Advertisement

ಪ್ರಾಧ್ಯಾಪಕರನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫ‌ಲ

10:59 AM Nov 01, 2017 | Team Udayavani |

ಮೈಸೂರು: ಅಪಾರ ಜ್ಞಾನ ಸಂಪತ್ತು ಹೊಂದುವ ಜತೆಗೆ ಮೈಸೂರು ವಿವಿ ತತ್ವಶಾಸ್ತ್ರ ವಿಭಾಗಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಪ್ರಾಧ್ಯಾಪಕರನ್ನು ಗುರುತಿಸುವಲ್ಲಿ ಮೇಲಧಿಕಾರಿಗಳು ವಿಫ‌ಲರಾಗಿದ್ದಾರೆ ಎಂದು ಮೈಸೂರು ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದಿಂದ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಎಚ್‌.ಎಲ್‌.ಚಂದ್ರಶೇಖರ್‌ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಧ್ಯಯನ ಮಾಡಲು ಬಾರದ ಅನೇಕ ಶಿಕ್ಷಕರಿಗೆ ಬಡ್ತಿ ನೀಡಿ ಉನ್ನತ ದರ್ಜೆಗೆ ಕಳುಹಿಸಲಾಗುತ್ತಿದೆ.

ಆದರೆ 2006ರಿಂದ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರಿಗೆ ಬಡ್ತಿ ನೀಡದಿರುವುದರಿಂದ ಹಲವು ವರ್ಷಗಳಿಂದ ದುಡಿಯುತ್ತಿರುವ ಅನೇಕ ಪ್ರಾಧ್ಯಾಪಕರು ಅಲ್ಪತೃಪ್ತರಾಗಿದ್ದಾರೆ. ಅದರಂತೆ ಕಳೆದ 35 ವರ್ಷಗಳಿಂದ ಮೈಸೂರು ವಿವಿ ತತ್ವಶಾಸ್ತ್ರ ವಿಭಾಗಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಎಚ್‌.ಎಲ್‌.ಚಂದ್ರಶೇಖರ್‌ ಅವರಂತಹ ಶಿಕ್ಷಕರನ್ನು ಗುರುತಿಸುವಲ್ಲಿ ಮೇಲಧಿಕಾರಿಗಳು ವಿಫ‌ಲರಾಗಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಸಂದರ್ಭದಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದು, ಅಧ್ಯಯನದಲ್ಲಿ ತೊಡಗಿಸಬೇಕಾದ ಪ್ರಾಧ್ಯಾಪಕರ ಸಂಖ್ಯೆಯೂ ಬೆರಳೆಣಿಕೆಯಷ್ಟಿದೆ. ಇಂತಹ ಪ್ರಾಧ್ಯಾಪಕರಲ್ಲಿ ಭಿನ್ನರಾಗಿ, ನಿರಂತರ ಅಧ್ಯಯನ ನಡೆಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ಚಂದ್ರಶೇಖರ್‌ ಅವರಿಗೆ ಪ್ರಾಧ್ಯಾಪಕರಾಗಿ ಬಡ್ತಿ ಸಿಗಬೇಕಾಗಿತ್ತು.

ಚಂದ್ರಶೇಖರ್‌ ಅವರು 10 ಗ್ರಂಥಗಳನ್ನು ಬರೆದಿದ್ದು, 100ಕ್ಕೂ ಹೆಚ್ಚು ವಿದ್ವತ್‌ಪೂರ್ಣ ಲೇಖನ ಪ್ರಕಟಿಸಿದ್ದಾರೆ. ಅತ್ಯಂತ ಸರಳ ಸಜ್ಜನಿಕೆ ಸ್ವಭಾವ ಉಳ್ಳವರಾಗಿರುವ ಇವರು ಪ್ರಾಧ್ಯಾಪಕರಾಗದೇ ನಿವೃತ್ತಿ ಹೊಂದುತ್ತಿರುವುದು ಬೇಸರ ಉಂಟುಮಾಡಿದೆ ಎಂದರು.

Advertisement

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್‌ ಮಾತನಾಡಿ, ಜ್ಞಾನಿಯಾದವನಿಗೆ ಹುದ್ದೆ ಅಗತ್ಯವಿಲ್ಲ. ಶಿಕ್ಷಕ ಎಂಬುದು ಕುಲಪತಿ ಹುದ್ದೆಗಿಂತ ಮಹತ್ವದ್ದಾಗಿದೆ. ಇಂದಿನ ಯುವಜನತೆ ತಮ್ಮೆಲ್ಲಾ ಅವಶ್ಯಕತೆಗಳನ್ನು ಇಂದೇ ಪೂರೈಸಿಕೊಳ್ಳಬೇಕೆಂಬ ತವಕದಲ್ಲಿದ್ದು, ಇವರ ನಾಗಲೋಟಕ್ಕೆ ಕಡಿವಾಣ ಹಾಕುವವರು ಶಿಕ್ಷಕರಾಗಿದ್ದಾರೆಂದರು.
 
ಇದೇ ವೇಳೆ ತತ್ವಶಾಸ್ತ್ರ ವಿಭಾಗದ ನಿವೃತ್ತ ಸಹಾಯಕ ಪ್ರಾಧ್ಯಾಪಕ ಡಾ.ಎಚ್‌.ಎಲ್‌ ಚಂದ್ರಶೇಖರ್‌ ಹಾಗೂ ಅವರ ಪತ್ನಿ ಬಿ.ಎಸ್‌.ಶೈಲಜಾರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಬೋಧಿಸತ್ವ ಮನೋರಕ್ಖಿತ ಭಂತೇಜಿ,

-ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್‌.ವಾಸುದೇವಮೂರ್ತಿ, ಮೈಸೂರು ವಿವಿ ಆಡಳಿತ ಸಲಹೆಗಾರ ಶ್ರೀನಿವಾಸ್‌ಮೂರ್ತಿ, ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಕೆ.ಎನ್‌. ಬಸವರಾಜು ಕುರುಬೂರು, ಉಪಾಧ್ಯಕ್ಷರಾದ ಡಾ.ಟಿ.ನಿರಂಜನ್‌ಕುಮಾರ್‌, ಡಾ.ಪಿ. ಅರುಳಪ್ಪ ಇದ್ದರು. 

ಶಿಕ್ಷಕರನ್ನು ತಯಾರಿಸುವಲ್ಲಿ ಮೈಸೂರು ವಿವಿ ವಿಫ‌ಲವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಎಂಬುದು ವ್ಯಾಪಾರಿಕರಣವಾಗಿರುವ ಸಂದರ್ಭದಲ್ಲಿ ಚಂದ್ರಶೇಖರ್‌ ಅವರಂತಹ ತತ್ವಜ್ಞಾನಿಗಳ ಅಗತ್ಯತೆ ಹೆಚ್ಚಾಗಿದೆ.
-ಪ್ರೊ.ಜೆ.ಸೋಮಶೇಖರ್‌, ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ

Advertisement

Udayavani is now on Telegram. Click here to join our channel and stay updated with the latest news.

Next