ಮೈಸೂರು: ಸಂವಿಧಾನವನ್ನು ದುರ್ಬಲಗೊಳಿಸಲು ಇಲಿಗಳು ಬಿಲ ತೋಡುತ್ತಿರುವ ಸಂದರ್ಭದಲ್ಲಿ ಸಂವಿಧಾನವನ್ನು ಪಾಲನೆ-ಪೋಷಣೆ ಮಾಡುವ ಸ್ತ್ರೀಶಕ್ತಿ ಸಂವಿಧಾನ ರಕ್ಷಿಸಲು ರಾಷ್ಟ್ರದಾದ್ಯಂತ ಅಭಿಯಾನ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ಶಾಂತಿಯೆಡೆಗೆ ನಮ್ಮ ನಡಿಗೆ ಶೀರ್ಷಿಕೆಯಡಿ ಸಂವಿಧಾನದ ಸುರಕ್ಷತೆ, ಶಾಂತಿ-ಸೌಹಾರ್ದತೆಗಾಗಿ ಭಾರತ ಯಾತ್ರೆ ಕೈಗೊಂಡಿರುವ ಐದು ಮಹಿಳಾ ತಂಡಗಳ ಪೈಕಿ ಕೇರಳದಿಂದ ಮೈಸೂರಿಗೆ ಆಗಮಿಸಿದ ತಂಡವನ್ನು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸ್ವಾಗತಿಸಿ ಅವರು ಮಾತನಾಡಿದರು.
ಈ ಮಹಿಳಾ ತಂಡದಲ್ಲಿ ಗುಜರಾತ್, ಕಾಶ್ಮೀರ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಛತ್ತೀಸ್‌ಗಡ ಮುಂತಾದ ರಾಜ್ಯಗಳ ಮಹಿಳಾ ಪ್ರತಿನಿಧಿಗಳಿದ್ದು, ಇವತ್ತು ಹಿಂದಿಯಲ್ಲಿ ಘೋಷಣೆ ಕೇಳಿದ್ದೇವೆ. ಅದೇ ರೀತಿ ಬೇರೆಬೇರೆ ರಾಜ್ಯಗಳಲ್ಲಿ ಅಲ್ಲಿನ ಜನಭಾಷೆಯಲ್ಲಿ ಘೋಷಣೆಗಳನ್ನು ಕೇಳುವಂತಾಗಬೇಕು. ಶಾಂತಿ ಮತ್ತು ಸಂವಿಧಾನದ ವಿಚಾರವನ್ನಿಟ್ಟುಕೊಂಡು ಮೈಸೂರಿಗೆ ಬಂದಿರುವ ಸ್ತ್ರೀಶಕ್ತಿಗೆ ಶರಣಾಗಬೇಕು. ಶರಣು ಅನ್ನಬೇಕು ಎಂದರು.
ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಾನವ ಸರಪಳಿ ರಚಿಸಿದ ಮಹಿಳಾ ತಂಡದ ಸದಸ್ಯರು, ಸ್ವತಂತ್ರ ನೀಡುವಂತೆ ಮತ್ತು ಸಮಾನತೆ ನೀಡುವಂತೆ ಘೋಷಣೆಗಳನ್ನು ಕೂಗಿದರು. ಸಂವಿಧಾನ ಸುಟ್ಟ ದ್ರೋಹಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ನಂತರ ನಡಿಗೆಯ ಮೂಲಕ ಪುರಭವನ ಆವರಣಕ್ಕೆ ತೆರಳಿ ಕ್ಯಾನ್‌ವಾಸ್ ಮೇಲೆ ಸಹಿ ಹಾಕಿದರು.
ಮಹಿಳಾ ಕಲಾವಿದರು, ಮಹಿಳಾ ಹೋರಾಟಗಾರರು, ಮಹಿಳಾ ಪರ ಚಿಂತಕರು, ವಿದ್ಯಾರ್ಥಿಗಳು, ಅಧ್ಯಾಪಕರು ಸಹಿ ಹಾಕಿದರು. ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪೊ›.ಪ್ರೀತಿ ಶ್ರೀಮಂಧರ್ ಕುಮಾರ್, ಧ್ವನಿ ಮಹಿಳಾ ತಂಡದ ನಳಿನಿ, ಒಡನಾಡಿಯ ಕವಿತಾ, ಆರ್‌ಎಲ್‌ಎಚ್‌ಪಿಯ ಸರಸ್ವತಿ, ಶಕ್ತಿಧಾಮದ ಅನಂತು, ಹೇಮಲತಾ, ಅಭಿರುಚಿ ಗಣೇಶ್,ನೀಲಯ್ಯ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.