Advertisement

ಹಿಂದುಳಿದ ವರ್ಗದವರೇ ಸಂಘಟಿತರಾಗಿ

07:22 AM Feb 04, 2019 | |

ತುಮಕೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಗೆಲುವಿನಲ್ಲಿಯೂ ಹಿಂದುಳಿದ ವರ್ಗಗಳು ನಿರ್ಣಾಯಕ ಪಾತ್ರವಹಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳು ಸಂಘಟಿತರಾಗುವುದು ಅವಶ್ಯಕ ಎಂದು ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

Advertisement

ನಗರದ ಶ್ರೀದೇವಿ ಕಾಲೇಜಿನಲ್ಲಿ ಭಾನುವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಹಿಂದುಳಿದ ವರ್ಗಗಳ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾ ಡುತ್ತಾ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಂಟರಿಂದ ಒಂಭತ್ತು ಲಕ್ಷ ಹಿಂದುಳಿದ ವರ್ಗಗಳ ಮತಗಳಿದ್ದು, ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಒಬಿಸಿ ಮೋರ್ಚಾ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ. ಸಕ್ರಿಯ ವಾಗಿರದ ಘಟಕಗಳಿಗೆ ಬೇರೆಯವರನ್ನು ನೇಮಿಸು ವಂತೆ ಒಬಿಸಿ ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು.

ಮೀಸಲಾತಿಗೆ ಹೋರಾಟ ಮಾಡಿ: ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಮೋದಿ ಅವರು ಪ್ರಧಾನಿಯಾದ ನಂತರ ಸಂವಿಧಾನ ಬದ್ಧವಾದ ರಕ್ಷಣೆಗಳನ್ನು ಒಬಿಸಿ ವರ್ಗಕ್ಕೂ ಕಲ್ಪಿಸಿಕೊಟ್ಟಿದ್ದಾರೆ. ದೇಶದ ಅಭಿವೃದ್ಧಿಗೆ ಪಣ ತೊಟ್ಟಿರುವ ಅವರನ್ನು ಗೆಲ್ಲಿಸಿ ಮತ್ತೂಮ್ಮೆ ಪ್ರಧಾನಿ ಮಾಡಬೇಕಾದ ಹೊಣೆಗಾರಿಕೆ ಒಬಿಸಿ ವರ್ಗದ ಮೇಲಿದೆ ಎಂದ ಅವರು, ಹಿಂದುಳಿದ ವರ್ಗಗಳು ಒಗ್ಗಟ್ಟು ಕಾದುಕೊಳ್ಳುವುದರ ಜೊತೆಗೆ ಒಬಿಸಿ ಮೀಸಲಾತಿ ಪಡೆದುಕೊಳ್ಳಲು ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಮುದ್ರಾ ಬ್ಯಾಂಕ್‌ನಿಂದ ಸಾಲ: ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಟಿಕೆಟ್ ಅನ್ನು ಪಟ್ಟು ಹಿಡಿದು ಪಡೆದುಕೊಳ್ಳಬೇಕು. ಒಬಿಸಿ ಜನಪ್ರತಿನಿಧಿಗಳನ್ನು ಛಲದಿಂದ ಗೆಲ್ಲಿಸಿಕೊಳ್ಳಬೇಕು ಎನ್ನುವುದನ್ನು ಅರಿತುಕೊಳ್ಳಬೇಕು. ಮೋದಿ ಅವರು ಪ್ರಧಾನಿಯಾದ ನಂತರ ಸ್ಥಾಪಿಸಿದ ಮುದ್ರಾ ಬ್ಯಾಂಕ್‌ನಿಂದ ರಾಜ್ಯದಲ್ಲಿ 76 ಲಕ್ಷ ಮಂದಿ ಸಾಲ ಪಡೆದುಕೊಂಡು ಸ್ವಾವಲಂಬಿಗಳಾಗಿದ್ದಾರೆ. ಕೇಂದ್ರ ಸರ್ಕಾರದ ಹಣ ಮಧ್ಯವರ್ತಿಗಳ ಕೈಗೆ ಸಿಗದಂತೆ ಜನರಿಗೆ ತಲುಪಿಸಲು ಜನಧನ್‌ ಖಾತೆ ಪ್ರಾರಂಭಿಸಿದರು. ಮೋದಿ ಅವಧಿಯ ಸಾಧನೆಗಳನ್ನು ಜನರಿಗೆ ಮುಟ್ಟಿಸಬೇಕು ಎಂದರು.

ಕಳ್ಳರ ಗುಂಪು: ಮೋದಿ ವಿರುದ್ಧ ನಿಂತಿರುವ ಘಟಬಂಧನ್‌ ಎಂಬ ಕಳ್ಳರ ಗುಂಪು, ತಮ್ಮ ಕುಟುಂಬ ರಾಜಕೀಯವನ್ನು ಮಾಡಿಕೊಳ್ಳಲು, ಕುಟುಂಬದವರ ರಾಜಕೀಯ ಘಟಬಂಧನ್‌ ಮಾಡಿಕೊಳ್ಳಲಾಗಿದ್ದು, ಬಿಜೆಪಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಂತೆ ಘಟಬಂಧನ್‌ ಪ್ರಧಾನಿ ಅಭ್ಯರ್ಥಿಯನ್ನು ತಾಕತ್ತಿದ್ದರೆ ಘೋಷಿಸಲಿ. ಪ್ರಧಾನಿ ಅಭ್ಯರ್ಥಿ ಹೆಸರು ಹೇಳಿದ ತಕ್ಷಣ ಘಟಬಂಧನ್‌ ಛಿದ್ರವಾಗುತ್ತದೆ ಎಂದು ಲೇವಡಿ ಮಾಡಿದರು.

Advertisement

ರಾಜ್ಯ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ವಿಧಾನಪರಿಷತ್‌ ಸದಸ್ಯ ಡಾ.ಹುಲಿನಾಯ್ಕರ್‌ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಆಯೋಗ ರಚಿಸಿದ್ದು, ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕರ್ತರು ಕಾರ್ಯೋನ್ಮುಖರಾಗಿ: ರಾಜ್ಯದಲ್ಲಿ ಬಿಜೆಪಿಗೆ ಹಿಂದುಳಿದ ವರ್ಗಗಳ ಶಕ್ತಿ ಇದೆ ಎಂಬುದನ್ನು ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತೋರಿಸಿದ್ದಾರೆ. ಹಿಂದುಳಿದ ವರ್ಗಗಳು ಸಂಘಟಿತರಾಗುವ ಮೂಲಕ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕಿದೆ ಎಂದು ಸೂಚಿಸಿದರು.

ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿದ್ದ ಪದಾಧಿಕಾರಿಗಳು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 9ಲಕ್ಷ ಹಿಂದುಳಿದ ವರ್ಗಗಳ ಮತದಾರರಿದ್ದು, ಮುಂಬರುವ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಲೋಕಸಭಾ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಎಸ್‌.ಕೆ.ರಾಜು, ಜಿಲ್ಲಾಧ್ಯಕ್ಷ ಬೆಟ್ಟಸ್ವಾಮಿ, ನಗರ ಅಧ್ಯಕ್ಷ ಕೆ.ವೇದಮೂರ್ತಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್‌, ನಗರ ಪ್ರಧಾನಕಾರ್ಯದರ್ಶಿ ಜೆ.ಜಗದೀಶ್‌, ಜಿಲ್ಲಾ ಕಾರ್ಯದರ್ಶಿ ಚಂದ್ರಬಾಬು, ಬಲರಾಮ್‌, ರಾಮಲಿಂಗಪ್ಪ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next