ಹೊಸದಿಲ್ಲಿ: ಪದ್ಮ ಪ್ರಶಸ್ತಿ, ಭಾರತ ರತ್ನಗಳನ್ನು ಹೆಸರಿನ ಜತೆಗೆ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಅದರ ದುರುಪಯೋಗ ಕಂಡು ಬಂದರೆ ಗೌರವವನ್ನು ವಾಪಸ್ ಪಡೆಯಲಾಗುತ್ತದೆ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಲೋಕ ಸಭೆಗೆ ಮಾಹಿತಿ ನೀಡಿದ ಸಚಿವ ಹಂಸರಾಜ ಅಹಿರ್ ಸಂವಿಧಾನದ 18(1)ನೇ ವಿಧಿ ಪ್ರಕಾರ ಹೆಸರಿನ ಜತೆಯಲ್ಲಿ ಭಾರತ ರತ್ನ, ಪದ್ಮ ಶ್ರೀ, ಪದ್ಮ ಭೂಷಣ, ಪದ್ಮವಿಭೂಷಣಗಳನ್ನು ಯಾವುದೇ ರೀತಿ ಬಳಕೆ ಮಾಡುವಂತಿಲ್ಲ. ಪ್ರಶಸ್ತಿಗೆ ಆಯ್ಕೆಯಾದವರಿಗೆಲ್ಲ ಮಾಹಿತಿ ನೀಡುವ ಸಂದರ್ಭದಲ್ಲಿ ಈ ನಿಯಮಗಳನ್ನು ಕಳುಹಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ಅಸ್ಸಾಮಿ ಗಾಯಕ ದಿ|ಭೂಪೇನ್ ಹಜಾರಿಕಾಗೆ ಮರಣೋತ್ತರವಾಗಿ ನೀಡಲಾಗಿರುವ “ಭಾರತ ರತ್ನ’ ಗೌರವ ಒಪ್ಪಿಕೊಳ್ಳದಿರಲು ಪುತ್ರ ತೇಜ್ ಹಜಾರಿಕಾ ನಿರ್ಧರಿಸಿದ್ದಾರೆ. ಕೇಂದ್ರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ (ತಿದ್ದುಪಡಿ) ವಿಧೇಯಕವನ್ನು ವಿರೋಧಿಸಿ ಈ ನಿರ್ಧಾರಕ್ಕೆ ಬರುವ ಚಿಂತನೆಯಲ್ಲಿರುವುದಾಗಿ ಹೇಳಿದ್ದಾರೆ.