ಕರಾಚಿ: ಪಾಕಿಸ್ಥಾನ ಆತಿಥ್ಯದ ಮುಂದಿನ ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ರದ್ದುಗೊಂಡಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ ಒಂದೇ ದಿನದಲ್ಲಿ ಈ ಕೂಟವನ್ನು ಜೂನ್ 2021ರ ಅವಧಿಯ ತನಕ ಮುಂದೂಡಲು ನಿರ್ಧರಿಸಲಾಗಿದೆ.
ಗುರುವಾರ ಏಶ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಈ ಕುರಿತು ಅಧಿಕೃತ ಪ್ರಕಟನೆ ನೀಡಿತು.
ಇದಕ್ಕೂ ಮೊದಲು ಗಂಗೂಲಿ ಹೇಳಿಕೆಗೆ ಪಿಸಿಬಿ ಖಾರವಾಗಿ ಪ್ರತಿಕ್ರಿಯಿಸಿತ್ತು. ಇದನ್ನು ಪ್ರಕಟಿಸುವುದು ಎಸಿಸಿಯೇ ಹೊರತು ಗಂಗೂಲಿ ಅಲ್ಲ, ಅವರು ವಾರಕ್ಕೊಂದು ಹೇಳಿಕೆ ನೀಡಿದರೆ ಅದಕ್ಕೆ ಯಾವುದೇ ಬೆಲೆ ಇರದು ಎಂದು ಪಿಸಿಬಿ ಮಾಧ್ಯಮ ನಿರ್ದೇಶಕ ಸಮಿಯುಲ್ ಹಸನ್ ಹೇಳಿದ್ದರು.
“ಏಶ್ಯ ಕಪ್ ಪಾಕಿಸ್ಥಾನದ ಆತಿಥ್ಯದಲ್ಲೇ ನಡೆಯಲಿದೆ. ಆದರೆ ಕೋವಿಡ್ ದಿಂದಾಗಿ ಇದು ಮುಂದುವರಿದೀತೇ ಹೊರತು ರದ್ದುಗೊಳ್ಳದು. ಇದಕ್ಕೆ ಸಂಬಂಧಿಸಿದ ಅಧಿಕೃತ ಹೇಳಿಕೆಯನ್ನು ಎಸಿಸಿಯೇ ನೀಡಬೇಕು’ ಎಂದು ಹಸನ್ ಹೇಳಿದ್ದರು. ಇದೀಗ ನಿಜವಾಗಿದೆ.