ಸುರಪುರ: ಅತ್ಯಾಚಾರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡು ಈಚೆಗೆ ಅಸುನೀಗಿದ ತಿಂಥಣಿ ಗ್ರಾಮದ ಬಾಲಕಿ ಮನೆಗೆ ವಿವಿಧ ಸಾಮಾಜಿಕ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಘಟನೆ ಕುರಿತು ಮಾಹಿತಿ ಪಡೆದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಂಚಾಲಕಿ ಕೆ. ನೀಲಾ ಪತ್ರಿಕೆಯೊಂದಿಗೆ ಮಾತನಾಡಿ, ತಿಂಥಣಿ ಗ್ರಾಮದ ಬಾಲಕಿಯ ಘಟನೆ ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ನೈಜ ಘಟನೆ ಬಗ್ಗೆ ಬೆಳಕು ಚೆಲ್ಲದೆ ತಮಗೆ ಅನುಕೂಲ ಆಗುವ ರೀತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಹತ್ತಿಕ್ಕುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಎಂಎಲ್ಸಿ ಸಲ್ಲಿಕೆ ನಂತರವೇ ವೈದ್ಯರು ಚಿಕಿತ್ಸೆ ನೀಡಬೇಕಿತ್ತು. ಆದರೆ ಘಟನೆ ನಡೆದು ಮೂರು ದಿನಗಳ ನಂತರ ಎಂಎಲ್ಸಿ ನೀಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶೇ. 95ರಷ್ಟು ಸುಟ್ಟ ಗಾಯದಿಂದ ನರಳುತ್ತಿದ್ದ ಬಾಲಕಿ ಹೇಳಿಕೆ ನೀಡಲು ಸಾಧ್ಯವಿರಲಿಲ್ಲ. ಇಂತಹ ಸಂದರ್ಭದಲ್ಲಿ ತಂದೆ ತಾಯಿ, ಹಾಗೂ ಪೋಷಕರನ್ನು ಹೊರಗಿಟ್ಟು ಹೇಳಿಕೆ ಪಡೆದಿದ್ದೇಕೆ ತಿಳಿಸಬೇಕು ಎಂದು ಆಗ್ರಹಿಸಿದರು.
ಅತ್ಯಾಚಾರ ಸಂದರ್ಭದಲ್ಲಿ ಬಾಲಕಿ ದೇಹದ ಮೇಲೆ ಆಗಿರುವ ಗುರುತುಗಳನ್ನು ಪೊಲೀಸರು ಎಲ್ಲಿಯೂ ದಾಖಲಿಸಿಲ್ಲ. ಚಿಕಿತ್ಸೆ ನೀಡುವ ಮುನ್ನ ವೈದ್ಯರು ಡಿಎನ್‌ಎ ಪರೀಕ್ಷೆ ಮಾಡಿಲ್ಲ. ಹೇಳಿಕೆಯಲ್ಲಿ ಬಾಲಕಿ ಸಹಿ ಕೂಡ ಇಲ್ಲ. ಹೆಬ್ಬೆಟ್ಟಿನ ಗುರುತು ಇದೆ. ಹೀಗಾಗಿ ಬಾಲಕಿ ಹೇಳಿಕೆ ಗೊಂದಲದಿಂದ ಕೂಡಿದೆ. ಇದೆಲ್ಲವನ್ನು ಅವಲೋಕಿಸಿದಾಗ ಪ್ರಕರಣ ಹತ್ತಿಕ್ಕಲು ಪೊಲೀಸರು ಜಾಣ ಕುರುಡತನ ಪ್ರದರ್ಶನ ಮಾಡಿದ್ದಾರೆ. ಒಟ್ಟಾರೆಯಾಗಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿದರು.
ತಂದೆ ತಾಯಿಯಿಂದ ಪುನಃ ದೂರು ಪಡೆದು ಹೊಸದಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಇನ್ನು ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ನಡೆದು ಎರಡು ತಿಂಗಳಾಗಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರುವುದು ನಾಚಿಕೆಗೇಡು ಸಂಗತಿ. ಇದು ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮತ್ತು ರಾಜಕೀಯ ಒತ್ತಡಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು ಮಕ್ಕಳು ಬಾಲಕಿಯರಿಗೆ ರಕ್ಷಣೆ ಇಲ್ಲದಂತ್ತಾಗಿದೆ ಎಂದು ದೂರಿದರು. ದಲಿತ ಸಂಘಟನೆ ಕ್ರಾಂತಿಕಾರಿ ಬಣದ ರಾಜ್ಯ ಸಂಚಾಲಕ ಅರ್ಜುನ ಭದ್ರೆ,
ಮಲ್ಲೇಶಿ ಸಜ್ಜನ್, ಹಸಿರು ಸೇನೆ ರಾಜ್ಯ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟ, ನಾಗರತ್ನಾ ಪಾಟೀಲ, ಮಹಾದೇವಿ ಭೇವಿನಾಳ ಮಠ, ದೇವಿಂದ್ರಪ್ಪಗೌಡ ಮಾಲಗತ್ತಿ, ದಲಿತ ಸಂಘಟನೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಮುಖಂಡರಾದ ರಾಮಣ್ಣ, ಮಾನಪ್ಪ, ತಿಪ್ಪಣಗಿ ಶೆಳ್ಳಗಿ, ಮಹೇಶ ಯಾದಗಿರಿ, ಜಟ್ಟೆಪ್ಪ ಸೇರಿದಂತೆ ಪ್ರಗತಿಪರ ಚಿಂತಕರು ಇದ್ದರು.