Advertisement

ಆ್ಯಶಸ್‌: ಗಬ್ಟಾದಲ್ಲಿ ಅಬ್ಬರಿಸಿದ ಪ್ಯಾಟ್‌ ಕಮಿನ್ಸ್‌

11:55 PM Dec 08, 2021 | Team Udayavani |

ಬ್ರಿಸ್ಬೇನ್‌: ಮಿಚೆಲ್‌ ಸ್ಟಾರ್ಕ್‌ ಅವರಿಂದ ಸರಣಿಯ ಪ್ರಥಮ ಎಸೆತದಲ್ಲೇ ವಿಕೆಟ್‌ ಬೇಟೆ, ನಾಯಕನಾಗಿ ಪ್ರಥಮ ಟೆಸ್ಟ್‌ ಪಂದ್ಯದಲ್ಲೇ 5 ವಿಕೆಟ್‌ ಸಾಧನೆಗೈದ ಕಮಿನ್ಸ್‌, ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸುವುದು ಅಸಾಧ್ಯವೇನಲ್ಲ ಎಂದಿದ್ದ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಅವರಿಂದ ಶೂನ್ಯ ಸಂಪಾದನೆ, 50.1 ಓವರ್‌ಗಳಲ್ಲಿ 147ಕ್ಕೆ ಪತನಗೊಂಡ ಇಂಗ್ಲೆಂಡ್‌…

Advertisement

ಇವೆಲ್ಲ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ ಆಸ್ಟ್ರೇಲಿಯದ ಪ್ರಭುತ್ವಕ್ಕೆ ಸಾಕ್ಷಿಯಾಗಿ ಪ್ರತಿಷ್ಠಿತ ಆ್ಯಶಸ್‌ ಸರಣಿಯ ರೋಮಾಂಚನವನ್ನು ಗರಿ ಗೆದರುವಂತೆ ಮಾಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ಜೋ ರೂಟ್‌ ನಿರ್ಧಾರ ಮೊದಲ ಎಸೆತದಲ್ಲೇ ಉಲ್ಟಾ ಹೊಡೆಯಿತು. ಸ್ಟಾರ್ಕ್‌ ಅವರ 142 ಕಿ.ಮೀ. ವೇಗದ ಎಸೆತವೊಂದು ರೋರಿ ಬರ್ನ್ಸ್ ಅವರ ಲೆಗ್‌ಸ್ಟಂಪ್‌ ಉಡಾಯಿಸಿತು! ಮುಂದಿನದು ಹ್ಯಾಝಲ್‌ವುಡ್‌ ಅವರ ಘಾತಕ ದಾಳಿ. ಅವರು ಮಲಾನ್‌ ಮತ್ತು ರೂಟ್‌ ವಿಕೆಟ್‌ಗಳನ್ನು ಬುಡಮೇಲು ಮಾಡಿದರು.

ಇವರಿಂದ ಸ್ಫೂರ್ತಿ ಪಡೆದ ಪ್ಯಾಟ್‌ ಕಮಿನ್ಸ್‌ 5 ವಿಕೆಟ್‌ ಬೇಟೆಯಾಡಿದರು. ಅವರ ನಾಯಕತ್ವಕ್ಕೆ ಕನಸಿನ ಆರಂಭ ವೊಂದು ಸಿಕ್ಕಿತ್ತು. ಟೀ ವೇಳೆಗೆ ಸರಿ ಯಾಗಿ ಇಂಗ್ಲೆಂಡ್‌ 147 ರನ್ನುಗಳ ಅಲ್ಪ ಮೊತ್ತಕ್ಕೆ ಕುಸಿದಿತ್ತು. ಆದರೆ ಮುಂದಿನ ಅವಧಿಯ ಆಟವನ್ನು ಮಳೆ ನುಂಗುವುದರೊಂದಿಗೆ ಆಸೀಸ್‌ ಬ್ಯಾಟಿಂಗಿಗೆ ಅವಕಾಶ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-147 (ಬಟ್ಲರ್‌ 39, ಪೋಪ್‌ 35, ಹಮೀದ್‌ 25, ಕಮಿನ್ಸ್‌ 38ಕ್ಕೆ 5, ಸ್ಟಾರ್ಕ್‌ 35ಕ್ಕೆ 2, ಹ್ಯಾಝಲ್‌ವುಡ್‌ 42ಕ್ಕೆ 2).

Advertisement

ಇದನ್ನೂ ಓದಿ:ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಮೊದಲ ಪಂದ್ಯದಲ್ಲೇ 5 ವಿಕೆಟ್‌ ಕೆಡವಿದ ವಿಶ್ವದ 14ನೇ ಹಾಗೂ ಆಸ್ಟ್ರೇಲಿಯದ 2ನೇ ಬೌಲರ್‌. 1894ರಷ್ಟು ಹಿಂದೆ ಇಂಗ್ಲೆಂಡ್‌ ಎದುರಿನ ಮೆಲ್ಬರ್ನ್ ಟೆಸ್ಟ್‌ನಲ್ಲಿ ಜಾರ್ಜ್‌ ಗಿಫೆನ್‌ ಮೊದಲ ಸಲ ಈ ಸಾಧನೆಗೈದಿದ್ದರು.
– ಕಮಿನ್ಸ್‌ ಆ್ಯಶಸ್‌ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿಸಿದ 10ನೇ ನಾಯಕ, ಆಸ್ಟ್ರೇಲಿಯದ 5ನೇ ಕ್ಯಾಪ್ಟನ್‌.
– ಕಮಿನ್ಸ್‌ ಇಂಗ್ಲೆಂಡ್‌ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು (38ಕ್ಕೆ 5).
– ರೋರಿ ಬರ್ನ್ಸ್ 2021ರ ಟೆಸ್ಟ್‌ ಪಂದ್ಯಗಳಲ್ಲಿ 6 ಸಲ ಖಾತೆ ತೆರೆಯದೆ ಔಟಾದರು. ಇವರಿಗಿಂತ ಮುಂದಿರುವವರು ಜಸ್‌ಪ್ರೀತ್‌ ಬುಮ್ರಾ ಮಾತ್ರ (7).
– ಬರ್ನ್ಸ್ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತ್ಯಧಿಕ 6 ಸಲ ಖಾತೆ ತೆರೆಯದೆ ಔಟಾದ ಆರಂಭಿಕ ಬ್ಯಾಟ್ಸ್‌ಮನ್‌ ಎನಿಸಿದರು. ಭಾರತದ ಪಂಕಜ್‌ ರಾಯ್‌ (1952) ಮತ್ತು ಇಂಗ್ಲೆಂಡಿನ ಮೈಕಲ್‌ ಆಥರ್ಟನ್‌ (1998) 5 ಸೊನ್ನೆ ಸುತ್ತಿದ ದಾಖಲೆ ಪತನಗೊಂಡಿತು.
– ಇಂಗ್ಲೆಂಡ್‌ 2ನೇ ಸಲ ಸರಣಿಯ ಪ್ರಥಮ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡಿತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಎದುರಿನ 2010ರ ಜೊಹಾನ್ಸ್‌ ಬರ್ಗ್‌ ಪಂದ್ಯದಲ್ಲಿ ಸ್ಟ್ರಾಸ್‌ ಇದೇ ಸಂಕಟಕ್ಕೆ ಸಿಲುಕಿದ್ದರು.
– ಆ್ಯಶಸ್‌ ಸರಣಿಯ ಪ್ರಥಮ ಎಸೆತದಲ್ಲೇ ವಿಕೆಟ್‌ ಉರುಳಿದ ದ್ವಿತೀಯ ನಿದರ್ಶನ ಇದಾಗಿದೆ. 1936ರಲ್ಲಿ, ಬ್ರಿಸ್ಬೇನ್‌ ಅಂಗಳದಲ್ಲೇ ಆಸ್ಟ್ರೇಲಿಯದ ಇರ್ನಿ ಮೆಕಾರ್ಮಿಕ್‌ ಮೊದಲ ಎಸೆತದಲ್ಲೇ ಸ್ಟಾನ್‌ ವರ್ದಿಂಗ್ಟನ್‌ ವಿಕೆಟ್‌ ಕೆಡವಿದ್ದರು.
– ಇಂಗ್ಲೆಂಡ್‌ ಆಟಗಾರರು ಈ ವರ್ಷದ ಟೆಸ್ಟ್‌ ಪಂದ್ಯಗಳಲ್ಲಿ ಅತೀ ಹೆಚ್ಚು ಸೊನ್ನೆ ಸುತ್ತಿದರು (46). ಭಾರತಕ್ಕೆ ದ್ವಿತೀಯ ಸ್ಥಾನ (34).
– ರೂಟ್‌ ನಾಯಕನಾಗಿ ಆ್ಯಶಸ್‌ ಸರಣಿಯಲ್ಲಿ 4ನೇ ಸಲ ಸೊನ್ನೆಗೆ ಔಟಾಗಿ ಮೈಕ್‌ ಬ್ರೇಯರ್ಲಿ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನಿಯಾದರು. 5 ಸಲ ಖಾತೆ ತೆರೆಯದ ಕಪ್ತಾನ ಬ್ರಾಡ್‌ಮನ್‌ ಅಗ್ರಸ್ಥಾನದಲ್ಲಿದ್ದಾರೆ.
– ಕಮಿನ್ಸ್‌ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗ್ಳಲ್ಲಿ ತಮ್ಮ ವಿಕೆಟ್‌ ದಾಖಲೆಯನ್ನು 75ಕ್ಕೆ ವಿಸ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next