ಕಲಬುರಗಿ: ಜಿಲ್ಲೆಯ ಜೀವನಾಡಿ ಭೀಮಾ, ಕಾಗಿಣಾ ನದಿ ಸೇರಿದಂತೆ ಇತರೆಡೆ ಹಗಲಿರಳು ಅಕ್ರಮ ಮರಳುಗಾರಿಕೆ ನಡೆದು ನದಿ ಒಡಲೇ ಬರಿದಾಗುತ್ತಿದ್ದು, ನಿತ್ಯ ಸಾವಿರಾರು ಟಿಪ್ಪರ್-ಲಾರಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಶುಕ್ರವಾರ ಮಧ್ಯರಾತ್ರಿ 2ರ ಸುಮಾರಿಗೆ ಜಿಲ್ಲಾಧಿಕಾರಿಗಳು ಹಾಗೂ ಸೇಡಂ ಸಹಾಯಕ ಆಯುಕ್ತರು ಯಾರಿಗೂ ಮಾಹಿತಿ ನೀಡದೇ ದಾಳಿ ನಡೆಸಿದ್ದಾರೆ.
ಚಿತ್ತಾಪುರ ತಾಲೂಕು ದಂಡೋಳಿ ಬಳಿಯ ಕಾಗಿಣಾ ನದಿಯಲ್ಲಿ ಬಹಳ ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗಳ್ಳಿ ಮಿಂಚಿನ ದಾಳಿ ನಡೆಸಿ ಅಕ್ರಮ ಮರಳುದಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಫೈರಿಂಗ್ ಮಾಡ್ರೀ ಎಂದಾಗ ಪರಾರಿ: ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ಕೆಲವು ಸಿಬ್ಬಂದಿ ಮಧ್ಯರಾತ್ರಿ 2ರ ಸುಮಾರಿಗೆ ಬೃಹದಾಕಾರದ ಎರಡು ಹಿಟಾಚಿಗಳ ಮೂಲಕ ಮರಳನ್ನು ಎತ್ತಿ ಟಿಪ್ಪರ್ ಹಾಗೂ ಲಾರಿಗಳಲ್ಲಿ ಹಾಕುತ್ತಿರುವಾಗ ದಾಳಿ ನಡೆಸಿದರು.
ಆದರೆ ಮರಳು ಲೂಟಿಕೋರರು ಯಾರು ಬಂದು ಏನು ಮಾಡ್ತಾರೆ ಎನ್ನುವಂತೆ ಮರಳು ಸಾಗಾಣಿಕೆಯಲ್ಲಿಯೇ ಮಗ್ನರಾಗಿದ್ದರು. ಕೆಲ ಸಿಬ್ಬಂದಿಗಳೊಂದಿಗೆ ಹೋಗಿದ್ದ ಜಿಲ್ಲಾಧಿಕಾರಿಗಳು ಫೈರಿಂಗ್ ಮಾಡ್ರಿ ಎನ್ನುತ್ತಿದ್ದಂತೆ ಮರಳು ಲೂಟಿಕೋರರು ಕತ್ತಲೆಯಲ್ಲಿ ಓಡಿ ಹೋಗಲು ಮುಂದಾದರು.
ಅಷ್ಟರೊಳಗೆ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅಲ್ಲೆ ನಿಂತಿದ್ದ ಐದು ಲಾರಿ, ಐದು ಟಿಪ್ಪರ್, ಎರಡು ಹಿಟಾಚಿ, ಒಂದು ಬುಲೇರೋ, ಒಂದು ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ಮುಟ್ಟಿಸಲಾಯಿತು. ಕೆಲವು ಗಂಟೆಗಳ ಬಳಿಕ ಪೊಲೀಸರು ಬಂದರು.
ಪ್ರಕರಣ ದಾಖಲು: ಟಿಪ್ಪರ್ ಚಾಲಕರಾದ ರವಿಚಂದ್ರ ಪ್ಯಾಟಿ, ಮಹಾಂತೇಶ ಮಾದವರಾವ ಹತ್ತರಕಿ, ಹಿಟಾಚಿ ಆಪರೇಟ್‌ರುಗಳಾದ ಕರೀಂ ನಜೀರ್ ಪಠಾಣ ಹಾಗೂ ಅಫಜಲಪುರ ತಾಲೂಕಿನ ಅತನೂರಿನ ಸದ್ದಾಂ ಮಹಿಬೂಬಸಾಬ್‌ಅತ್ತಾರ ಎನ್ನುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇವರಲ್ಲದೇ ವಶಪಡಿಸಿಕೊಳ್ಳಲಾದ ಲಾರಿ, ಟಿಪ್ಪರ್ ಹಾಗೂ ಕಾರುಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಕುರಿತು ಚಿತ್ತಾಪುರ ತಾಲೂಕು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಹಣಮಂತರಾವ ಭೈರಾಮಡಗಿ