ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲ ಹಿಂದೂಗಳಿಗೆ ಮಾತ್ರ ವಲ್ಲ, ಎಲ್ಲಾ ಜಾತಿ ಜನಾಂಗದವರಿಗೆ ಪ್ರವೇಶ ಇದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ದೇಗುಲಕ್ಕೆ ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಕೋರಿ ಬಿಜೆಪಿ ಮುಖಂಡ ಟಿ.ಜಿ.ಮೋಹನ್ ದಾಸ್ ಸಲ್ಲಿಸಿದ್ದ ಮನವಿ ಪುರಸ್ಕರಿಸಲು ನಿರಾಕರಿಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಜತೆಗೆ ತಿರುವಾಂ ಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಕೇರಳ ಸರಕಾರಕ್ಕೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ. ಅಲ್ಲದೆ, ಶಬರಿಮಲೆಗೆ ತೆರಳುವ ಯಾವುದೇ ಭಕ್ತ ಪವಿತ್ರ ಇರುಮುಡಿ ಹೊತ್ತುಕೊಂಡೇ ಹೋಗಬೇಕಾಗಿಲ್ಲ ಎಂದಿದೆ.
ನಾಲ್ವರು ಮಹಿಳೆಯರು ದೇಗುಲ ಪ್ರವೇಶಕ್ಕೆ ಅವಕಾಶ ಸಿಗದೇ ಇದ್ದ ಬಗ್ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ, ದೇಗುಲಕ್ಕೆ ತೆರಳುವ ಯಾವುದೇ ಭಕ್ತರಿಗೆ ಅಗತ್ಯ ನೆರವು ನೀಡಲು ಸಿದ್ಧ ಎಂದು ಕೇರಳ ಸರಕಾರ ಅರಿಕೆ ಮಾಡಿಕೊಂಡಿತು.
ಈಶ್ವರ್ ಭಾಗಿಯಾಗಿಲ್ಲ: ದೇಗುಲ ವಿಚಾರಗಳಲ್ಲಿ ಮುಖ್ಯ ಅರ್ಚಕರ ಕುಟುಂಬದ ರಾಹುಲ್ ಈಶ್ವರ್ ಮುಂಚೂಣಿಯಲ್ಲಿದ್ದು, ದೇಗುಲ ಪರವಾದ, ಭಕ್ತರ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಅವರು ಹೇಳಿಕೆ ನೀಡಿದ್ದರು. ಇದೀಗ ಅರ್ಚಕರ ಕುಟುಂಬವೇ, ರಾಹುಲ್ ಈಶ್ವರ್ ದೇಗುಲ ವ್ಯವಹಾರಗಳಲ್ಲಿ ಭಾಗಿಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ರಕ್ತ ಚೆಲ್ಲುವ ಮೂಲಕ ದೇಗುಲವನ್ನು ಅಪವಿತ್ರಗೊಳಿಸುವ ರಾಹುಲ್ ಈಶ್ವರ್ ಯೋಜನೆಯನ್ನು ಕುಟುಂಬ ಬೆಂಬಲಿಸುವುದಿಲ್ಲ ಎಂದು ಕಂದರಾರು ಮೋಹನಾರು ಹೇಳಿದ್ದಾರೆ. ಮತ್ತೂಂದು ಬೆಳವಣಿಗೆಯಲ್ಲಿ, ರಾಹುಲ್ ಈಶ್ವರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. 15 ವರ್ಷಗಳ ಹಿಂದೆ ತನಗೆ ಕಿರುಕುಳ ನೀಡಿದ್ದರು ಎಂದು ಅನಾಮಿಕ ಮಹಿಳೆ ಆರೋಪಿಸಿದ್ದಾರೆ. ಆದರೆ ಆರೋಪವನ್ನು ಈಶ್ವರ್ ನಿರಾಕರಿಸಿದ್ದಾರೆ.
ಶಾ ವಿರುದ್ಧ ಕೇಸು: ಸುಪ್ರೀಂತೀರ್ಪಿನ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇರೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಬಿಹಾರದ ಸೀತಾಮಹಿì ಕೋರ್ಟಲ್ಲಿ ದೇಶದ್ರೋಹದ ಆರೋಪ ಹೊರಿಸಿ ಕೇಸು ದಾಖಲಿಸಲಾಗಿದೆ.
ನ.8ರಿಂದ ರಥಯಾತ್ರೆ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಕ್ತರಿಗೆ ಸಂಪೂರ್ಣ ಬೆಂಬಲ ನೀಡುವ ವಾಗ್ಧಾನ ಮಾಡಿದ ಬೆನ್ನಲ್ಲೇ ಕೇರಳ ಬಿಜೆಪಿ ಘಟಕ ನ.8ರಿಂದ 13ರ ವರೆಗೆ ರಥಯಾತ್ರೆ ಆರಂಭಿಸುವ ನಿರ್ಣಯ ಕೈಗೊಂಡಿದೆ. 8ರಂದು ಕಾಸರ ಗೋಡಿನಲ್ಲಿ ಆರಂಭವಾಗುವ ಯಾತ್ರೆ 13ರಂದು ಪಟ್ಟಣಂತಿಟ್ಟದಲ್ಲಿ ಮುಕ್ತಾಯವಾಗಲಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ತಿಳಿಸಿದ್ದಾರೆ. ಅ.30ರಂದು ಕೇರಳ ಡಿಜಿಪಿ ಕಚೇರಿ ಮುಂಭಾಗದಲ್ಲಿ 1 ದಿನದ ಉಪವಾಸವನ್ನು ಪಕ್ಷದ ಕಾರ್ಯಕರ್ತರು ನಡೆಸಲಿದ್ದಾರೆ ಎಂದೂ ಹೇಳಿದ್ದಾರೆ.
ನ.17ರಂದು ಶಾ ಭೇಟಿ?: ಈ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನ.17ರಂದು ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ತೆರಳಿ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಇಚ್ಛೆ ಹೊಂದಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.