Advertisement

ರೈತರ ಹತ್ಯೆ ರಾಜಕೀಯ ಮಾಡುವುದು ಬೇಡ

12:04 AM Oct 05, 2021 | Team Udayavani |

ಉತ್ತರ ಪ್ರದೇಶದ ಲಖೀಂಪುರದಲ್ಲಿ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆ ದುರದೃಷ್ಟಕರ. ಅದರಲ್ಲೂ ಕೇಂದ್ರ ಸಚಿವರ ಪುತ್ರನೊಬ್ಬ ಪ್ರತಿಭಟನ ರೈತರ ಮೇಲೆ ವಾಹನ ಓಡಿಸಿದ್ದು ಕೂಡ ಅಕ್ಷ್ಯಮ್ಯ ಅಪರಾಧವೇ. ರವಿವಾರ ನಡೆದ ಈ ಘಟನೆಯಲ್ಲಿ ಇದುವರೆಗೆ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಘಟನೆ ವೇಳೆ ಗಾಯಗೊಂಡಿದ್ದ ಪತ್ರಕರ್ತರೊಬ್ಬರು ಸೋಮವಾರ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 9ಕ್ಕೆ ಏರಿತು.

Advertisement

ರವಿವಾರದ ಘಟನೆ ನಾಗರಿಕ ಸಮಾಜ ಒಪ್ಪುವಂಥದ್ದು ಅಲ್ಲವೇ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಂಬುದು ಎಲ್ಲರಿಗೂ ನೀಡಿರುವ ಹಕ್ಕು. ಇದನ್ನು ಇನ್ಯಾವುದೋ ಮಾದರಿಯಲ್ಲಿ ಹತ್ತಿಕ್ಕುವು ದಾಗಲಿ, ಹಿಂಸೆಗೆ ತಿರುಗಿಸುವುದಾಗಲಿ ಎರಡೂ ತಪ್ಪು. ಪ್ರತಿಭಟನ ನಿರತರ ಮೇಲೆ ವಾಹನ ಹಾಯಿಸುವುದು ಎಂದರೆ ನಾಗರಿಕ ಸಮಾಜದಲ್ಲಿ ಇಂಥ ಘಟನೆಗಳನ್ನು ಒಪ್ಪಲು ಹೇಗೆ ಸಾಧ್ಯ? ಇಂಥ ಘಟನೆಗಳು ಮುಂದೆ ನಡೆಯದಂತೆ ನೋಡಿ ಕೊಳ್ಳಬೇಕಾದುದು ಆಯಾ ಸರಕಾರಗಳ ಕರ್ತವ್ಯ. ಹಾಗೆಯೇ ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಯೊಳಗೆ ತರಬೇಕಾದದ್ದೂ ಅಷ್ಟೇ ಮುಖ್ಯ ಕೂಡ.

ಇದಷ್ಟೇ ಅಲ್ಲ, ಘಟನೆ ಅನಂತರ ಪ್ರತಿಭಟನನಿರತರು ಒಬ್ಬ ಚಾಲಕ ಮತ್ತು ಮೂವರು ಬಿಜೆಪಿ ಕಾರ್ಯಕರ್ತರನ್ನೂ ಹತ್ಯೆ ಮಾಡಿದ್ದಾರೆ. ಈ ಬಗ್ಗೆಯೂ ವೀಡಿಯೋಗಳು ಹರಿದಾಡುತ್ತಿವೆ. ಈ ಘಟನೆಯನ್ನೂ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ರೈತರ ಮೇಲೆ ವಾಹನ ಹರಿಸಿ ಕೊಂದದ್ದು ಹೇಗೆ ತಪ್ಪೋ ಹಾಗೆಯೇ ಇತರ ನಾಲ್ವರನ್ನು ಅಮಾನುಷವಾಗಿ ಹೊಡೆದು ಕೊಂದದ್ದೂ ಅಷ್ಟೇ ತಪ್ಪು. ಇದರಲ್ಲಿ ರೈತರ ಮೇಲಿನ ದಾಳಿಗೆ ವಿರೋಧ ವ್ಯಕ್ತಪಡಿಸಿ, ಪ್ರತಿಭಟನ ನಿರತರು ನಾಲ್ವರನ್ನು ಕೊಂದ ವಿಚಾರದ ಬಗ್ಗೆ ಮಾತನಾಡದೇ ಇರುವುದು ಸರಿಯಾದ ಕ್ರಮ ಅಲ್ಲವೇ ಅಲ್ಲ.

ಇದನ್ನೂ ಓದಿ: ಪ್ರಿಯಾಂಕಾ ಕಸಗುಡಿಸುವ ವೀಡಿಯೋ ವೈರಲ್‌!

ಈ ಘಟನೆ ಅನಂತರ ರಾಜಕೀಯವಾಗಿ ಭಾರೀ ವಾದ-ಪ್ರತಿವಾದಗಳು ನಡೆಯುತ್ತಿವೆ. ಎಲ್ಲ ಪಕ್ಷಗಳು ರಾಜಕೀಯವಾಗಿ ಈ ಘಟನೆಯಿಂದ ನಮಗೇನು ಪ್ರಯೋಜನವಾಗುತ್ತದೆ ಎಂದು ನೋಡಿದಂತೆ ಭಾಸವಾಗುತ್ತಿದೆ. ಈ ರೀತಿಯ ಘಟನೆಗಳು ನಡೆದಾಗ ರಾಜಕೀಯ ಬದಿಗಿಟ್ಟು ನೋಡಬೇಕಾದ ಅಗತ್ಯತೆ ಹೆಚ್ಚಾಗಿಯೇ ಇದೆ. ಇಲ್ಲಿ ನಿಜವಾಗಿಯೂ ಆಗಬೇಕಾಗಿರುವುದು ತಪ್ಪಿತಸ್ಥರಿಗೆ ಶಿಕ್ಷೆ. ಅದು ಯಾರೇ ಆಗಿರಲಿ, ಪ್ರತಿಭಟನಕಾರರ ಮೇಲೆ ವಾಹನ ಹರಿಸಿದವರೇ ಆಗಲಿ ಅಥವಾ ವಾಹನದಲ್ಲಿದ್ದವರನ್ನು ಅಮಾನುಷವಾಗಿ ಹೊಡೆದು ಕೊಂದವರೇ ಆಗಲಿ, ಇವರೆಲ್ಲರ ವಿರುದ್ಧವೂ ಕಠಿನ ಕ್ರಮವಾಗಲೇ ಬೇಕು. ಆಗ ಮೃತಪಟ್ಟವರಿಗೆ ನಿಜವಾಗಿಯೂ ನ್ಯಾಯ ಕೊಡಿಸಿದಂತೆ ಆಗುತ್ತದೆ. ಇಲ್ಲವಾದರೆ ಯಾರದೋ ಜಗಳದಲ್ಲಿ ಮೃತಪಟ್ಟವರಿಗೆ ಅನ್ಯಾಯವಾದಂತೆ ಆಗುತ್ತದೆ.

Advertisement

ಉತ್ತರ ಪ್ರದೇಶ ಸರಕಾರವೂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಕಡೆಯಿಂದ ತನಿಖೆ ನಡೆಸುವುದಾಗಿ ಘೋಷಿಸಿದೆ. ಈ ತನಿಖೆಯೂ ನಿಷ್ಪಕ್ಷಪಾತವಾಗಿ ನಡೆಯಬೇಕು. ಆದಷ್ಟು ಬೇಗ ಈ ತನಿಖೆಯ ವರದಿಯೂ ಹೊರಬೀಳಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಸರಕಾರವೂ ಅಗತ್ಯ ನೆರವು ನೀಡಿ ತನಿಖೆ ನಿಗದಿತ ಸಮಯದಲ್ಲಿ ಹೊರಬೀಳುವಂತೆ ನೋಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next