ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕತೆ ಭಾವ ಬೂದಿ ಮುಚ್ಚಿದ ಕೆಂಡದಂತಿದೆ. ಅದನ್ನು ಹೋಗಲಾಡಿಸದೆ ವಿಶ್ವ ಕನ್ನಡ ಸಮ್ಮೇಳನಕ್ಕೆ 20 ಕೋಟಿ ರೂ.ವೆಚ್ಚ ಮಾಡುವುದರಿಂದ ಯಾವುದೇ ಪ್ರಯೋಜವಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ರಾಜ್ಯದ ಪ್ರತಿ ಮನೆ ಮನದಲ್ಲಿರುವ ಪ್ರತ್ಯೇಕ ಭಾವ ಹೋಗಲಾಡಿಸಲು ಕಾರ್ಯಕ್ರಮ ರೂಪಿಸಬೇಕು.
ಕನ್ನಡ ಭಾಷೆ, ಸಾಹಿತ್ಯ ಅಭಿವೃದ್ಧಿಗೆ ಕ್ರಮಕೈಗೊಂಡು, ಯುವಪೀಳಿಗೆಗೆ ವಾಸ್ತವಾಂಶ ಮನವರಿಕೆ ಮಾಡಿಕೊಡಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಹೇಳಿದರು. ಕಾಲೇಜು ಶಿಕ್ಷಣ, ವೃತ್ತಿ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಕನ್ನಡ ಮಾಧ್ಯಮದವರಿಗೆ ಮೊದಲ ಆದ್ಯತೆ ಎಂದು ಸರ್ಕಾರ ಆದೇಶ ಹೊರಡಿಸಬೇಕು. ಆಗ ಕನ್ನಡ ಮಾಧ್ಯಮ ಹಾಗೂ ಕನ್ನಡ ಭಾಷೆ ತನ್ನಿಂದತಾನೆ ಅಭಿವೃದ್ಧಿ ಹೊಂದುತ್ತದೆ.
ಆಗ ಏಕೀಕರಣ ಸಾರ್ಥಕತೆಯ ಜತೆಗೆ ಗೌರವ ಸಲ್ಲಿಸದಂತ್ತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಸಲಹೆ ನೀಡಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಮನುಬಳಿಗಾರ್, ಸಾಹಿತಿ ಡಾ.ವರದಾ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಾಲ್ವಡಿ ಹೆಸರಲ್ಲಿ ಪ್ರಶಸ್ತಿ ನೀಡಲಿ ಸರ್ಕಾರ: ಪ್ರಶಸ್ತಿ ಕೊಡುವುದಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸವಲ್ಲ. ಕನ್ನಡದ ಉಳಿವಿಗೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಜತೆಗೆ ಕನ್ನಡಾಭಿವೃದ್ಧಿ ಕುರಿತು ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ಕಸಾಪ ಅಧ್ಯಕ್ಷರು ಹೆಜ್ಜೆ ಇಡಬೇಕೆಂದು ಮನುಬಳಿಗಾರ್ ಅವರಿಗೆ ಸಲಹೆ ನೀಡಿದ ಬರಗೂರು ರಾಮಚಂದ್ರಪ್ಪ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಸಿಂಹಾಸನದಲ್ಲಿ ಕುಳಿತು ಸಂವೇದನೆಯನ್ನು ಕಾಪಾಡಿಕೊಂಡು ಜನಮುಖೀ ಆಡಳಿತ ನೀಡಿದ್ದರು. ಅವರ ಹೆಸರಿನಲ್ಲಿ ಸರ್ಕಾರವೇ ಪ್ರಶಸ್ತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಾಗದ ಮುಕ್ತವಲ್ಲ, ಭ್ರಷ್ಟ ಮುಕ್ತ ಇಲಾಖೆಯಾಗಲಿ: ನಾಡಗೀತೆಯ ಅವಧಿ, ರಾಷ್ಟ್ರಕವಿ ಗೌರವ ಯಾರಿಗೆ ನೀಡಬೇಕು ಎಂಬುದರ ಅಂತಿಮ ನಿರ್ಧಾರ ಹಲವು ದಿನಗಳಿಂದ ನೆನಗುದಿಗೆ ಬಿದ್ದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಗಳು ನಿಧಾನಗತಿ ನಡೆಯುತ್ತಿವೆ. ಅಗತ್ಯವಿರುವ ಕಲಾವಿದರ ನೆರವಿಗೆ ಇಲಾಖೆ ಬರುತ್ತಿಲ್ಲ. ಹಿರಿಯ ಕಲಾವಿದರಿಗೆ ಮಾಸಾಶನವೂ ಸರಿಯಾಗಿ ಸಿಗುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕಾಗದ ಮುಕ್ತ ಮಾಡುವ ಬದಲು ಭ್ರಷ್ಟಾಚಾರ ಮುಕ್ತ ಗಿ ಮಾಡುವ ಅಗತ್ಯವಿದೆ ಎಂದರು.