲ್ಲಿದ್ದರೂ ಅಂಗನ ವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಭಾಗ್ಯ ಸಿಗದಿ ರುವುದು ದುರಂತ ಎನ್ನುತ್ತಾರೆ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಪುಷ್ಪಾ ಬಗಂಬಿಲ.

ಅಂಗನವಾಡಿ ಕೇಂದ್ರ ನಿರ್ಮಾಣದ ಬಳಿಕ ನಾಗರಿಕ ಸಮಿತಿಗೆ ಕಟ್ಟಡ ನಿರ್ಮಾಣ ಮಾಡುವ ಯೋಚನೆಯಿತ್ತು, ಆದರೆ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳು ಇಲ್ಲದ ಕಾರಣ ಅನಿವಾರ್ಯವಾಗಿ ಇದ್ದ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಪುಷ್ಪಾ ಅವರು. ಪ್ರಸ್ತುತ ಇಲ್ಲಿ 25 ವಿದ್ಯಾರ್ಥಿಗಳು ದಾಖಲಾಗಿದ್ದು, 20 ವಿದ್ಯಾರ್ಥಿಗಳು ಅಂಗನವಾಡಿ ಕೇಂದ್ರದಲ್ಲಿ ಕಲಿಯುತ್ತಿದ್ದಾರೆ ಎನ್ನುತ್ತಾರೆ ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯಾಗಿರುವ ಸುಮತಿ ಬಗಂಬಿಲ.

Advertisement

 ಅಂಗನವಾಡಿ ಕೇಂದ್ರ ಮುಂದುವರಿಕೆ
ಸಾರ್ವಜನಿಕರ ಸಹಕಾರಕ್ಕಾಗಿ ಸ್ಥಳೀಯ ದಾನಿಗಳ ಮತ್ತು ಯುನೆಸ್ಕೋ ಸಹಕಾರದಿಂದ ನಿರ್ಮಾಣವಾಗಿದ್ದ ನಾಗರಿಕ ಸೇವಾ ಸಮಿತಿ ಕಟ್ಟಡದ ಅಭಿವೃದ್ಧಿಯ ನಿಟ್ಟಿನಲ್ಲಿ ಕಟ್ಟಡವನ್ನು ಕೆಡವಿದ್ದು, ಅಂಗನವಾಡಿಗೆ ತಾತ್ಕಾಲಿಕ ಭಾಗಶಃ ಕಟ್ಟಡವನ್ನು ಉಳಿಸಕೊಳ್ಳಲಾಗಿದೆ. ಸಮಿತಿಯೂ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಖಾಲಿ ಜಾಗವನ್ನು ದಾನ ಮಾಡಿದ್ದು, ನೂತನ ಅಂಗನವಾಡಿ ಕೇಂದ್ರ ಸ್ಥಾಪನೆಗೆ ಸಂಬಂಧಿತ ಇಲಾಖೆ ಮತ್ತು ಕೋಟೆಕಾರು ಪಟ್ಟಣ ಪಂಚಾಯತ್‌ಗೆ ಅರ್ಜಿ ಸಲ್ಲಿಸಿ ಒತ್ತಾಯಿಸಿದೆ. ಅಂಗನವಾಡಿ ಕೇಂದ್ರವನ್ನು ಮುಂದುವರೆಸಲು ಸಮಿತಿ ನಿರ್ಧರಿಸಿದೆ.
– ರಿತೇಶ್‌ ಬಗಂಬಿಲ, ಬಗಂಬಿಲ ನಾಗರಿಕ ಸೇವಾ ಸಮಿತಿ ಅಧ್ಯಕ್ಷ

 ಅನುದಾನ ಬಿಡುಗಡೆಯಾದರೆ ಕಟ್ಟಡ ನಿರ್ಮಾಣ
ನಾಗರಿಕ ಸಮಿತಿಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರದ ಈ ಹಿಂದಿನ ಕಟ್ಟಡ ತೆರ ವಿನಿಂದ ವಿದ್ಯಾರ್ಥಿಗಳಿಗೆ ಜಾಗದ ಅಭಾವ ಇದೆ. ಸ್ಥಳೀಯ ಸರಕಾರಿ ಶಾಲೆಗೆ ತಾತ್ಕಾಲಿಕ ವ್ಯವಸ್ಥೆಗೆ ಮನವಿ ಮಾಡಿದ್ದು ಅದಕ್ಕೆ ಲಿಖೀತ ಮನವಿ ಮಾಡಲು ತಿಳಿಸಿದ್ದಾರೆ. ಅಂಗನವಾಡಿ ಕೇಂದ್ರ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವುದರಿಂದ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಕಟ್ಟಡ ನಿರ್ಮಾಣ ಸಾಧ್ಯ
– ಶ್ಯಾಮಲಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಮ. ಗ್ರಾ.

 ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ
ಕೋಟೆಕಾರು ಪಟ್ಟಣ ಪಂಚಾಯತ್‌ನಿಂದ 5 ಲಕ್ಷದವರೆಗೆ ಅನುದಾನ ನೀಡಲು ಅವಕಾಶವಿದೆ. ಬಗಂಬಿಲ ಮತ್ತು ಕೊಂಡಾಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 10 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವ ಸರಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ಕೆಲವು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
 - ಪೂರ್ಣಕಲಾ, ಮುಖ್ಯಾಧಿಕಾರಿ, ಕೋಟೆಕಾರು ಪಟ್ಟಣಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next