ಕುಂದಾಪುರ: ಕುಂದಾಪುರ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದೇಶ ಭಂಡಾರಿಯವರು ನೂತನ ನ್ಯಾಯಾಧೀಶರಾಗಿ ಆಯ್ಕೆಯಾದ ಬಗ್ಗೆ ವಕೀಲರ ಸಂಘದ ವತಿಯಿಂದ ಅವರನ್ನು ಸಮ್ಮಾನಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಮಾಜಿ ಅಧ್ಯಕ್ಷರುಗಳಾದ ಎ.ಬಿ.ಶೆಟ್ಟಿ, ಗಡಾಹದ್ ರಾಮಕೃಷ್ಣ ರಾವ್, ಜಿ. ಸಂತೋಷ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಟಿ.ಬಿ. ಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ ಸಾಲಿನ್ಸ್‌ರವರು ಸಂದೇಶ ಭಂಡಾರಿಯವರನ್ನು ಸಮ್ಮಾನಿಸಿದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಾಯಕ ಸರಕಾರಿ ಅಭಿಯೋಜಕರಾಗಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಂದೇಶ ಭಂಡಾರಿಯವರು ನ್ಯಾಯಾಧೀಶರಾಗಿ ಕೂಡ ಉತ್ತಮ ಕರ್ತವ್ಯ ನಿರ್ವಹಿಸಿ ನ್ಯಾಯಾಂಗ ಇಲಾಖೆಗೆ ಉತ್ತಮ ಹೆಸರು ತರಲಿ ಎಂದು ಹೇಳಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಂದೇಶ ಭಂಡಾರಿ ಅವರು ಕುಂದಾಪುರ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕನಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭ ಇಲ್ಲಿನ ನುರಿತ ನ್ಯಾಯವಾದಿಗಳೊಂದಿಗೆ ಕೆಲಸ ಮಾಡಿರು ವುದರಿಂದ ಸಾಕಷ್ಟು ಜ್ಞಾನ ಸಂಪಾದನೆಗೂ ಕೂಡ ಅವಕಾಶವಾಗಿರುತ್ತದೆ ಎಂದರು.
ನ್ಯಾಯವಾದಿಗಳಾದ ಸದಾನಂದ ಶೆಟ್ಟಿ, ರವಿಕಿರಣ್ ಮುಡೇìಶ್ವರ, ಶಶಿಧರ ಹೆಗ್ಡೆ, ಶ್ಯಾನ್ಕಟ್ ಉಮೇಶ್ ಶೆಟ್ಟಿ, ಸಂದೇಶ ಶೆಟ್ಟಿ ಮತ್ತು ರವಿ ಶೆಟ್ಟಿ ಮಚ್ಚಟ್ಟು, ಸಂದೇಶ ಭಂಡಾರಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿ, ನ್ಯಾಯವಾದಿ ಶ್ರೀನಾಥ್ ರಾವ್ ಕಾರ್ಯಕ್ರಮ ನಿರ್ವಹಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ರವೀಶ್ಚಂದ್ರ ಶೆಟ್ಟಿ ವಂದಿಸಿದರು.