Advertisement

ಗಣ್ಯರ ಹಣದ ಬ್ಯಾಗ್‌ ಎಗರಿಸಿದ ಖಾಕಿ

11:00 AM Dec 23, 2017 | |

ಬೆಂಗಳೂರು: ಭದ್ರತೆಗೆ ನಿಯೋಜನೆಗೊಂಡ ವಿವಿಐಪಿ ಭದ್ರತಾ ವಿಭಾಗದ ಸಿಬ್ಬಂದಿಯೇ ತಾರಾ ಹೋಟೆಲ್‌ ವೊಂದರಲ್ಲಿ ವಾಸ್ತವ್ಯ ಹೂಡಿದ್ದ ಗಣ್ಯರೊಬ್ಬರ ಹಣವಿದ್ದ ಬ್ಯಾಗ್‌ ಕಳವು ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಡಿ.16 ರಂದು ನಗರಕ್ಕೆ ಆಗಮಿಸಿದ್ದ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಮೋದಿಯ ಬೆಂಗಾವಲು ಸೇವೆಗೆ ನಿಯೋಜನೆಗೊಂಡಿದ್ದ ವಿವಿಐಪಿ ಭದ್ರತಾ ವಿಭಾಗದ ಸಿಬ್ಬಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ತಾರಾ ಹೋಟೆಲ್‌ನಲ್ಲಿ ತಂಗಿದ್ದ ಗಣ್ಯರೊಬ್ಬರ ಹಣವಿದ್ದ ಬ್ಯಾಗ್‌ ಕಳವು ಮಾಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

Advertisement

ತನಿಖೆಗೆ ಸೂಚನೆ: ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಹಣವಿದ್ದ ಬ್ಯಾಗ್‌ ಕಳವು ಮಾಡಿರುವ ದೃಶ್ಯಾವಳಿಗಳು ಸೆರೆಯಾಗಿದೆ. ಘಟನೆ ಕುರಿತು ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ನಗರ ಪೊಲೀಸ್‌ ಕಮಿಷನರ್‌ ಟಿ. ಸುನೀಲ್‌ಕುಮಾರ್‌ ಸೂಚನೆ ನೀಡಿದ್ದಾರೆ.

ಈಗಾಗಲೇ ತನಿಖೆ ಆರಂಭಿಸಿರುವ ವಿವಿಐಪಿ ವಿಭಾಗದ ಇನ್ಸ್‌ಪೆಕ್ಟರ್‌ ರಾಮಕೃಷ್ಣ ಆರೋಪ ಎದುರಿಸುತ್ತಿರುವ ಎಎಸ್‌ಐ ಮುತ್ತುರಾಯಪ್ಪ, ಹೆಡ್‌ ಕಾನ್ಸ್‌ಟೇಬಲ್‌ ವೈ.ವಿ ನಾಗರಾಜ್‌ ಸೇರಿದಂತೆ, ಆದಿನ ಎಸ್ಕಾರ್ಟ್‌ ಸೇವೆಗೆ ಕಾರು ಚಾಲಕರಾಗಿ ಹೋಗಿದ್ದ ಸಿಎಆರ್‌ ಪೇದೆಯೊಬ್ಬರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆಯಲಾಗಿದೆ ಎಂದು ಮೂಲಗಳು “ಉದಯವಾಣಿಗೆ ತಿಳಿಸಿವೆ.

ಇತ್ತೀಚೆಗಷ್ಟೇ ರೇಸ್‌ಕೋರ್ಸ್‌ ರಸ್ತೆಯಲ್ಲಿ ಮಹಿಳೆಯೊಬ್ಬರಿಂದ ಅಮಾನ್ಯಗೊಂಡ 1 ಕೋಟಿ ರೂ. ನೋಟುಗಳನ್ನ ಸಿಸಿಬಿ ಪೊಲೀಸರೇ ಕಸಿದು ಪರಾರಿಯಾಗಿರುವ ಘಟನೆ ಬೆನ್ನಲ್ಲೇ ಗಣ್ಯರೊಬ್ಬರ ಹಣದ ಬ್ಯಾಗ್‌ ವಿವಿಐಪಿ ಭದ್ರತಾ ವಿಭಾಗ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ಮುಖ್ಯ ಪೇದೆ ಭಾಗಿಯಾಗಿದ್ದಾರೆ ಎನ್ನಲಾದ ಈ ಕಳವು ಪ್ರಕರಣ ಇಡೀ ಪೊಲೀಸ್‌ ಇಲಾಖೆಗೆ ಮತ್ತೂಮ್ಮೆ ಮುಜುಗರ ತಂದೊಡ್ಡಿದೆ.

ಘಟನೆ ಹಿನ್ನೆಲೆ: ಡಿ.16 ರಂದು ಜಿಎಸ್‌ಟಿ ಸಭೆಗೆ ಆಗಮಿಸಿದ್ದ ಬಿಹಾರ ಡಿಸಿಎಂ ಸುಶೀಲ್‌ಕುಮಾರ್‌ ಮೋದಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಸ್ಟಾರ್‌ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದರು. ಈ ವೇಳೆ ಮೊದಲನೇ
ಪಾಳಿಯ ಬೆಂಗಾವಲು ಸೇವೆಗೆ ನಿಯೋಜನೆಗೊಂಡಿದ್ದ ಎಎಸ್‌ಐ ಮುತ್ತುರಾಯಪ್ಪ, ಹೆಡ್‌ಕಾನ್ಸ್‌ಟೇಬಲ್‌ ವೈ.ವಿ ನಾಗರಾಜ್‌ ರಾತ್ರಿ 9ಗಂಟೆ ಬಳಿಕ ಹೋಟೆಲ್‌ ನಿಂದ ಹೊರಗಡೆ ಬರುವಾಗ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಗಣ್ಯರೊಬ್ಬರಿಗೆ ಸೇರಿದೆ ಎನ್ನಲಾದ ಬ್ಯಾಗ್‌ವೊಂದನ್ನು ತೆಗೆದುಕೊಂಡಿದ್ದು ತಮ್ಮ ಪಾಳಿ ಮುಗಿದಿದ್ದರಿಂದ ನಗರಕ್ಕೆ ವಾಪಾಸಾಗಿದ್ದಾರೆ.

Advertisement

ಆ ನಂತರ ಹೋಟೆಲ್‌ನಲ್ಲಿದ್ದ ಗಣ್ಯ ಅತಿಥಿಗೆ ತನ್ನ ಬ್ಯಾಗ್‌ ಕಳುವಾಗಿರುವುದು ಗಮನಕ್ಕೆ ಬಂದಿದ್ದು, ವಿಮಾನ ನಿಲ್ದಾಣದಿಂದಲೇ ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ದೂರವಾಣಿ ಮೂಲಕ ವಿಚಾರಿಸಿದರು. ಈ ಹಿನ್ನೆಲೆಯಲ್ಲಿ ಹೋಟೆಲ್‌ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಬ್ಬರು ಬ್ಯಾಗ್‌ ತೆಗೆದುಕೊಂಡು ಹೋಗುವುದು ಕಂಡು ಬಂದಿದೆ.

ನಡುರಾತ್ರಿಯಲ್ಲಿಯೇ ಸಂಧಾನ?
ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಹೋಟೆಲ್‌ಗೆ ಆಗಮಿಸಿ ಆರೋಪಿತ ಸಿಬ್ಬಂದಿ ಯನ್ನು ವಾಪಸ್‌ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪ ನಿರಾಕರಿಸಿದ ಪೊಲೀಸ್‌ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿ ತೋರಿಸಿದ ಬಳಿಕ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾ ಗಿದೆ. ಕೂಡಲೇ ತೆಗೆದುಕೊಂಡು ಹೋಗಿದ್ದ ಬ್ಯಾಗ್‌ ವಾಪಸ್‌ ನೀಡಿದ್ದಾರೆ. ಆದರೆ, ಇಲಾಖೆಯ ಮರ್ಯಾದೆ ಹೋಗಲಿದೆ ಎಂಬ ಉದ್ದೇಶದಿಂದ ದೂರು ದಾಖಲಿಸದೇ ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ದ್ದರು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಖಾಸಗಿ ಹೋಟೆಲ್‌ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ವಾಟ್ಸಪ್‌ ಮೂಲಕ ರವಾನೆಯಾಗಿದ್ದು, ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಅವರ ಗಮನಕ್ಕೆ ಬಂದಿದೆ.

ಬ್ಯಾಗ್‌ ಬಾಂಗ್ಲಾ ಕ್ರೀಡಾಪಟುಗಳದೆ
ತಾರಾ ಹೋಟೆಲ್‌ನಲ್ಲಿ ಬಾಂಗ್ಲಾ ಕ್ರೀಡಾ ಪಟುಗಳು ಹಾಗೂ ಇತರೆ ಗಣ್ಯರು ತಂಗಿದ್ದರು ಎಂಬ ಮಾಹಿತಿಯಿದೆ. ಹೀಗಾಗಿ ಯಾರ ಬ್ಯಾಗ್‌ ಪೊಲೀಸರು ತೆಗೆದುಕೊಂಡಿದ್ದರು ಎಂಬುದು ತನಿಖೆಯಾಗಬೇಕು.

ಆರೋಪ ನಿರಾಕರಣೆ
ಈ ಘಟನೆಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಯೊಬ್ಬರನ್ನು ಉದಯವಾಣಿ ಸಂಪರ್ಕಿಸಿದಾಗ, ಭದ್ರತಾ ಸೇವೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಖಾಸಗಿ ಹೋಟೆಲ್‌ ನಿಂದ ಕನ್‌ಪ್ಯೂಸ್‌ ಆಗಿ ಬ್ಯಾಗ್‌ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಈ ಬ್ಯಾಗ್‌ ಯಾರದು ಎಂಬುದು ಗೊತ್ತಾಗದೇ ಅದೇ ದಿನ ರಾತ್ರಿ ಏರ್‌ಪೋರ್ಟ್‌ ಠಾಣೆಗೆ ಬ್ಯಾಗ್‌ ಒಪ್ಪಿಸಿದ್ದು, ಹೋಟೆಲ್‌ಗೆ ಬ್ಯಾಗ್‌ ರವಾನೆಯಾಗಿದೆ. ಈ ಸಂಬಂಧ ಆಯುಕ್ತರ ಸೂಚನೆ ಮೇರೆಗೆ ಸಿಸಿಟಿವಿಯ ದೃಶ್ಯಾವಳಿಗಳ ಪರಿಶೀಲನೆ, ಆರೋಪಿತ ಸಿಬ್ಬಂದಿಯ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.ಯಾವ ಉದ್ದೇಶಕ್ಕಾಗಿ ಬ್ಯಾಗ್‌ ಪಡೆದುಕೊಂಡು ಬಂದಿದ್ದರು. ಅದು ಯಾರಿಗೆ ಸೇರಿದ ಬ್ಯಾಗ್‌ ಆಗಿತ್ತು ಎಂಬುದರ ಬಗ್ಗೆ ವಿಚಾರಣೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು

ಬ್ಯಾಗ್‌ ನಲ್ಲಿ ಏನಿತ್ತು?
ಪೊಲೀಸ್‌ ಸಿಬ್ಬಂದಿ ಕೊಂಡೊಯ್ದಿದ್ದ ಬ್ಯಾಗ್‌ನಲ್ಲಿ 50 ಸಾವಿರ ರೂ.ಗಳಿಗೂ ಅಧಿಕ ಹಣ, ಕ್ಯಾಮೆರಾ ಸೇರಿದಂತೆ ಮತ್ತಿತರ
ವಸ್ತುಗಳು ಇದ್ದವು ಎಂದು ಹೇಳಲಾಗಿ¨.

ಘಟನೆಗೆ ಸಂಬಂಧಿ ಸಿದಂತೆ ಆರೋಪ ಎದುರಿಸುತ್ತಿರುವ ಸಿಬ್ಬಂದಿಯ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಆರೋಪದ ಸತ್ಯಾಸತ್ಯತೆ ಗೊತ್ತಾಗಲಿದೆ. ಒಂದು ವೇಳೆ ತಪ್ಪು ಎಸಗಿರುವುದು ಸಾಬೀತಾದರೆ ಕ್ರಮ ಜರುಗಿಸಲಾಗುವುದು.
 ● ಟಿ. ಸುನೀಲ್‌ಕುಮಾರ್‌, ನಗರ ಆಯುಕ್ತ

ಮಂಜುನಾಥ್‌ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next