ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ 15 ಜನರಲ್ಲಿ, ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಈ ಕುರಿತು ಅವರು ಈಗಾಗಲೇ ಅಕಾಡೆಮಿಯ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರಿಗೆ ವಾಟ್ಸಪ್ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಆ ಪತ್ರದ ಸಾರಾಂಶ ಹೀಗಿದೆ.
ನಮಸ್ತೆ,
ನೀವು ನನಗೆ ಅಕಾಡೆಮಿಯ ವತಿಯಿಂದ ಗೌರವಪೂರ್ವಕವಾಗಿ ನೀಡಬೇಕೆಂದಿರುವ ಜೀವಮಾನ ಪ್ರಶಸ್ತಿ ಸ್ವೀಕರಿಸುವ ಯಾವ ಇಚ್ಛೆಯೂ ನನಗಿಲ್ಲದ್ದರಿಂದ ತಪ್ಪು ತಿಳವಳಿಕೆಯಲ್ಲಿರಬಾರದೆಂದು ಈ ಚಿಕ್ಕ ಪತ್ರ!
ನನ್ನ ಸಿನಿಮಾ ಪ್ರಯಾಣದ ಗುರಿ ಜನಮನರಂಜನೆಯೇ ಹೊರತು ಪ್ರಶಸ್ತಿಗಳಲ್ಲ. ಮನರಂಜಿಸಲು ಸಂಬಳ ಪಡೆದಿರುವುದರಿಂದ ಪ್ರಶಸ್ತಿಗೆ ಅರ್ಹನಲ್ಲ. ಅದು ಗೊತ್ತಿಧ್ದೋ ಏನು ಇಷ್ಟು ವರ್ಷ ನನ್ನ ಯಾವ ಸಿನಿಮಾಕ್ಕೂ ಯಾರೂ, ಯಾವ ಪ್ರಶಸ್ತಿಯನ್ನೂ ಪ್ರಕಟಿಸಲೇ ಇಲ್ಲ. ಬಂದಿದೆ ಎಂದು ಸ್ವತಃ ತೀರ್ಪುಗಾರರೇ ಫೋನ್ ಮಾಡಿಯೂ ಸಹ! ನೀವೂ ಸಹ ಫೋನ್ ಮಾಡಿದ್ದೀರಿ.
ಪ್ರಶಸ್ತಿ ನೀಡದಿದ್ದರೆ ಅದೇ ನೀವು ನನಗೆ ನೀಡುವ ಗೌರವ. ನನ್ನ ಹೆಸರ ಅಚ್ಚು ಹಾಕಿಸಿ, ನನಗ್ಯಾವ ಆಹ್ವಾನ ಪತ್ರಿಕೆಯನ್ನೂ ಕಳುಹಿಸಬೇಕಾಗಿಲ್ಲ. ಶಾಲು-ಸನ್ಮಾನಗಳು ಅಂದರೆ ಅಲರ್ಜಿ ನನಗೆ. ಅದಕ್ಕಾಗಿ ತಪಸ್ಸು ಮಾಡುವವರ ದಂಡೇ ಇದೆ. ಅವರಿಗೆ ನೀಡಿ. ಮನರಂಜನೆಯಲ್ಲಿ ಬೇಸರಕ್ಕೆ ಆಸ್ಪದವಿಲ್ಲ. ಹಂಚಬೇಡಿ, ನುಂಗಿಕೊಳ್ಳಿ.