Advertisement

ಪ್ರೇಕ್ಷಕರು ಬುದ್ಧಿವಂತರು ಎಲ್ಲವನ್ನು ಬಿಡಿಸಿ ಹೇಳಬೇಕಿಲ್ಲ

08:58 AM Apr 22, 2019 | Team Udayavani |

ನಿರ್ದೇಶಕ ಹೇಮಂತ್‌ ರಾವ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, “ಕವಲುದಾರಿ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಪುನೀತ್‌ರಾಜಕುಮಾರ್‌ ನಿರ್ಮಾಣದ ಮೊದಲ ಚಿತ್ರ “ಕವಲುದಾರಿ’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮೂಲಕ ಇಡೀ ಚಿತ್ರತಂಡ ಖುಷಿಯಾಗಿದೆ. ಅದರಲ್ಲೂ ನಿರ್ದೇಶಕ ಹೇಮಂತ್‌ ಕೊಂಚ ಹೆಚ್ಚೇ ಖುಷಿಯಾಗಿದ್ದಾರೆ.

Advertisement

“ಸಿನಿಮಾ ನೋಡಿದವರೆಲ್ಲರೂ ಚೆನ್ನಾಗಿದೆ ಅಂತಾರೆ. 80-85 ಪರ್ಸೆಂಟ್‌ ಜನ ಇಷ್ಟಪಟ್ಟರೆ, ಇನ್ನು 10-15 ಪರ್ಸೆಂಟ್‌ ಓಕೆ ಓಕೆ ಅಂತಿದ್ದಾರೆ. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿಂಗಲ್‌ ಸ್ಕ್ರೀನ್‌ನಲ್ಲೂ ಜನ ಇಷ್ಟಪಡುತ್ತಿದ್ದಾರೆ. ಸಿನಿಮಾ ನೋಡಿದ ನಂತರ ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಅವರವರೇ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.

ಇದು ತುಂಬಾ ಖುಷಿ ಕೊಡುತ್ತೆ. ಸಿನಿಮಾವನ್ನು ತುಂಬಾ ಬಿಡಿಸಿ ಹೇಳಿದಾಗ, ನಾನು ಅಷ್ಟೊಂದು ಪೆದ್ದ ಅಲ್ಲಪ್ಪ ಅನ್ನೋ ಫೀಲಿಂಗ್‌ ಪ್ರೇಕ್ಷಕರಿಗೆ ಬರುತ್ತದೆ. ಅದನ್ನು ನಾನು ಈ ಸಿನಿಮಾದಲ್ಲಿ ಮಾಡಿಲ್ಲ. ಆಡಿಯನ್ಸ್‌ ಮೈಂಡ್‌ಗೆ ಕೆಲಸ ಕೊಟ್ಟಿದ್ದೇನೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಕನ್ನಡ ಪ್ರೇಕ್ಷಕರು ಬುದ್ಧಿವಂತರು.

ಅವರಿಗೆ ಎಲ್ಲವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂಬುದು ಹೇಮಂತ್‌ ರಾವ್‌ ಕಂಡುಕೊಂಡ ಸತ್ಯ. “ನಮ್ಮ ಜನರಿಗೆ ಏನೂ ಅರ್ಥ ಆಗಲ್ಲ ಎಂಬ ಭಾವನೆ ಗಾಂಧಿನಗರದ ಅನೇಕರಿಗಿದೆ. ಆದರೆ, ನಾನು, ನಮ್ಮ ಜನ ನಮಗಿಂತ ಬುದ್ಧಿವಂತರು ಎಂಬುದನ್ನು ಮೈಂಡ್‌ನ‌ಲ್ಲಿಟ್ಟುಕೊಂಡು ಕತೆ ಬರೆದಿರೋದು. ಸಿನಿಮಾ ಮಾಡುವಾಗಲೂ ಸ್ಪೂನ್‌ ಸ್ಪೀಡಿಂಗ್‌ ಮಾಡಲಿಲ್ಲ.

ಜನರಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಅದರಂತೆ ಇವತ್ತು ಜನಾನೇ ಸಿನಿಮಾವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಹೇಮಂತ್‌. “ಕವಲುದಾರಿ’ ಚಿತ್ರದ ಬಗ್ಗೆ ಕೇಳಿಬಂದ ಮತ್ತೂಂದು ಕಾಮೆಂಟ್‌ ಎಂದರೆ ಸಿನಿಮಾ ಸ್ವಲ್ಪ ನಿಧಾನವಿದೆ. ನಿರೂಪಣೆ ಇನ್ನಷ್ಟೇ ವೇಗವಿರಬೇಕಿತ್ತೆಂಬುದು. ಈ ಬಗ್ಗೆಯೂ ತಂಡದೊಂದಿಗೆ ಹೇಮಂತ್‌ ಚರ್ಚೆ ಮಾಡಿದ್ದರಂತೆ.

Advertisement

“ಭಾವನೆಗಳನ್ನು ತುಂಬಾ ಬೇಗ ಬೇಗ ಕಟ್ಟಿಕೊಟ್ಟರೆ ಅದು ಜನರಿಗೆ ರಿಜಿಸ್ಟರ್‌ ಆಗಲ್ಲ. ನನ್ನ “ಗೋಧಿ ಬಣ್ಣ’ದಲ್ಲೂ ಇದೇ ರೀತಿಯ ಮಾತು ಕೇಳಿಬಂದಿತ್ತು. ಸಿನಿಮಾ ಹತ್ತು ನಿಮಿಷ ಜಾಸ್ತಿ ಇದೆ ಅನ್ನೋದನ್ನು ಕೇಳ್ಳೋದು ಓಕೆ. ಅದರ ಬದಲು ಸಿನಿಮಾ ಅವಧಿ ಕಡಿಮೆ ಇದೆ, ಸಿನಿಮಾ ಅರ್ಥ ಆಗಿಲ್ಲ.

ಬೇಗನೇ ಮುಗಿಸಿಬಿಟ್ಟರೂ ಅನ್ನೋದಕ್ಕಿಂತ, ಜನ ಹತ್ತು ನಿಮಿಷ ಹೆಚ್ಚಿದೆ ಎಂದು ಹೇಳುವುದನ್ನು ಕೇಳುವುದು ವಾಸಿ. ಕಥೆಯನ್ನು ಅರ್ಧಕ್ಕೆ ಮುಗಿಸಿದರೆ ಅರ್ಧಂಬರ್ಧ ಊಟ ಮಾಡಿದ ಫೀಲ್‌ ಬರುತ್ತೆ. ಇದು ಕಾದಂಬರಿ ಶೈಲಿಯ ಕಥೆ. ತುಂಬಾ ಫಾಸ್ಟ್‌ ಸಿನಿಮಾ ನೋಡಿ ಈ ತರಹದ ಫೀಲ್‌ ಬರೋದು ಸಹಜ’ ಎನ್ನುವುದು ಹೇಮಂತ್‌ ಮಾತು.

ನಟ ಪುನೀತ್‌ರಾಜಕುಮಾರ್‌ ಕೂಡಾ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರಂತೆ. ಈಗಾಗಲೇ ವಿದೇಶಗಳಲ್ಲೂ ತೆರೆಕಂಡಿದ್ದು, ಅಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ರಿಷಿ, ಅನಂತ್‌ನಾಗ್‌, ರೋಶನಿ, ಸಂಪತ್‌, ಅಚ್ಯುತ್‌ ಸೇರಿದಂತೆ ಅನೇಕರು ಪ್ರಮುಖ ಪಾತ್ರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next