ಮಹಾನಗರ: ಕರಾವಳಿ ಪ್ರವಾಸೋದ್ಯಮದ ಬಹುಮುಖ್ಯ ತಾಣ ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ ದೃಷ್ಟಿಯಿಂದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರ ಘೋಷಿಸಿದ “ಪ್ರಾಧಿಕಾರ’ ರಚನೆಗೆ ಇದೀಗ ಅಂತಿಮ ಸಿದ್ಧತೆ ನಡೆದಿದೆ.
ಜನವರಿ ಅಂತ್ಯದ ವೇಳೆಗೆ ಪ್ರಾಧಿಕಾರವಾಗಿ ಕಾರ್ಯನಿರ್ವಹಿ ಸುವುದಕ್ಕೆ ಬೇಕಾದ ಸಿದ್ಧತೆಗಳು ನಡೆಸಲು ತೀರ್ಮಾ ನಿಸಲಾಗಿದ್ದು, ಎ. 1ರಿಂದ ಪೂರ್ಣ ಪ್ರಮಾಣದ ಪ್ರಾಧಿಕಾರವಾಗಿ ಪಿಲಿಕುಳ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.
ಬಜೆಟ್‌ನಲ್ಲಿ ಪ್ರಾಧಿಕಾರದ ಘೋಷಣೆಯಾಗಿದ್ದರೂ ಸರಕಾರ ಹಣಕಾಸು ವ್ಯವಸ್ಥೆ ಮಾಡಿರಲಿಲ್ಲ. ಹಾಗಾಗಿ ಇದುವರೆಗೆ ಪ್ರಾಧಿಕಾರ ರಚನೆ ಆಗಿರಲಿಲ್ಲ. ಪ್ರಾಧಿಕಾರ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳಿಗಾಗಿ 5 ಕೋ.ರೂ. ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
2018ರ ಫೆಬ್ರವರಿಯಲ್ಲೇ ಪಿಲಿಕುಳವನ್ನು ಪ್ರಾಧಿಕಾರ ಎಂದು ಘೋಷಣೆ ಮಾಡಲಾಗಿತ್ತು. ಪ್ರಸ್ತುತ ಸೊಸೈಟಿ ಆಗಿ ಪಿಲಿಕುಳ ಕಾರ್ಯನಿರ್ವಹಿಸುತ್ತಿದೆ. ಪಿಲಿಕುಳವನ್ನು ಪ್ರಾಧಿಕಾರವಾಗಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಆಸಕ್ತಿ ಹೊಂದಿದ್ದಾರೆ. ಅದಕ್ಕಾಗಿ ಆಯುಕ್ತರ ನೇಮಕ, ಸಿಬಂದಿ ಸೂತ್ರ ರಚನೆ, ಬಜೆಟ್ ಇತ್ಯಾದಿಗಳನ್ನು ಸಿದ್ಧಪಡಿಸಬೇಕಾಗಿದೆ. ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ ನಡೆಯಬೇಕಿದೆ. ಅಧ್ಯಕ್ಷರಾಗಿ ಜಿಲ್ಲಾಧಿಕಾರಿಯವರೇ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕರು ಮುಂದೆ ಆಯುಕ್ತರಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಪ್ರಾಧಿಕಾರ ರಚನೆಯಾದರೆ ಸರಕಾರದ ಮಟ್ಟದಲ್ಲಿ ಪಿಲಿಕುಳಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆಯಿದೆ ಹಾಗೂ ಬಜೆಟ್ ಅನುದಾನ ಹೆಚ್ಚಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ಕೋವಿಡ್ ಕಾರಣದಿಂದ ಗೇಟ್ ಕಲೆಕ್ಷನ್ ಸಾರ್ವಕಾಲಿಕ ಕುಸಿತ ಕಂಡಿದ್ದು ಸಿಬಂದಿಗೆ ವೇತನ ಕೊಡುವ ಸವಾಲು ಎದುರಾಗಿತ್ತು. ನಿಸರ್ಗಧಾಮದಲ್ಲಿದ್ದ ಪ್ರಾಣಿಗಳ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕೊನೆಗೆ ಎಂಆರ್‌ಪಿಎಲ್‌ನ ನೆರವಿನೊಂದಿಗೆ ಪ್ರಾಣಿಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿತ್ತು.
ಪಿಲಿಕುಳ ನಿಸರ್ಗಧಾಮ ಅಭಿವೃದ್ಧಿ ಉದ್ದೇಶದಿಂದ ಪ್ರಾಧಿಕಾರ ರಚನೆಗೆ ಡಿಸಿ ಸೂಚನೆ ನೀಡಿದ್ದಾರೆ. ಎಪ್ರಿಲ್ 1ರಿಂದ ಪೂರ್ಣಮಟ್ಟದಲ್ಲಿ ಜಾರಿಗೆ ಬರುವ ನಿರೀಕ್ಷೆ ಯಿದೆ. ಈ ಸಂಬಂಧ ಪೂರಕ ಸಿದ್ಧತೆ ನಡೆಸಲಾಗುತ್ತಿದೆ.
–ಗೋಕುಲ್‌ದಾಸ್ ನಾಯಕ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು