ಯಲಹಂಕ: ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜಗಳದಲ್ಲಿ ಪೊಲೀಸ್ ಪೇದೆಯೊಬ್ಬರು ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೇದೆ ರಮೇಶ್ ಗಾಯಗೊಂಡವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ಕಾರ್ಯಕರ್ತರೆನ್ನಲಾದ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರವಿ, ರಮೇಶ್, ವಾಸು, ಮುನಿಯಪ್ಪಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ.
ಶಾಸಕ ಎಸ್.ಅರ್. ವಿಶ್ವನಾಥ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರುವ ಪ್ಲಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಶನಿವಾರ ರಾಜಾನುಕುಂಟೆ ಠಾಣೆ ವ್ಯಾಪ್ತಿಯ ಮುದುಕದಹಳ್ಳಿಯ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರ ಮನೆಯ ಸಮೀಪ ಕಟ್ಟಲು ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಈ ವಿಚಾರವಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ವಿಷಯ ತಿಳಿದ ರಾಜಾನುಕುಂಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸುಮ್ಮನಿರುವಂತೆ ಹೇಳುತ್ತಿದ್ದರು. ಈ ವೇಳೆ ಗಲಾಟೆಯ ದೃಶ್ಯಗಳನ್ನು ಮಫ್ತಿಯಲ್ಲಿ ಪೇದೆ ರಮೇಶ್ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಆಗ, ಗುಂಪಿನಲ್ಲಿದ್ದ ಕೆಲವರು ರಮೇಶ್ ಮೇಲೆ ಕಬ್ಬಿಣದ ರಾಡ್ ಹಲ್ಲೆ ಮಾಡಿದ್ದಾರೆ. ಹೀಗಾಗಿ ರಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ರಾಜಾನುಕುಂಟೆ ಆರ್.ಕೆ.ಆಸ್ವತ್ರೆಗೆ ದಾಖಲಿಸಲಾಯಿತು.
ಆಸ್ವತ್ರೆಗೆ ಹೆಚ್ಚುವರಿ ಎಸ್.ಪಿ ಮಲ್ಲಿಕಾರ್ಜುನ್, ದೊಡ್ಡಬಳ್ಳಾಪುರ ವೃತ್ತ ನಿರೀಕ್ಷಕ ಸಿದ್ದರಾಜು ಭೇಟಿ ನೀಡಿ ರಮೇಶ್‌ರವರ ಆರೋಗ್ಯ ವಿಚಾರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯಲಹಂಕ ಶಾಸಕ ವಿಶ್ವನಾಥ್, “ಪೇದೆ ಮೇಲೆ ಹಲ್ಲೆ ನಡೆಸಿದವರು ಬಿಜೆಪಿ ಕಾರ್ಯಕರ್ತರಲ್ಲ. ಆದರೂ ಅಮಾಯಕ ಕಾರ್ಯಕರ್ತರ ಮೇಲೆ ದೂರು ದಾಖಲಿಸಲಾಗಿದೆ. ಗ್ರಾಮಕ್ಕೆ ಹೊರಗಿನಿಂದ 50ಕ್ಕೂ ಹೆಚ್ಚು ಮಂದಿ ಬಂದಿದ್ದರು. ಅವರು ಯಾರು, ಎಲ್ಲಿಂದ ಬಂದಿದ್ದರು ಎಂದು ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂದಿಸಬೇಕು,’ ಎಂದು ಆಗ್ರಹಿಸಿದ್ದಾರೆ.
ಕೆಲಸ ಮುಗಿಸಿ ಹೋಗಿದ್ದ ಪೇದೆಯನ್ನು ಕರೆಸಿಕೊಂಡಿದ್ದರು: ಬಿಜಾಪರು ಜಿಲ್ಲೆಯ ರಮೇಶ್ ಹತ್ತು ತಿಂಗಳ ಹಿಂದೆ ರಾಜಾನುಕುಂಟೆ ಠಾಣೆಗೆ ನಿಯೋಜನೆಗೊಂಡಿದ್ದರು. ಶನಿವಾರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದರು. ರಾತ್ರಿ ಹೋಟಲ್‌ನಲ್ಲಿ ಊಟ ಮುಗಿಸಿ ಕ್ವಾಟ್ರಸ್ ಕಡೆಗೆ ಹೋಗುತ್ತಿದ್ದ ರಮೇಶ್ ಅವರನ್ನು ಕರ್ತವ್ಯದಲ್ಲಿದ್ದ ಪೊಲೀಸರು ಗಲಾಟೆ ಸ್ಥಳಕ್ಕೆ ಕರೆದೊಯ್ದಿದ್ದರು. ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವಂತೆ ಅವರಿಗೆ ತಿಳಿಸಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ.