ಬೆಂಗಳೂರು: ಅಮಾವಾಸ್ಯೆ ದಿನ ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿ, ನಂತರ ಅದೇ ದಿನ ಮನೆಗೆ ಹೋಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನಕಲಿ ಜ್ಯೋತಿಷಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಪೇಟೆಯ ಸುರೇಶ್ ಪಾಟೀಲ್ ಎಂಬಾತನ ವಿರುದ್ಧ ಇಂದಿರಾ ಎಂಬುವರು ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಇಂದಿರಾ ಪತಿ ಮತ್ತು ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ವಾಸವಾಗಿದ್ದು, ಜೀವನಕ್ಕಾಗಿ ಮನೆಕೆಲಸ ಮಾಡುತ್ತಿದ್ದರು. ಮಗಳಿಗೆ ಕುಣಿಗಲ್ ಮೂಲದ ಯುವಕನ ಜತೆ ಮದುವೆ ಮಾಡಿಸಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳ ಮಾಡಿಕೊಂಡು ಮಗಳು ತವರು ಮನೆಗೆ ಬರುತ್ತಿದ್ದರು. ಈ ವೇಳೆ ಸಂಬಂಧಿಕರೊಬ್ಬರ ಸಲಹೆ ಮೇರೆಗೆ ಆರೋಪಿಯನ್ನು ಇಂದಿರಾ ಸಂಪರ್ಕಿಸಿದ್ದಾರೆ.
ಮನೆ ದೋಚಿ ನಿಂಬೆಹಣ್ಣು ಇಡುತ್ತಿದ್ದ ಜ್ಯೋತಿಷಿ: ಕಳೆದ ಕೆಲ ತಿಂಗಳ ಹಿಂದೆ ಮನೆಗೆ ಬಂದ ಆರೋಪಿ ನಿಮ್ಮ ಮಗಳ ಜೀವನ ಸರಿಪಡಿಸುತ್ತೇನೆ. ಅಮಾವಾಸ್ಯೆ ದಿನದಂದು ಮನೆಯಲ್ಲಿ ಯಾರೂ ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕೆಂದು ಹೇಳಿದ್ದಾನೆ. ಹೀಗಾಗಿ ಇಂದಿರಾ ಕುಟುಂಬ ದೇವಸ್ಥಾನಕ್ಕೆ ತೆರಳಿತ್ತು. ಈ ವೇಳೆಗೆ ಆರೋಪಿ ಮನೆಗೆ ಬಂದು ಬೀರುವಿನಲ್ಲಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ, ಬೀರುವಿನಲ್ಲಿ ನಿಂಬೆ ಹಣ್ಣು ಇಟ್ಟು ಪರಾರಿಯಾಗಿದ್ದ. ಕೆಲ ದಿನಗಳ ಬಳಿಕ ಕುಟುಂಬಸ್ಥರನ್ನು ಭೇಟಿಯಾಗಿ ಮನೆಗೆ ಬಂದು ಬೀರು ತೆರೆಸಿ ತಾನೇ ಇಟ್ಟಿದ್ದ ನಿಂಬೆಹಣ್ಣು ತೋರಿಸಿದ್ದಾನೆ. ನಿಮ್ಮ ಬೀಗರು ಮಾಟ ಮಾಡಿಸಿ ಚಿನ್ನದೊಡವೆ ದೋಚಿದ್ದಾರೆ. 65 ದಿನಗಳ ಒಳಗೆ ಎಲ್ಲ ಒಡವೆಗಳನ್ನು ವಾಪಸ್ ತರಿಸುತ್ತೇನೆ ಎಂದು ಒಂದಿಷ್ಟು ಹಣ ಪಡೆದು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಇಂದಿರಾ ದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.